ಸಂಬಂಧಗಳು ಅಂದು…ಇಂದು…

ಮಾನವ ಜನ್ಮವು ದೊಡ್ಡದು ಎಂಬುದು
ದಾಸವರೇಣ್ಯರ ಅಭಿಮತವು
ಮಾನವೀಯತೆಯೇ ಇಲ್ಲದ ಜನರು
ಮರೆತು ನಡೆಯುತಿಹರೀ ದಿನವು.

ಸಂಬಂಧಗಳಿಗೆ ಬೆಲೆಯನು ನೀಡುತ
ಬಾಳುತಿದ್ದರಂದಿನ ಜನರು
ಸಂಬಂಧಗಳೇನೆಂಬುದು ತಿಳಿಯದೆ
ಬೀಳುತಿರುವರಿಂದಿನ ಜನರು.

ತಂದೆ ತಾಯಿಗಳೇ ದೇವರು ಎನ್ನುತ
ಪೂಜೆಯ ಮಾಡಿದುದಾ ಕಾಲ
ತಮ್ಮಯ ಸ್ವಾರ್ಥಕೆ ಅವರನು ವೃದ್ಧಾ
ಶ್ರಮಕೆ ಸೇರಿಸುವುದೀ ಕಾಲ.

ಶಿಷ್ಯರು ಗುರುಗಳ ಪಾದಕೆ ವಂದಿಸಿ
ವಿದ್ಯೆಯ ಕಲಿತರು ಆ ಯುಗದಿ
ಗುರುಗಳೇ ಶಿಷ್ಯರ ಕಾಲಿಗೆ ಎರಗುವ
ಅವಸ್ಥೆ ಒದಗಿದೆ ಈ ಜಗದಿ.

ಸಭ್ಯತೆ ಸಂಸ್ಕೃತಿ ಸಂಸ್ಕಾರ ವರಿತು
ನಾಗರಿಕರಾದರು ಅಂದು
ಅಸಭ್ಯ ನಡತೆಯ ತೋರಿಸಿ ನಡೆಯುತ

ಅನಾಗರಿಕರಾಗುವರಿಂದು
ಮಹಾಭಾರತ ರಾಮಾಯಣಗಳು
ನೈತಿಕತೆಯನು ಸಾರಿದವು
ಮನಸನು ಕೆಡಿಸುವ ಹವ್ಯಾಸಗಳು
ಅನೈತಿಕತೆಯನು ಮೆರೆಸುವವು.

ಹಿರಿಯರು ತೋರಿದ ಸನ್ಮಾರ್ಗದಲಿ
ನಡೆಯದೆ ಜನ ಹಾಳಾಗುವರು
ಬದುಕನು ಯಾಂತ್ರಿಕವಾಗಿಸಿ ತಮ್ಮಯ
ಸಂತೋಷವನೇ ಮರೆಯುವರು.

ಒಳ್ಳೆಯ ಬಾಂಧವ್ಯಗಳನು ಪಡೆವುದು
ಪೂರ್ವ ಜನ್ಮದ ಪುಣ್ಯವದು
ಬಂಧು ಬಾಂಧವರು ಸ್ನೇಹಿತರಿಲ್ಲದೆ
ಜೀವನವೇ ಬರಡಾಗುವುದು.


ಜಿ.ಎಸ್.ಗಾಯತ್ರಿ
ಶಿಕ್ಷಕಿ, ಬಾಪೂಜಿ ಶಾಲೆ
ಹರಿಹರ.

error: Content is protected !!