ದೈವಬಲ…

ನಮ್ಮೂರ ಜನ ಬೆಣ್ಣೆಯಂಥವರು
ಹುಳಿ ಹಿಂಡುವ ಮಂದಿಗೂ
ಕೆನೆ ಮೊಸರು ಕೊಟ್ಟು
ಮಂದನೆಯ ಮಜ್ಜಿಗೆ ನೀಡಿ ತಂಪೆರೆವ
ಹಾಲು ಮನದವರು
ತಪ್ಪುಗಳ ಕ್ಷಮಿಸಿ ಕಡು ಕಷ್ಟಕೆ ಕರಗಿ
ಪರರ ನೋವಿಗೆ ಕರುಣೆ ತೋರಿ
ದೇವರ ಅಭಿಷೇಕದ ತುಪ್ಪವಾದವರು
ಬಾ ದೇವ ಕಾಪಾಡು ಎಲ್ಲರನೂ ಕೈ ಹಿಡಿದು.
ನಮ್ಮೂರಿನ ಜನ ದೇವನಾಂಪ್ರಿಯರು
ದಾನ ಧರ್ಮದ ಗುಣ ಮೆರೆದು
ಪರೋಪಕಾರಕೆ ಮುಂದಾಗಿ
ಹಗೆತನವ ಆಚೆಗಿಟ್ಟು ಪ್ರೇಮದಿ ಸಕಲರ ತಬ್ಬಿ
ಹೃದಯ ವೈಶಾಲ್ಯತೆ ತೋರಿ
ಹಸನಾದ ಬದುಕಿಗೆ ಹರಸುವ ದೈವಿಜನರು
ಬಾ ದೇವ ಕಾಪಾಡು ಎಲ್ಲರನೂ ಕೈ ಹಿಡಿದು.
ನಮ್ಮೂರ ಜನ ದೈವತ್ವಕೆ ಶರಣಾದವರು
ಶ್ರದ್ಧಾ ಭಕ್ತಿ ಸನ್ನಡತೆಗೆ ಮನ್ನಣೆ ನೀಡಿದವರು
ಬಡತನ ಸಿರಿತನದಲೂ ಸ್ಥಿತಪ್ರಜ್ಞೆ ತೋರಿ
ಅಹಮಿಕೆ ಬದಿಗಿಟ್ಟು ಏಕತೆಯಲಿ ನಡೆದು
ಹಾಲಾಹಾಲವನೂ ಸಹಿಸಿ
ಸರ್ವರಿಗೂ ಶ್ರೀರಕ್ಷೆ ಶ್ರೇಯಸ್ಸು ಬಯಸಿ
ದೇವನಗರಿ ಹೆಸರಿಗೆ ಕೀರ್ತಿ ಕಳಸವಾದವರು
ಇಂದು ಕೊರೋನಾ ಭೀತಿಯಲಿ ನಲುಗಿಹರು
ಬಾ ದೇವ ಕಾಪಾಡು ಎಲ್ಲರನೂ ಕೈ ಹಿಡಿದು.


ಗಂಗಾಧರ ಬಿ ಎಲ್ ನಿಟ್ಟೂರ್ 
[email protected]

error: Content is protected !!