ಎಲ್ಲಿಯೂ ನಿಲ್ಲದ ಯಾರ ಮಾತೂ
ಕೇಳದ ಓಡುವ ಮೋಡಗಳು….
ಕಾಣದ ಕಂಬನಿಯ ಹಾಡುಗಳು!
ಹುಲಿ ಸಿಂಹ ಚಿರತೆಗಳ ದಾಳಿ ದಾಪುಗಾಲಿಕ್ಕುತ
ಸಾವು ಬೆನ್ನಿಗಿದ್ದರೂ ಆಡುತ ಅಂಕೆ-ಶಂಕೆಯಿಲ್ಲದೇ
ಚಿನ್ನಾಟದಿ ಮೈ ಮರೆವ ಜಿಂಕೆಗಳು…
ಪ್ರೀತಿಯೋ ಸ್ನೇಹವೋ ಪ್ರೇಮವೋ ಕಾಮವೋ ಉದಯ ರವಿಯ ಕಿರಣದ
ಸ್ಪರ್ಶಕೆ ಅರಳುತ ನಕ್ಕು ನಲಿದು
ಸಂಜೆಗೆ ಬಾಡುವ ಹೂವುಗಳು…..
ಕಾಲದ ಚಿಮ್ಮು ಹಲಗೆಯಲಿ ಬೆಂದು
ನೊಂದು ಮೋಸಕ್ಕೆಡೆಯಾಗಿ ದಾಸ್ಯಕ್ಕಡಿಯಾಗಿ ಅಪಹಾಸ್ಯದ ಲಾಸ್ಯದಿ
ಸುರುಳಿ ಸಿಂಬೆಯಾಗಿ ಕೆರಳುವ ಹಾವುಗಳು..
ಮಾನಸ ಬಯಲಲಿ ಬೆಳೆದು ನಿಂತ
ಹೊಲ-ಗದ್ದೆಗಳನಾಯ್ದು ಮೇಯುತ
ನಾಡಿನ ನಿದ್ದೆಗೆಡಿಸಿ ಕಾಡಿಗೆ ಮರಳುವ
ಅಂಕುಶವಿರದ ಆನೆಯ ಹಿಂಡುಗಳು…..
ಅಪಾಯದ ಅರಿವಿಲ್ಲದೇ ಮೇವಿನ
ಗಮನಕೆ, ಕಾವಿನಾಸೆಗೆ ಚದುರಿ ಚಿಲ್ಲರೆಯಾದ ಮನದ ಜಾಡು;
ಸುಡುಗಾಡು – ಸುತ್ತಿ ಬಳಲಿ ಬೆಂಡಾದ
ಗುಂಪನಗಲಿದ ಗೋವುಗಳು.
ಊರೆಲ್ಲಾ ಉಂಡು ಮಲಗಿದ
ಮೇಲಿಂತಿರುಗುವ ಮೌನದ ಠಾವುಗಳು…..
ಈ….ಸಂಬಂಧಗಳೇ ಹೀಗೆ…!?
ಮಹಾಂತೇಶ್.ಬಿ.ನಿಟ್ಟೂರು,
ದಾವಣಗೆರೆ.
[email protected]