ಒಂದಿಷ್ಟು ಉಸಿರಾಡಲು ಬಿಡು

ಅದೇನು ಸಡಗರ, ಅದೇನು ಸಂಭ್ರಮ
ಎಲ್ಲೆಡೆ ಮಹಿಳೆಗೆ ಮಾನ ಸನ್ಮಾನ.

ಮಹಿಳಾ ದಿನಾಚರಣೆಯ ಮಾರ್ಚ್‌ 8 ರಂದು
ಬಣ್ಣ ಬಣ್ಣದ ಮಾತುಗಳು ಹಾರ ತುರಾಯಿಗಳು.

ಅದೇನು ಹೆಣ್ಣನ್ನು ಹೊಗಳುವ ಪರಿ
ಓ ಹೆಣ್ಣೆ ಇದೆಲ್ಲವೂ ದಿಟವೆಂದು ನಂಬದಿರು
ಇದೆಲ್ಲವೂ ಒಂದು ದಿನದ ಗೌರವ ಮಾತ್ರ.

ಎಷ್ಟೊಂದು ವೈಭವೀಕರಣ, ಅರಿಯಲಾರೆ
ಇದು ಗಂಡು ತನ್ನ ಸ್ವಾರ್ಥ ಸಾಧನೆಗೆ ಮಾಡಿರುವ ಸಂಚೆಂದು.

ಬಲಿಯಾಗದಿರು ಸೀತೆ ಸಾವಿತ್ರಿ ಅಹಲ್ಯೆ ಎಂಬ ಹೊಗಳಿಕೆಗೆ
ನಂಬದಿರು ತೋರಿಕೆಯ ಪ್ರೀತಿ ಡಂಭಾಚಾರವ. 

ಸೀತೆ ಅನುಭವಿಸಲಿಲ್ಲವೇ 14 ವರ್ಷಗಳ ವನವಾಸ
ಲವಕುಶರೊಂದಿಗೆ ಪರಿತ್ಯಕ್ತೆಯ ಬದುಕ. 

ದ್ರೌಪದಿ ಬೇಡಲಿಲ್ಲವೇ ಶ್ರೀ ಕೃಷ್ಣನ ಮಾನ ರಕ್ಷಣೆಗಾಗಿ
ಕಲ್ಲಾಗಲಿಲ್ಲವೇ ಅಹಲ್ಯೆ ತನ್ನದಲ್ಲದ ತಪ್ಪಿಗಾಗಿ.

ಬೇಡ ನನಗೆ ಯಾವ ಪಟ್ಟ ಬಿರುದು ಬಾವಲಿಗಳು
ನಾನು ಹೆಣ್ಣಾಗಿ ಬೇಡುವುದಿಷ್ಟು. 


ನನ್ನನ್ನು ಒಬ್ಬ ವ್ಯಕ್ತಿಯಾಗಿ ಬದುಕಲು ಬಿಡು
ನನ್ನಲ್ಲೂ ಹಲವು ಸುಂದರ ಕನಸುಗಳಿವೆ.

ನಿನ್ನ ಭೋಗ ಲಾಲಸೆಯ ವಸ್ತುವಾಗಲಾರೆ
ಒಂದಿಷ್ಟು ಹೊರಗಿನ ಗಾಳಿಯ ಉಸಿರಾಡಲು ಬಿಡು.


ಮಲ್ಲಮ್ಮ ನಾಗರಾಜ್
ದಾವಣಗೆರೆ.

 

error: Content is protected !!