ಪಾಠ…

ಕಣ್ಣಿಗೆ ಕಾಣದ ಜಂತುವೊಂದು
ಜಗಕ್ಕೆ ಹೊಸ ಪಾಠವ ಕಲಿಸಿದೆ
ಹೆಣ್ಣು ಹೊನ್ನು ಮಣ್ಣು ತನ್ನದೆಂದು
ಮೆರೆದವರ ದರ್ಪವನು ಅಡಗಿಸಿದೆ.

ಜನನಿ ಜನ್ಮಭೂಮಿ ಮರೆತು ಹೋದ
ಜನರನು ಮರಳಿ ಗೂಡಿಗೆ ಕರೆಸಿದೆ
ಜನ್ಮದಾತರ ಕಣ್ಣೀರು ಹಾಕಿಸಿ ಮೆರೆದ
ಜನರಿಗೆ ಹೆತ್ತವರ ಬೆಲೆಯನು ತಿಳಿಸಿದೆ.

ನೆಲ, ಜಲಚರ ಜೀವಿಗಳ ತಿಂದು ತೇಗಿದ
ನರ ರಾಕ್ಷಸರಿಗೆ ಜೀವ ಭಯ ಮೂಡಿಸಿದೆ
ಕಾಣದ ಕಡಲಿಗೆ ಹಂಬಲಿಸಿದವರಿಗೆ
ಉಪ್ಪು ನೀರು ಕುಡಿಸಿ ಬುದ್ಧಿ ಹೇಳಿದೆ.

ಮಂದಿರ ಚರ್ಚ್ ಮಸೀದಿಯ ದೇವ್ರುಗಳ
ಮರೆಸಿ ವೈದ್ಯರನ್ನೇ ದೇವ್ರೆಂದು ಸಾರಿದೆ
ಅರಮನೆಯಲ್ಲಿ ಸುಖದಿ ಮಲಗಿದ್ದವರಿಗೆ
ನೆರೆಮನೆಯವರ ನೆನಪು ಮಾಡಿದೆ.

ಪ್ರಕೃತಿಯನು ವಿಕೃತಗೊಳಿಸಿದವರಿಗೆ
ಪ್ರಕೃತಿಯ ಮಹತ್ವವನ್ನು ತಿಳಿಸಿದೆ
ಬಲಾಢ್ಯರೆಂದು ಕೊಬ್ಬಿದ ರಾಷ್ಟ್ರಗಳಿಗೆ
ಬಲವಾದ ಪೆಟ್ಟನ್ನು ಕೊಡಲು ಬಂದಿದೆ.

ಜಾತಿ ಮತ ಧರ್ಮಗಳ ಪೊರೆಯಿಂದ
ಕುರುಡರಾದವರಿಗೆ ಬೆಳಕು ನೀಡಿದೆ
ಯುದ್ಧ ಭೀಭತ್ಸ ಉತ್ಸಾಹಿಗಳೆದುರು
ಮದ್ದು ಗುಂಡಿಲ್ಲದೆ ಯುದ್ಧವ ಗೆದ್ದಿದೆ.

– ಶಿವಮೂರ್ತಿ.ಹೆಚ್.
ಕನ್ನಡ ಶಿಕ್ಷಕರು, ದಾವಣಗೆರೆ.
shivamurthyh2012@gmail.com

error: Content is protected !!