ಭೂರಮೆಯು ಹಸಿರುಡುಗೆಯ ತೊಟ್ಟು
ಭಾಸ್ಕರನ ರಶ್ಮಿಗೆ ನಾಚಿ ನಿಂತಿಹಳು
ಮರಗಿಡಗಳೆಲ್ಲ ಧರಿಸಿ ಅರಿಶಿನ ಬೊಟ್ಟು
ಧರಿತ್ರಿ ನವ ಸಂವತ್ಸರಕೆ ಸ್ವಾಗತಿಸಿಹಳು.
ಸೂರ್ಯನ ಗತಿಯಾಧರಿಸಿ ಸೌರಮಾನವು
ಚಂದ್ರನ ಗತಿ ಪರಿಗಣಿಸಿ ಚಾಂದ್ರಮಾನವು
ಉತ್ತರ ದಕ್ಷಿಣದಿ ಭಿನ್ನ ಯುಗಾದಿ ಆಚರಣೆಯು
ಸಡಗರ ತುಂಬಿ ವರ್ಷಾರಂಭಕ್ಕೆ ಪ್ರೇರಣೆಯು.
ದಾಶರಥಿಯು ಮಹಾಬಲಿಯ ವಾಲಿ ಸಂಹರಿಸಿ
ಸುಗ್ರೀವನಿಗೆ ಕಿಷ್ಕಿಂಧ ರಾಜ್ಯ ನೀಡಿದ ದಿನವು
ಶ್ರೀರಾಮನು ದಶಕಂಠನ ದರ್ಪದ ಸೊಲ್ಲಡಗಿಸಿ
ಸೀತಾಮಾತೆಯ ಶೋಕ ವಿಮೋಚಿಸಿದ ದಿನವು.
ಶಕರು ಹೂಣರನು ಗೌತಮೀಪುತ್ರ ಸೋಲಿಸಿ
ಶಾಲಿವಾಹನ ಶಕೆಯ ಆರಂಭಿಸಿದ ಗಳಿಗೆಯು
ಶಶಾಂಕನ ದರ್ಶನ ಪಡೆದು ಮನೆಮಂದಿಯೆಲ್ಲ
ಶಶಿಧರನ ಪೂಜಿಸಿ ಸವಿಯುವ ಹೋಳಿಗೆಯು.
ರಾಶಿಗಳ ಫಲಾಫಲಗಳ ಕೇಳುವ ಕಾಲವು
ನಕ್ಷತ್ರಗಳ ಪಲ್ಲಟ ನೋಡುವ ಸಮಯವು
ನವ ಸಂವತ್ಸರದಿ ಹೊಸ ಸಂಕಲ್ಪದ ಕ್ಷಣವು
ನವ ಸಂಭ್ರಮದಿ ಹೊಸ ಬಾಳಿನ ಆರಂಭವು.
ಜೀವನ ಕಹಿ ಸಿಹಿಗಳ ಸಮರಸ ಪಾಕವು
ಬೇವು ಬೆಲ್ಲವ ಹಂಚಿ ತಿಳಿಯುವ ನಾವು
ಬಡವ ಬಲ್ಲಿದ ಬೇಧವ ಅಳಿಸ ಬನ್ನಿರಿ
ಬಾಳ ಚದುರಂಗದಾಟ ಆಡಿ ಕಲಿಯಿರಿ.
ಶಿವಮೂರ್ತಿ.ಹೆಚ್., ಕನ್ನಡ ಶಿಕ್ಷಕರು
ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಸಿಯಲ್
ಸ್ಕೂಲ್, ಅನುಭವ ಮಂಟಪ, ದಾವಣಗೆರೆ.
[email protected]