ಕಲಿಯುಗವಿದು ಕಲಿಯುಗ….
ಮಣ್ಣಲಿ ಬೆಳೆದ ಅನ್ನವ ತಿಂದು ತೇಗಿದ ಯಾವುದೇ ಸರ್ಕಾರ,
ಅದೇ ಮಣ್ಣಿನ ಒಡೆಯ ರೈತನ ಬಾಯಿಗೆ ಮಣ್ಣಾಕಿ ಮೆರೆಯುತಿಹುದು.
ದೇಶದ ಬೆನ್ನೆಲುವೆಂಬ ಕಿರೀಟವನಿಟ್ಟು,
ರೈತನ ಬೆನ್ನೆಲುಬೇ ಮುರಿದು, ದೇಶದ ಬುಡಕ್ಕೆ ಬೆಂಕಿಯನಿಟ್ಟು,
ಆತನ ಶಾಪಕ್ಕೆ, ನಿಟ್ಟುಸಿರಿಗೆ, ಆಕ್ರೋಶಕ್ಕೆ ಗುರಿಯಾಗಿಹುದು.
ಗಂಟಲಲಿ ಇಳಿಸಿದ ಅನ್ನಕ್ಕೆ ಕಾರಣರಾದವರ ಗಂಟಲಿಗೆ
ಹಗ್ಗವ ಬಿಗಿದು, ನೇಣಿಗೆ ಕಾರಣವಾಗಿ ಮೆರೆಯುತಿಹುದು
ರಾಮ ರಾಜ್ಯದಲಿ ಇದೆಂತಾ ರಾವಣರಾಜ್ಯವಾಗಿಹುದು,
ಇಂತಹ ಢೋಂಗಿಯರಿಗೆ ಧಿಕ್ಕಾರ.
ಮೊದಲು ಮತಕ್ಕೆ ಭಿಕ್ಷುಕರಂತೆ ನಟಿಸಿ, ನಂತರ ಭಕ್ಷಕರಾಗಿ
ಖಾವಿಯ ಬಲದೊಳು ಖಾಕಿಯನ್ನುಪಯೋಗಿಸಿ
ಬಡವನ ಬಡೆದು ತಿನ್ನೋ ಭಂಡರಿಗೆ ಧಿಕ್ಕಾರ.
ಬ್ರಿಟೀಷರಿಗೂ ಈ ವೇಷಧಾರಿಗಳಿಗೂ ವ್ಯತ್ಯಾಸವಿಹದು
ಅನ್ನದಾತನೆಂದರೆ-ಅನ್ನದಾನಿ, ಜೀವದಾನಿ,
ಅಂತವನ ಜೀವವನ್ನೇ ಹಿಂಡುತ್ತಿರುವ ಭ್ರಷ್ಟರಿಗೆ ಧಿಕ್ಕಾರ.
ಅನ್ನದಾತನ ರಕ್ತವನ್ನೀರಿ, ಕೆಂಪು ಕೋಟೆಯ ಮೇಲೆ
ಧ್ವಜವನ್ನೇರಿಸಿದರೆ, ಬುನಾದಿ ಭೂತಾಯಿ ಮೆಚ್ಚಳು
ಕಾಣುವ ದೇವರು-ರೈತನ ಕಾಲೆಳೆದು,
ಕಾಣದ ದೇವರ ಪಾದ ಸ್ಪರ್ಷಿಸುವ ಮೌಢ್ಯತೆಗೆ ಧಿಕ್ಕಾರ.
ರೈತನ ತಾಳ್ಮೆಯಕಟ್ಟೆ ಹೊಡೆದರೆ, ಭೂ ತೆರೆದಂತೆ
ಭೂ ಕಂಪಿಸಲಿ, ತನ್ನ ಗರ್ಭದ ಜ್ವಾಲೆಯಲಿ ಇಂತಹ
ವಿಷಜಂತುಗಳನ್ನು ಸ್ಪರ್ಷಿಸಲಿ.
ಇಂದೇ ಭೂತಾಯಿ, ಗಂಗೆ, ವಾಯು, ಸೂರ್ಯರೆಲ್ಲಾ ಒಂದಾಗಿ
ಅನ್ನದಾತನಿಗೆ ಆಶೀರ್ವದಿಸಲಿ, ರೈತನಿಗೆ ನ್ಯಾಯ ಸಿಗಲಿ.
ನ್ಯಾಯ, ಧರ್ಮದ ದಿನಗಳು ಮತ್ತೆ ಮರುಕಳಿಸಲಿ
ಸುವರ್ಣಯುಗದ ಕಹಳೆ ಮತ್ತೆ ಮೊಳಗಲಿ.
ನೀಮಾ ಡಿ.ಆರ್.
ಇಂಗ್ಲಿಷ್ ಉಪನ್ಯಾಸಕರು,
ದಾವಣಗೆರೆ.
neemadr83@gmail.com