ಓ…ಮೋಹದ ಮೋಡವೇ
ಆವರಿಸದಿರೆನ್ನ ಮನದಾಗಸವ….
ನಿಚ್ಚಳದ ನಿಚ್ಚಣಿಕೆ ಏರಿ
ಸಾಧನೆಯ ಶಿಖರ ತಲುಪಿ
ಸಂಸ್ಕಾರ, ಸಂಸ್ಕೃತಿ, ಸಂಪ್ರೀತಿಯ
ಬಾವುಟ ಹಾರಿಸುವ ತನಕ!
ಓ…ವ್ಯಾಮೋಹದ ಕಾರ್ಮೋಡವೇ
ಬಿರುಮಳೆಯಾಗಿ ಸುರಿಯದಿರು….
ಕೊಚ್ಚಿ ಹೋಗದಿರಲಿ ಕನಸುಗಳ ಸಸಿಮಡಿ
ಕೆಸರುಂಡು ಹಸಿರಾಡಿ ಹಾಲ್ದೆನೆ ರಾಶಿಯ ಬೆಳ್ಳಿಚುಕ್ಕಿ
ನೆಲ-ಮುಗಿಲು ಬೆಳಗಿ ಮೂಡುವ ತನಕ!
ಓ..ಸಮ್ಮೋಹದ ಮೋಹನ ಮುರುಲಿಯೇ
ಕಾಡದಿರು, ಹಾಡದಿರಪಸ್ವರವ
ಭ್ರಮೆಯ ಮುಸುಕಿನೊಳ ಭ್ರಮರದಂತೆ….!?
ನುಡಿಸು ರಾಗ-ತಾಳ-ಲಯ-ಸ್ವರದಿ
ನಿಂದನೆ; ವಂದನಾ ರೂಪವಾಗಿ
ಅವಮಾನವದೋ ಸನ್ಮಾನವಾಗಿ
ಮಾನವತೆಯ ತತ್ವ ಮೊದಲಾಗಿ
ಸಮಾನತೆಯ ಮಹತ್ವ ಮೇಲಾಗಿ
ನಂಜಿನ ಕೊರಡು ಗಂಧವಾಗಿ;
ಪರಿಮಳದ ಪಲ್ಲವಿ ಪಲ್ಲವಿಸುವತನಕ
ಕ್ರೌರ್ಯದ ಕಾಳಿ ಮರ್ಧನ ಗೈವತನಕ!?
ಮಹಾಂತೇಶ್.ಬಿ.ನಿಟ್ಟೂರ್
ದಾವಣಗೆರೆ.
[email protected]