ಕೊರೊನಾ ವೈರಸ್‌ನ ರಾಕ್ಷಸ ಗುಣಗಳು ಮತ್ತು ಆರೋಗ್ಯ ರಕ್ಷಣೆ

ಭಾರತದಲ್ಲಿ  ಕೊರೊನ ವೈರಸ್ ಮಹಾಮಾರಿಯ ಅಟ್ಟಹಾಸ ಅಡಗಲು ಎರಡನೇ ‘ಲಾಕ್ ಡೌನ್’ ಜಾರಿಯಲ್ಲಿದೆ. ಇದು ಅಳಿವು, ಉಳಿವಿನ ಪ್ರಶ್ನೆ. ಶತಮಾನಕ್ಕೊಮ್ಮೆ ಜರುಗುವ ವಿದ್ಯಮಾನ. ಈಗ ನಮ್ಮ ಕುತ್ತಿಗೆಗೆ ಬಂದು ನಿಂತಿದೆ. ಈ ಸಂದರ್ಭದಲ್ಲಿ ದೀರ್ಘಕಾಲಿಕ ಕಾಯಿಲೆಗಳಾದ ಸಕ್ಕರೆ, ಬಿ.ಪಿ., ಹೃದಯ ಸಂಬಂಧಿ ಮತ್ತಿತರೆ ಕಾಯಿಲೆಗಳನ್ನು ನಿಭಾಯಿಸುವುದು ಸವಾಲೇ ಸರಿ! ಏಕೆಂದರೆ ಈ ಕಾಯಿಲೆಗಳಿರುವ ಅಸಂಖ್ಯಾತ ನಾಗರಿಕರು ವೈದ್ಯಕೀಯ ನೆರವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿರಬಹುದು. ಅವರಿಗೆ ಕೆಲವು ಸಲಹೆಗಳನ್ನು ಕೊಡುವುದರ ಜೊತೆಗೆ ಇಷ್ಟೊಂದು ಜನರ ಸಾವಿಗೆ ಕಾರಣವಾಗಿರುವ ಕೋವಿಡ್-19 ವೈರಸ್‌ನ ರಾಕ್ಷಸ ಗುಣ ಏನೆಂದು ನೋಡೋಣ.

ವೈರಸ್ ಜೀವಾಣು, ಸೋಂಕಿಗೆ (infection) ಕಾರಣವಾಗುವ ಅತಿಸಣ್ಣ ಮತ್ತು ಅತಿ ಸರಳ ರಚನೆಯ ಸೂಕ್ಷ್ಮಜೀವಿ. ಎಲೆಕ್ಟ್ರಾನ್ ಸೂಕ್ಷ್ಮ ದರ್ಶಕದ ಮೂಲಕ ನೋಡಿದಾಗ ಇದರ ರಚನೆ  ಹೀಗಿದೆ – ಡಿಎನ್ಎ ಅಥವಾ ಆರ್ ಎನ್ ಎ  ಎಂಬ ಜೀವಕಣ (gene) ಅದರ ಮೇಲೆ ಪ್ರೋಟೀನ್‌ ಕವಚ, ಈ ಕವಚ ವಿವಿಧ ಆಕಾರ ಪಡೆದು ಕೊಳ್ಳುವುದರಿಂದ ಇವುಗಳ ಜಾತಿಯನ್ನು ಗುರುತಿಸಲು ಸಾಧ್ಯ. ಕೊರೊನಾ  ಜಾತಿಯ ವೈರಸ್ ನ ಕವಚ ಬ್ರಿಟಿಷ್ ರಾಣಿಯ ಕಿರೀಟ (crown) ಹೋಲುವುದರಿಂದ “ಕೊರೊನಾ” ವೈರಸ್ ಎಂಬ ಹೆಸರು ಬಂದಿದೆ.

ಕೊರೊನಾ ವೈರಸ್‌ನ ರಾಕ್ಷಸ ಗುಣಗಳು ಮತ್ತು ಆರೋಗ್ಯ ರಕ್ಷಣೆ - Janathavani

ಕೆಲವೇ ಸೆಕೆಂಡ್ ಅಥವಾ ನಿಮಿಷಗಳ ಕಾಲ ಬದುಕಬಲ್ಲ ಕೊರೊನಾ ವೈರಸ್, ಸಂಕೀರ್ಣ ರಚನೆಯ ಹಾಗೂ ಪ್ರಬಲ ರೋಗ ನಿರೋಧಕ ಶಕ್ತಿ ಹೊಂದಿರುವ ಮಾನವನ ದೇಹವನ್ನು ಹೇಗೆ ಆಕ್ರಮಣ ಮಾಡಿ, ಇಷ್ಟೊಂದು ಜನರ ಸಾವಿಗೆ ಕಾರಣವಾಗುತ್ತದೆ ಎಂಬುದನ್ನು ನೋಡೋಣ. ವೈರಸ್ ಗಳಲ್ಲಿ ಗಂಡು, ಹೆಣ್ಣು ಎಂಬುದಿಲ್ಲ, ಸಂತಾನೋತ್ಪತ್ತಿ ಸಹ ಇರುವುದಿಲ್ಲ. ಆದರೆ ‘ಜೆರಾಕ್ಸ್ ಕಾಪಿ’ ತೆಗೆದ ಹಾಗೆ ತಮ್ಮ ಪ್ರತಿರೂಪ (replication) ಪಡೆದುಕೊಳ್ಳುತ್ತದೆ. ಅದಕ್ಕೆ ಒಂದು ಜೆರಾಕ್ಸ್ ಮೆಷಿನ್ ಬೇಕು ತಾನೆ? ಅದುವೇ ಜೀವಕೋಶ (cell). ಯಾವುದೇ ಜೀವಂತ ಪ್ರಾಣಿಯ (ಮನುಷ್ಯನೂ ಸೇರಿ) ಜೀವಕೋಶವನ್ನು ಆಶ್ರಯಿಸಿ ಅದರ ಸಹಾಯದಿಂದ ಈ ವೈರಸ್ ಕೆಲವೇ ನಿಮಿಷ ಅಥವಾ ಗಂಟೆಗಳಲ್ಲಿ  ಕೋಟ್ಯಾಂತರ ಪ್ರತಿರೂಪಗಳನ್ನು ಪಡೆಯುತ್ತದೆ. ಈ ಪ್ರತಿರೂಪ ಮೂಲ ವೈರಸ್‌ನ ತದ್ರೂಪವಾಗುತ್ತದೆ. ಹೀಗೆ ಮನುಷ್ಯನ ಜೀವಕೋಶಗಳನ್ನು ಆಶ್ರಯಿಸಿ ದ್ವಿಗುಣಗೊಳ್ಳುವ ಈ ವೈರಸ್ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ (ಹಿರಿಯ ನಾಗರಿಕರು, ಸಕ್ಕರೆ ಕಾಯಿಲೆ, ಹೃದಯ ಕಾಯಿಲೆಯವರು ಇತ್ಯಾದಿ) ಇಡೀ ದೇಹವನ್ನು ಆಕ್ರಮಿಸಿ ಜೀವಕೋಶಗಳನ್ನು ನಾಶ ಮಾಡುವುದಲ್ಲದೆ ಅವರ ಸಾವಿಗೂ ಕಾರಣವಾಗಬಹುದು.  

ಕೋವಿಡ್-19 ವೈರಸ್ ಪೀಡಿತ ವ್ಯಕ್ತಿ ಸೀನಿದಾಗ, ಕೆಮ್ಮಿದಾಗ ಸಮೀಪವಿರುವ ಇನ್ನೊಬ್ಬ ವ್ಯಕ್ತಿಯ ಮೂಗಿನ ಹೊಳ್ಳೆಗಳ ಮುಖಾಂತರ ದೇಹವನ್ನು ಸೇರಿ ಮುಂದೆ ಗಂಟಲು, ಶ್ವಾಸಕೋಶ, ಕರುಳು ಮತ್ತು ರಕ್ತದ ಮೂಲಕ ಕೆಲವೇ ದಿನಗಳಲ್ಲಿ ಇಡೀ ದೇಹವನ್ನೇ ಆಕ್ರಮಿಸಿಕೊಳ್ಳುತ್ತವೆ.  ಈ ಸಂದರ್ಭಗಳಲ್ಲಿ ಕೆಮ್ಮು, ಮೂಗು ಕಟ್ಟುವುದು, ಜ್ವರ, ಗಂಟಲು ನೋವು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ, ಉಸಿರಾಟದ ತೊಂದರೆ, ಭೇದಿ, ಎದೆನೋವು, ವಾಸನೆ ಮತ್ತು ರುಚಿ ಗೊತ್ತಾಗದೇ ಇರುವುದು, ತುಟಿ ಮತ್ತು  ಮುಖ ನೀಲಿ ಬಣ್ಣಕ್ಕೆ ತಿರುಗುವಂತಹ ಅಪಾಯದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ರೋಗ ನಿರೋಧಕ ಶಕ್ತಿಯು ಕಡಿಮೆ ಇರುವಂತಹ  ಸಕ್ಕರೆ, ಬಿ.ಪಿ., ಅಸ್ತಮಾ, ಹೃದಯ,  ಮೂತ್ರಪಿಂಡ ಮುಂತಾದ ದೀರ್ಘಕಾಲಿಕ ಕಾಯಿಲೆಯವರು ಹಾಗೂ ಹಿರಿಯ ನಾಗರಿಕರು ಎಚ್ಚರಿಕೆಯಿಂದಿರಬೇಕು. ಕಾಯಿಲೆಯಿಂದ ನರಳುವುದಕ್ಕಿಂತ ಕಾಯಿಲೆ ಬಾರದ ಹಾಗೆ ನೋಡಿಕೊಳ್ಳುವುದು ಉತ್ತಮ.

ಅವರುಗಳು ಈ ಕೆಲವು ಸಲಹೆಗಳನ್ನು ಪಾಲಿಸಬೇಕು.

1. ಆದಷ್ಟು ಮನೆಬಿಟ್ಟು ಹೊರಗೆ ಹೋಗದಿರಿ. ಹೋಗಲೇ ಬೇಕಾದ ಸಂದರ್ಭ ಬಂದರೆ ಮುಖ ಕವಚ ಹಾಕಿಕೊಳ್ಳಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಬೇಗನೆ ಮನೆ ಸೇರಿಕೊಳ್ಳಿ. ಮನೆಗೆ ಬಂದವರೇ ಮುಖ, ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳಿರಿ. 

2. ನಿಮ್ಮ ದಿನನಿತ್ಯ ಔಷಧಿಗಳನ್ನು ಅಂದರೆ ಸಕ್ಕರೆ, ಬಿ.ಪಿ., ಅಸ್ತಮಾ, ಹೃದಯ ಕಾಯಿಲೆಗೆ ಸಂಬಂಧಿಸಿದ ಮಾತ್ರೆಗಳನ್ನು ಯಾವುದೇ ಕಾರಣಕ್ಕೂ ಸೇವಿಸುವುದನ್ನು ನಿಲ್ಲಿಸಬೇಡಿ. ಸಕ್ಕರೆ ಕಾಯಿಲೆಯವರು ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳುತ್ತಿದ್ದರೆ ಅದೇ ಪ್ರಮಾಣದಲ್ಲಿ ಮುಂದುವರೆಸಿ. ಅಕಸ್ಮಾತ್ ಔಷಧಿಗಳು ಮುಗಿದಿದ್ದರೆ ಅದೇ ಮಾತ್ರೆಗಳನ್ನು ವೈದ್ಯರ ಸಲಹೆ ಸಿಗುವವರೆಗೂ ಮುಂದುವರೆಸಿ. ಸಾಧ್ಯವಾದರೆ ಸಮೀಪದ ಲ್ಯಾಬೋರೇಟರಿಗಳಲ್ಲಿ ರಕ್ತದ ಸಕ್ಕರೆ ಪ್ರಮಾಣ ಮತ್ತು ಬಿ.ಪಿ. ಪರೀಕ್ಷೆ ಮಾಡಿಸಿಕೊಳ್ಳಿ. ಗ್ಲೂಕೋಮೀಟರ್ ಸಾಧನದಿಂದ ಮನೆಯಲ್ಲಿಯೇ ರಕ್ತದ ಸಕ್ಕರೆ ಪ್ರಮಾಣ ಹತೋಟಿಯಲ್ಲಿದೆಯೇ ಎಂದು ಪರೀಕ್ಷೆ ಮಾಡಿಕೊಳ್ಳಬಹುದು. ಅದೇ ರೀತಿ ಮನೆಯಲ್ಲಿಯೇ ಬಿ.ಪಿ. ಪರೀಕ್ಷೆ ಮಾಡಿಕೊಳ್ಳಬಹುದು.

3. ಸದ್ಯದ ಪರಿಸ್ಥಿತಿಯಲ್ಲಿ ವೈದ್ಯರನ್ನು ಭೇಟಿ ಮಾಡಲು ಸಾಧ್ಯವಾಗದೇ ಇರಬಹುದು, ಆದರೆ ಈಗಿರುವ ಸಂಪರ್ಕ ಮಾಧ್ಯಮಗಳಾದ ಮೊಬೈಲ್, ವಾಟ್ಸ್ಯಾಪ್ ಗಳ ಮೂಲಕ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಬಹುದು.

4. ಔಷಧಿಗಳ ಕೊರತೆ ಇದೆ ಎಂದು ಪತ್ರಿಕೆಗಳು
ವರದಿ ಮಾಡಿವೆ. ವೈದ್ಯರು ಬರೆದ ಔಷಧಿಗಳು ಸಿಗದೇ ಇರಬಹುದು ಗಾಬರಿಯಾಗಬೇಡಿ. ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಿ ಅಥವಾ ಔಷಧಿ ಅಂಗಡಿಯಲ್ಲಿರುವ ವ್ಯಕ್ತಿಯಿಂದ ಅದೇ ತರಹದ ಔಷಧಿಯನ್ನು ಬೇರೆ ಕಂಪನಿಯಾಗಿದ್ದರೂ ಪರವಾಗಿಲ್ಲ ತಾತ್ಕಾಲಿಕವಾಗಿ ಪಡೆದುಕೊಳ್ಳಿ, ಇಲ್ಲದಿದ್ದರೆ ಅದೇ ತರಹದ ಔಷಧಿಯನ್ನು ತರಿಸಿಕೊಡಲು ಮನವಿ ಮಾಡಿಕೊಳ್ಳಿ.  

5. ಆಗಾಗ ಎಲ್ಲರನ್ನು ಕಾಡುವ ಶೀತ, ಜ್ವರ, ಕೆಮ್ಮು, ನೆಗಡಿ, ಮೈ ಕೈ ನೋವು, ಬೆನ್ನು ನೋವು, ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳಿಗೆ ರೋಗ ಲಕ್ಷಣಗಳನ್ನು ಶಮನ ಮಾಡುವಂತಹ ಸಾರಿಡಾನ್‌, ಕ್ರೂಸಿನ್‌, ಡೋಲೋ ಕೋಲ್ಡ್  ಮುಂತಾದ ಔಷಧಿ ಉಪಯೋಗಿಸಬಹುದು ಅಥವಾ ಮನೆ ಮದ್ದು, ಕಷಾಯಗಳನ್ನು ಉಪಯೋಗಿಸಬಹುದು. ವೈದ್ಯಕೀಯ ಸಮೀಕ್ಷೆಗಳ ಪ್ರಕಾರ ಶೇ.80 ರೋಗಿಗಳಲ್ಲಿ ಈ ಲಕ್ಷಣಗಳು ತಾತ್ಕಾಲಿಕವಾಗಿರುತ್ತವೆ ಹಾಗೂ ವಿಶ್ರಾಂತಿಯ ಮೂಲಕ ಶಮನಗೊಳ್ಳುತ್ತವೆ. ಆದರೆ ಕೊರೊನ ವೈರಸ್ ಭೀತಿಯಿಂದಾಗಿ ಈ ಸಣ್ಣ ಕಾಯಿಲೆಗಳೂ ಆತಂಕ ಮೂಡಿಸಬಹುದು. ಕೆಲವು ಮುನ್ನೆಚ್ಚರಿಕೆಯ ಕ್ರಮಗಳಿಂದ ಈ ಆತಂಕಗಳನ್ನು ನಿವಾರಿಸಿಕೊಳ್ಳಬಹುದು. ಸಾಮಾನ್ಯ ಫ್ಲೂ ಜ್ವರ 3 ರಿಂದ 5 ದಿನಗಳ ಕಾಲದೊಳಗೆ ವಾಸಿಯಾಗುತ್ತದೆ. ಆದರೆ ವಿಪರೀತ ಗಂಟಲು ನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಅಥವಾ ರೋಗ ಲಕ್ಷಣಗಳು ವಾಸಿಯಾಗದಿದ್ದರೆ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಬೇಕು.  

ಮನೆಯಲ್ಲೇ ಇರಿ, ಆರೋಗ್ಯವಾಗಿರಿ.

“ಸರ್ವೇ ಜನಃ ಸುಖಿನೋ ಭವಂತು”


 ಡಾ. ಬಿ.ಎಂ. ವಿಶ್ವನಾಥ್,  ಪ್ರಾಧ್ಯಾಪಕರು, 

ಜೆ.ಜೆ.ಎಂ. ವೈದ್ಯಕೀಯ ವಿದ್ಯಾಲಯ,  ದಾವಣಗೆರೆ. ಸಹಾಯವಾಣಿ : 9449819128

error: Content is protected !!