ದಾವಣಗೆರೆ, ಫೆ.10- ನಗರದ ಕುವೆಂಪು ಕನ್ನಡ ಭವನದಲ್ಲಿ ಮಾರ್ಚ್ 1 ಮತ್ತು 2 ರಂದು ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೆನರಾ ಬ್ಯಾಂಕ್ ನಿವೃತ್ತ ವಿಭಾಗೀಯ ಪ್ರಬಂಧಕರೂ, ಹಿರಿಯ ಸಾಹಿತಿಯೂ ಆದ ಎನ್.ಟಿ. ಯರಿಸ್ವಾಮಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾರ್ಚ್ 1 ರಂದು ಬೆಳಿಗ್ಗೆ 11 ಗಂಟೆಗೆ ಪರಿಷತ್ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ್ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಸಮ್ಮೇಳನದ ಅಂಗವಾಗಿ ಪ್ರಮುಖ ವಿಚಾರ ಗೋಷ್ಠಿಗಳು ನಡೆಯಲಿದ್ದು, ಸಮಕಾಲೀನ ಸಮಸ್ಯೆ, ವಿಶ್ವ ಪ್ರಜ್ಞೆ, ಮಾನವೀಯ ಮೌಲ್ಯಗಳು, ಪರಿಸರ ಪ್ರಜ್ಞೆ, `ಕೃಷಿ ಕಾಯ್ದೆ’ ಸಾಧಕ ಬಾಧಕಗಳ ಕುರಿತು ಗಂಭೀರ ಚರ್ಚೆಗಳು ನಡೆಯಲಿವೆ. ವಿಶೇಷವಾಗಿ ಕೊರೊನಾ ಕವಿಗೋಷ್ಠಿ ಏರ್ಪಾಡು ಮಾಡಲಾಗುವುದು. ಎಂದಿನಂತೆ ಪುಸ್ತಕ ಮಳಿಗೆ ತೆರೆಯಲಾಗುವುದು ಎಂದರು.
ಮುಂದಿನ ವರ್ಷ 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ದಾವಣಗೆೆರೆಯಲ್ಲೇ ಸಂಘಟಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಪ್ರಸ್ತಾಪ ಮಾಡಿರುವುದಾಗಿ, ದಿನಾಂಕ ತಿಳಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಸಾಪ ಪದಾಧಿಕಾರಿಗಳಾದ ಎ.ಆರ್. ಉಜ್ಜನಪ್ಪ, ಬಿ. ದಿಳ್ಳೆಪ್ಪ, ಷಣ್ಮುಖಪ್ಪ, ಎನ್.ಎಸ್. ರಾಜು ಉಪಸ್ಥಿತರಿದ್ದರು.