ಕೂಡ್ಲಿಗಿ, ಮಾ.12- ಕಾರಿನ ಮುಂದಿನ ಗಾಲಿ ಪಂಕ್ಚರ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಐವರು ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಶಿವಪುರ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಡೆದಿದೆ.
ಅಪಘಾತದಲ್ಲಿ ಗಂಗಾವತಿಯ ಶೈಲಜಾ (65) ಎಂಬ ಮಹಿಳೆ ತಲೆಗೆ ಬಲವಾದ ಗಾಯಗಳಾಗಿದ್ದು, ಉಳಿದಂತೆ ಮಂಡಲಗಿರಿಯ ಡಾ. ಚಂದ್ರಶೇಖರ, ಕೊಡಗುಂಡಿ ಶರಣಪ್ಪ, ಅಂಗಡಿ ಮೀನಾಕ್ಷಮ್ಮ, 10 ವರ್ಷದ ಬಾಲಕ ಅಭಿಜಿತ್ ಈ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಕಾರಿನಲ್ಲಿ ಬೆಂಗಳೂರಿನಿಂದ ಕೊಪ್ಪಳ ಕಡೆಗೆ ಹೊರಟಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಡಾ. ಚಂದ್ರಶೇಖರ್ ತಮ್ಮ ಕುಟಂಬದವರೊಂದಿಗೆ ಕೊಪ್ಪಳ ಜಿಲ್ಲೆಯ ಮಂಡಲಗಿರಿಗೆ ಹೊರಟಿದ್ದಾಗ ಕೂಡ್ಲಿಗಿ ತಾಲ್ಲೂಕು ಶಿವಪುರ ಹತ್ತಿರವಿರುವ ಎಲ್ ಅಂಡ್ ಟಿ ಕಂಪನಿ ಕಚೇರಿ ಸಮೀಪ ಬರುತ್ತಿದ್ದಾಗ ಕಾರಿನ ಮುಂದಿನ ಗಾಲಿ ಏಕಾಏಕಿ ಪಂಕ್ಚರ್ ಆಗಿದ್ದರಿಂದ ನಿಯಂತ್ರಣ ತಪ್ಪಿ ಕಾರು ರಸ್ತೆಯ ಪಕ್ಕದ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಸ್ಥಳೀಯರು ಕೂಡಲೇ ಗಾಯಳುಗಳನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ.