ದಾವಣಗೆರೆ, ಜು.16- ಅಸಲಿ ಬಂಗಾರ ಎಂದು ನಂಬಿಸಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಛಾಯಾಗ್ರಾಹಕನಿಂದ ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪಿಯನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ.
ನ್ಯಾಮತಿ ತಾಲ್ಲೂಕು ಮಾದಾಪುರ ಮೇಲಿನ ತಾಂಡಾದ ಬಸವರಾಜಪ್ಪ ಬಂಧಿತ ಆರೋಪಿ.
ಬೀದರ್ ಜಿಲ್ಲೆಯ ಬಸವ ಕಲ್ಯಾಣ (ಹುಲಸೂರ) ತಾಲ್ಲೂಕಿನ ಬೇಲೂರು ಗ್ರಾಮದ ಸುನಿಲ್ ಎಂಬ ಛಾಯಾಗ್ರಹಕನಿಗೆ ಇದೇ ದಿನಾಂಕ 2ರಂದು ರಮೇಶ್ ಎಂದು ಹೆಸರು ಹೇಳಿಕೊಂಡು ದೂರವಾಣಿ ಮುಖಾಂತರ ಸಂಪರ್ಕಿಸಿ, ಪರಿಚಿತಗೊಂಡ ಆರೋಪಿತನು ತನ್ನ ತಾತನಿಗೆ ಪಾಯ ತೆಗೆಯವಾಗ ಬಂಗಾರದ ಬಿಲ್ಲೆಗಳು ಸಿಕ್ಕಿದ್ದು, ನಮಗೆ ಕಷ್ಟ ಇದ್ದು, ನೀವು ಬಂಗಾರದ ಬಿಲ್ಲೆಗಳನ್ನು ತೆಗೆದುಕೊಂಡರೆ ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿದ್ದಾನೆ.
ಛಾಯಾಗ್ರಾಹಕನನ್ನು ನ್ಯಾಮತಿ ತಾಲ್ಲೂಕು ಮಾಚಗೊಂಡನಹಳ್ಳಿ ಗ್ರಾಮದ ಬಳಿ ಬರಮಾಡಿಕೊಂಡು 2 ಸಾವಿರ ರೂ. ನಗದು ಪಡೆದು ಎರಡು ಬಂಗಾರದ ಬಿಲ್ಲೆಗಳನ್ನು ಕೊಟ್ಟು ನಂತರ ಅಸಲಿ ಬಂಗಾರದ ಬಿಲ್ಲೆಗಳನ್ನು ಕೊಡುವುದಾಗಿ ನಂಬಿಕೆ ಹುಟ್ಟಿಸಿದ್ದರು.
ಜು.7 ರಂದು ನ್ಯಾಮತಿ ತಾಲ್ಲೂಕು ಹಳೇ ಜೋಗ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸವಳಂಗ- ಶಿಕಾರಿಪುರ ರಸ್ತೆಯಲ್ಲಿ ಬಂದ ನಾಲ್ವರು ನಕಲಿ ಬಂಗಾರದ ಬಿಲ್ಲೆಗಳನ್ನು ಕೊಟ್ಟು 1 ಲಕ್ಷ ರೂ. ಹಣವನ್ನು ಪಡೆದುಕೊಂಡು ಹೋಗಿದ್ದರು ಎಂದು ಆರೋಪಿಸಲಾಗಿತ್ತು.
ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ಡಾ. ಕೆ.ಎಂ. ಸಂತೋಷ್ ಮಾರ್ಗ ದರ್ಶನದಲ್ಲಿ ಹೊನ್ನಾಳಿ ವೃತ್ತ ನಿರೀಕ್ಷಕ ಟಿ.ವಿ. ದೇವರಾಜ್ ಮತ್ತು ನ್ಯಾಮತಿ ಪಿಎಸ್ಐ ಪಿ.ಎಸ್. ರಮೇಶ ಹಾಗೂ ಸಿಬ್ಬಂದಿಗಳಾದ ಉಮೇಶ್, ಮಂಜಪ್ಪ, ರವಿ ಎನ್, ಸಿದ್ದಪ್ಪ, ನಾಗರಾಜ, ಚನ್ನೇಶ ಅವರನ್ನು ಒಳಗೊಂಡ ತಂಡ ಆರೋ ಪಿಯನ್ನು ನಿನ್ನೆ ಬಂಧಿಸಿದ್ದು, ಈತನಿಂದ 1 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.