ದಾವಣಗೆರೆ, ಫೆ.25- ವಿದ್ಯುತ್ ಘಟಕದ ಒಳಗೆ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಜಗಳೂರಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ನಡೆದಿದೆ.
ಹಿರೇಮಲ್ಲನಹೊಳೆ ಗ್ರಾಮದ ಗೋವಿಂದಸ್ವಾಮಿ (40) ಮೃತ ದುರ್ದೈವಿ. ಈತ ಪವರ್ ವಿಂಡ್ ಕಂಪನಿಯೊಂದರ ವಿದ್ಯುತ್ ಘಟಕದಲ್ಲಿ ಕಳೆದ 6 ತಿಂಗಳಿನಿಂದ ಪಿಟ್ಟರ್ ಕೆಲಸ ಮಾಡುತ್ತಿದ್ದ. ಇದೇ 23ರಂದು ವಿದ್ಯುತ್ ಘಟಕದಲ್ಲಿ ಕಂಪನಿಯ ಅಧಿಕಾರಿಗಳು ತಿಳಿಸಿದಂತೆ ಮೃತನು ಸಲಕರಣೆ ಮತ್ತು ವಿದ್ಯುತ್ ತಂತಿಗಳನ್ನು ಅಳತೆ ಮತ್ತು ಮಾರ್ಕಿಂಗ್, ಜೋಡಣೆ ಕಾರ್ಯಗಳನ್ನು ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಗಂಭೀರವಾಗಿ ಗಾಯಗೊಂಡಿದ್ದ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಯಾವುದೇ ಜೀವ ರಕ್ಷಕ ಉಪಕರಣಗಳಿಲ್ಲದೇ ಕೆಲಸ ಮಾಡಿಸಿದ ಕಾರಣ ಪತಿ ಮೃತಪಟ್ಟಿರುವುದಾಗಿ ಮೃತನ ಪತ್ನಿ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.