ಕಾಲುವೆಯಲ್ಲಿ ಮಹಿಳೆ ಶವ ಪತ್ತೆ ಪತಿ ಸೇರಿದಂತೆ ನಾಲ್ವರ ಬಂಧನ

ದಾವಣಗೆರೆ, ಫೆ.21- ಮಹಿಳೆಯ ಹತ್ಯೆ ಮಾಡಿ ಶವವನ್ನು ಭದ್ರಾ ಕಾಲುವೆಗೆ ಹಾಕಿದ್ದ ಪ್ರಕರಣವನ್ನು ಬೇಧಿಸಿರುವ ಹದಡಿ ಪೊಲೀಸರು ಮೃತಳ ಪತಿ, ಮಗ ಹಾಗೂ ಇಬ್ಬರು ಮಾವಂದಿರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಸುಮಾರು 30-35 ವರ್ಷದ ಅಪರಿಚಿತ ಮಹಿಳೆಯ ಶವವು ತಾಲ್ಲೂಕಿನ ಹಳೆ ಬಿಸಲೇರಿ ಬಳಿ ಭದ್ರಾ ಕಾಲುವೆಯಲ್ಲಿ ಫೆ.17ರಂದು ತೇಲಿ ಬಂದಿತ್ತು. ಹರಿತವಾದ ಆಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕೊಲೆ ಆರೋಪಿಗಳ ಪತ್ತೆಗೆ ಎಸ್ಪಿ ಹನುಮಂತ ರಾಯ, ಎಎಸ್ಪಿ ಎಂ. ರಾಜೀವ್, ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಮಾರ್ಗದರ್ಶನ ದಲ್ಲಿ ರಚಿಸಲಾಗಿದ್ದ ಸಿಪಿಐ ಬಿ. ಮಂಜುನಾಥ, ಹದಡಿ ಠಾಣೆ ಎಸ್‍ಐ ಪಿ.ಪ್ರಸಾದ್, ಎಎಸ್‍ಐ ಚನ್ನವೀರಪ್ಪ, ಸಿಬ್ಬಂದಿಗಳಾದ ಮಂಜುನಾಥ್‌, ವಿಶ್ವನಾಥ್‌, ಕರಿಬಸಪ್ಪ, ಶಿವಕುಮಾರ, ವೀರಭದ್ರಪ್ಪ, ಅಣ್ಣಯ್ಯ, ಶ್ರೀನಿವಾಸ್ ಇವರುಗಳನ್ನು ಒಳಗೊಂಡ ತಂಡವು ಭದ್ರಾ ಕಾಲುವೆಯಲ್ಲಿ ಪತ್ತೆಯಾದ ಶವ ಕಬ್ಬೂರು ಗ್ರಾಮದ ಸಿದ್ದಮ್ಮ ಎಂಬುದಾಗಿ ಗುರುತಿಸಿದ್ದರು. ನಂತರ ತನಿಖೆ ಕೈಗೊಂಡಾಗ, ಮೃತಳ ಪತಿಯಾದ ಅತ್ತಿಗೆರೆ ಗ್ರಾಮದ ಗ್ರಾಮ ಸೇವಕ ಕಬ್ಬೂರು ಗ್ರಾಮದ ಟಿ. ಕೆಂಚವೀರಪ್ಪ, ಪುತ್ರ ಬಿಎಸ್ಸಿ ವಿದ್ಯಾರ್ಥಿ ಕೆ. ವಿಕಾಸ್, ಮಾವಂದಿರಾದ ಶೇಖರಪ್ಪ, ರಾಜಪ್ಪ ಅಲಿಯಾಸ್ ನಾಗರಾಜಪ್ಪನನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಈ ನಾಲ್ವರು ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಮೃತ ಸಿದ್ದಮ್ಮ ಹಾಗೂ ಆರೋಪಿತನಾದ ಈಕೆಯ ಗಂಡ ಕೆಂಚವೀರಪ್ಪ ಮಧ್ಯೆ ಆಸ್ತಿ, ಹಣದ ವಿಚಾರದಲ್ಲಿ ವೈಮನಸ್ಸು ಇತ್ತು. ಮೃತ ಸಿದ್ದಮ್ಮಳ ಪತಿ ಕೆಂಚವೀರಪ್ಪ ತನ್ನ ಮಗ ವಿಕಾಸ ಹಾಗೂ ಮಾವಂದಿರಾದ ರಾಜಪ್ಪ, ಶೇಖರಪ್ಪನ ಸಹಾಯದಿಂದ ಮೃತ ಸಿದ್ದಮ್ಮಳನ್ನು ಕಬ್ಬೂರು ಗ್ರಾಮದ ಕಾಲುವೆ ಬಳಿ ಕರೆಸಿಕೊಂಡು, ಅಲ್ಲಿ ಕಲ್ಲಿನಿಂದ ಹಲ್ಲೆ ಮಾಡಿ, ಹತ್ಯೆ ಮಾಡಿದ್ದರು. ನಂತರ ಮೃತಳ ಶವವನ್ನು ಭದ್ರಾ ಕಾಲುವೆಗೆ ಎಸೆದು ತಪ್ಪಿಸಿಕೊಂಡಿದ್ದರು.

error: Content is protected !!