ಬ್ರೋ, ಈ ಕೋವಿಡ್ ಯುಗ ಸ್ಟಾರ್ಟ್ ಆದಾಗ ಆರಂಭದಲ್ಲಿ ಇದು ಸೆಂಚುರಿ ಹೊಡೆಯೋಕೆ ವಾರಗಟ್ಟಲೇ ತಗೋತ್ತಿತ್ತು. ಈಗ ಒಂದೇ ದಿನದಲ್ಲಿ ಸೆಂಚುರಿ ಹೊಡಿತಾ ಇದೆ! ಒಂದೊಂದು ದಿನ ನಾಲ್ಕು ಐದೇ ಸ್ಕೋರ್ ಹೊಡೆಯುತ್ತೆ!! ಏನು ಇದರ ಮರ್ಮಾ – ನಮ್ಮ ಕರ್ಮ.
ಬ್ರದರ್ ಈ ಕೊರೊನಾ ಸೋಂಕಿತರ ಸ್ಯಾಂಪಲ್ಸ್ ಗಳು ಸಾವಿರಗಟ್ಟಲೇ ಲ್ಯಾಬ್ ಗಳಲ್ಲಿ ಟೆಸ್ಟ್ ಆಗ್ತಾ ಇರುತ್ತೆ. ಪ್ರತಿ ದಿನ ಸುಮಾರು ಇನ್ನೂರು ಮುನ್ನೂರು ರಿಸಲ್ಟ್ಸ್ ಬರ್ತಾವೆ. ಅವುಗಳು ಈ ರೀತಿ ವ್ಯತ್ಯಾಸ ಆಗ್ತಾ ಇರ್ತಾವೆ. ಈಗ ಕೋವಿಡ್ ಸಾಕಷ್ಟು ಸ್ಪ್ರೆಡ್ ಆಗ್ತಾ ಇದೆ. ಐ ಮೀನ್ ಹರಡುತ್ತಾ ಇದೆ. ಆದ್ದರಿಂದ ಲೆಕ್ಕ ಹೆಚ್ಚು ಕಡಿಮೆ ಆಗ್ತಾನೇ ಇರುತ್ತೆ.
ಆದರೇ, ಬ್ರೋ ದಿನಕ್ಕೆ ಜಿಲ್ಲೆಯಲ್ಲಿ ನೂರ, ರಾಜ್ಯದಲ್ಲಿ ಸಾವಿರ ಹೀಗೆ ಆಗ್ತಾ ಹೋದರೇ ಜನರಿಗೆ ಹೆದರಿಕೆ ಆಗಲ್ವಾ?
ತಮ್ಮಾ, ಕೇವಲ ಕೋವಿಡ್ ಸೋಂಕಿತರ ಸಂಖ್ಯೆ ಕೌಂಟ್ ಮಾಡಬೇಡ. ದಿನಕ್ಕೆ ಎಷ್ಟು ಜನ ಕೋವಿಡ್ ನಿಂದ ಗುಣಮುಖ ಆದರು ಅದನ್ನು ನೋಡು. ರಿಕವರಿ ರೇಟ್ ಅರವತ್ತೈದು ಪರ್ಸೆಂಟ್ ಮೇಲಿದೆ. ಸಾವಿನ ಸಂಖ್ಯೆ ಓನ್ಲೀ ಎರಡೂವರೆ ಪರ್ಸೆಂಟ್ ಇರೋದು. ಸಮಾಧಾನದ ವಿಷಯ ಅಲ್ವಾ? ಕೆಲವು ಸರ್ವೇಗಳು ಈಗ ಕೋವಿಡ್ ದೇಶದ ಕೋಟಿಗಟ್ಟಲೇ ಜನಕ್ಕೆ ಗೊತ್ತಿಲ್ಲದೇ ಬಂದು ಹೋಗಿದೆ ಅಂತಾ ರಿಪೋರ್ಟ್ ಮಾಡಿವೆ. ಕೊರೊನಾಕ್ಕೆ ನಾವು ಹೆದರೋ ಅಗತ್ಯ ಇಲ್ಲ.
ಮತ್ತೇ, ಮಿಡಿಯಾಗಳಲ್ಲಿ ಅದರಲ್ಲೂ ಟಿ.ವಿ.ಗಳಲ್ಲಿ ಕೊರೊನಾ ರಣಕೇಕೆ ಎಂದು ಕೇಕೆ ಹಾಕ್ತಾರಲ್ಲಾ?
ನೋಡು ಬ್ರದರ್, ಕೊರೊನಾ ನೂರು, ಸಾವಿರ ಜನಕ್ಕೆ ಬಂದಿದೆ ಅಂಥಾ ಸೈಲೆಂಟ್ ಆಗಿ ಹೇಳಿದ್ರೇ ಮಜಾ ಇರೋಲ್ಲಾ. ಅದನ್ನು ವೈಲೆಂಟಾಗಿ ಹೇಳಿದರೇ ಜನ ಬೆಚ್ಚಿ ಬೀಳೋದು. ಜನ ಎಚ್ಚೆತ್ತುಕೊಳ್ಳಲಿ ಎಂಬ ಉದ್ದೇಶ ಇರಬಹುದು.
ಹಂಗಂತೀಯಾ? ನಾನು ಟಿ.ಆರ್.ಪಿ ಜಾಸ್ತಿ ಮಾಡೋಕೆ ಹಂಗೆ ಹೇಳ್ತಾರೆ ಅಂದುಕೊಂಡಿದ್ದೆ.
ಗುರೂ, ಯಾವುದೋ ಒಂದು ಅಂದ್ಕೋ. ಅಷ್ಟು ಬೊಂಬ್ಡಾ ಹೊಡದ್ರೂ ನಮ್ಮ ಜನ ಇನ್ನೂ ಎಚ್ಚರಗೊಂಡಿಲ್ಲ. ಮಾಸ್ಕ್ ಇಲ್ಲದೇ ತಿರುಗ್ತಾರೆ. ಸೋಷಿಯಲ್ ಡಿಸ್ಟನ್ಸ್ ಮೇಂಟೇನ್ ಮಾಡೋಲ್ಲ. ಇದಕ್ಕೆ ಏನಂತಿಯಾ?
ಅದು ನಿಜ ಬಿಡು. ಇದು ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ. ಹೌದೂ, ಈ ಅಂಕಿ-ಅಂಶಗಳನ್ನು ಗಮನಿಸಿದರೆ ಮುಂದೆ ಏನು ಆಗಬಹುದು?
ಆಗೋದು ಆಗೇ ಆಗುತ್ತೆ ಬ್ರದರ್. ಕೊರೊನಾ ಹೆಚ್ಚು ಕಡಿಮೆ ಎಲ್ಲರಿಗೂ ಬರುತ್ತೆ, ಹೋಗುತ್ತೆ. ನಮ್ಮ ಹುಷಾರಿನಲ್ಲಿ ನಾವು ಇರಬೇಕು. ನಮ್ಮ ಇಮ್ಯೂನಿಟಿ ಪವರ್ ಜಾಸ್ತಿ ಮಾಡ್ಕೋಬೇಕು. ಧೈರ್ಯದಿಂದ ಎದುರಿಸಬೇಕು. ಈ ಅಂಕಿ-ಅಂಶಗಳನ್ನು ಜಾಸ್ತಿ ಗಮನಿಸಬೇಡ. ಅದೂ ನಿನ್ನ ಬ್ಲಡ್ ಪ್ರೆಷರ್ ಜಾಸ್ತಿ ಮಾಡುತ್ತೆ.
ಸರಿ ಹಾಗಾದರೆ.
ಈ ಅಂಕಿ-ಅಂಶ ಒಂದೊಂದು ಸಲ ಹೇಗೆ ಯಾಮಾರಿಸುತ್ತೆ ಅಂತಾ ಪ್ರೊ. ಬಿ.ಜಿ. ನಾಗರಾಜ್ ಪ್ರಸಂಗವೊಂದನ್ನು ಹೇಳ್ತಾ ಇದ್ದರು. ದೆಹಲಿಯ ಪತ್ರಿಕೆಯೊಂದರಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕರ ಹಾಗೂ ವಿದ್ಯಾರ್ಥಿನಿಗಳ ವಿಷಯ ಪ್ರಕಟವಾಗಿತ್ತಂತೆ.
ಏನಂತಾ?
ಅಲ್ಲಿನ ಡಿಪಾರ್ಟ್ ಮೆಂಟ್ ಒಂದರಲ್ಲಿ ಶೇಕಡಾ ಐವತ್ತು ವಿದ್ಯಾರ್ಥಿನಿಯರು ತಮ್ಮ ಅಧ್ಯಾಪಕರನ್ನೇ ಮದುವೆ ಆಗಿದ್ದಾರೆ ಎಂದು. ಇದನ್ನು ಓದಿದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಆ ಕಾಲೇಜಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದರು. ನಂತರ ವಿಚಾರಿಸಿದಾಗ, ಆ ಡಿಪಾರ್ಟ್ ಮೆಂಟ್‌ನಲ್ಲಿ ಓದುತ್ತಿದ್ದುದು ಕೇವಲ ಇಬ್ಬರೇ ಹುಡುಗಿಯರು. ಒಬ್ಬ ವಿದ್ಯಾರ್ಥಿನಿ ತನ್ನ ಯುವ ಅಧ್ಯಾಪಕನನ್ನೇ ಮದುವೆಯಾಗಿದ್ದಳು!
ಅಂದರೇ?
ಆಯ್ತಲ್ಲಾ ಫಿಫ್ಟೀ ಪರ್ಸೆಂಟ್!!!
ಆರ್.ಟಿ. ಅರುಣ್‌ಕುಮಾರ್
[email protected]