ಖಾಯಮಾತಿಗೆ ಅವಕಾಶ ಇಲ್ಲ?
ಖಾಸಗಿ ಸಂಸ್ಥೆಯೊಂದರ ಮೂಲಕ ನಾನ್ – ಕ್ಲಿನಿಕಲ್ ಹಾಗೂ ಡಿ ದರ್ಜೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನೊಂದು ತಿಂಗಳಲ್ಲಿ ಗುತ್ತಿಗೆಯ ಅವಧಿ ಮುಗಿಯಲಿದೆ ಎಂದು ಸಿ.ಜಿ. ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಸಿಬ್ಬಂದಿಯ ಜವಾಬ್ದಾರಿ ಖಾಸಗಿ ಗುತ್ತಿಗೆ ಸಂಸ್ಥೆಗೆ ಸೇರಿದ್ದಾಗಿದೆ. ಕೊರೊನಾ ಸಮಯದಲ್ಲಿ ಸೀಮಿತ ಅವಧಿಗೆ ರಿಸ್ಕ್ ಅಲೋಯನ್ಸ್ ಘೋಷಿಸಲಾಗಿತ್ತು. ಅದನ್ನು ಸಿಬ್ಬಂದಿಗೆ ಕೊಡಿಸುವ ಪ್ರಯತ್ನ ನಡೆದಿದೆ ಎಂದು ಮೂಲಗಳು ಹೇಳಿವೆ.
ದಾವಣಗೆರೆ, ಮಾ. 14 – ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಹೆಚ್.ಎಂ.) ಸಿಬ್ಬಂದಿ ಮುಷ್ಕರದ ನಂತರ ಈಗ ನಾನ್ – ಕ್ಲಿನಿಕಲ್ ಹಾಗೂ ಡಿ ದರ್ಜೆ ಹೊರ ಗುತ್ತಿಗೆ ಕೆಲಸದವರು ಮುಷ್ಕರ ಆರಂಭಿಸಿದ್ದಾರೆ.
ಎನ್.ಹೆಚ್.ಎಂ. ಮುಷ್ಕರದ ಕಾರಣದಿಂದಾಗಿ ಜಿಲ್ಲಾಸ್ಪತ್ರೆಯ ಆರೋಗ್ಯ ಸೇವೆ ತತ್ತರಿಸಿತ್ತು. ಇವರು ಫೆ. 13ರಿಂದ ಮುಷ್ಕರ ನಡೆಸುತ್ತಿದ್ದು, ಇನ್ನೂ ಮುಗಿಯುವ ಲಕ್ಷಣಗಳಿಲ್ಲ. ಇವರ ಮುಷ್ಕರದ ಕಾರಣದಿಂದ ಸಿ.ಜಿ. ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗಕ್ಕೆ ಬರುವವರಲ್ಲಿ ಬಹುತೇಕರನ್ನು ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತಿದೆ.
ಈಗ ಸಿ.ಜಿ. ಆಸ್ಪತ್ರೆಯ 195 ನಾನ್ – ಕ್ಲಿನಿಕಲ್ ಹಾಗೂ ಡಿ ದರ್ಜೆ ಸಿಬ್ಬಂದಿ ಖಾಯಂಗೊಳಿಸಬೇಕು ಹಾಗೂ ಬಾಕಿ ಇರುವ ರಿಸ್ಕ್ ಅಲೋಯನ್ಸ್ ಪಾವತಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಮುಷ್ಕರ ಆರಂಭಿಸಲಾಗಿದೆ. ಮೊದಲು ಎನ್.ಹೆಚ್.ಎಂ.ನ ಒಳಗುತ್ತಿಗೆ ಸಿಬ್ಬಂದಿ ಮುಷ್ಕರ ಆರಂಭಿಸಿದ್ದರೆ, ಈಗ ಹೊರಗುತ್ತಿಗೆಯ ಸಿಬ್ಬಂದಿ ಹೋರಾಟ ನಡೆಸುತ್ತಿದ್ದಾರೆ.
ಇದು ಸಂಪೂರ್ಣ ಆಸ್ಪತ್ರೆಯ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತಿದೆ. ಬೃಹತ್ ಆಸ್ಪತ್ರೆಯಲ್ಲಿ ಕೇವಲ 28 ಡಿ ದರ್ಜೆ ಸಿಬ್ಬಂದಿ ಮಾತ್ರ ಈಗ ಲಭ್ಯವಿದ್ದಾರೆ. ಒಬ್ಬೊಬ್ಬರು ನಾಲ್ಕೈದು ವಾರ್ಡ್ ನಿಭಾಯಿಸುವ ಪರಿಸ್ಥಿತಿ ಇದೆ.
ಈಗಾಗಲೇ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗಾಗಿ ದಾಖಲಿಸಿಕೊಂಡವರಿಗೆ ಮಂಗಳವಾರ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಾಳೆ ಶಸ್ತ್ರಚಿಕಿತ್ಸೆ ಸಹ ಆಗದೇ ಇರಬಹುದು. ಸ್ವಚ್ಛತೆಯ ಬಹು ದೊಡ್ಡ ಸಮಸ್ಯೆ ಕಾಡಲಿದೆ. ಈಗಾಗಲೇ ತುರ್ತು ಹೊರತಾದ ಉಳಿದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಎನ್.ಹೆಚ್.ಎಂ. ಸಿಬ್ಬಂದಿ ಮುಷ್ಕರದ ಕಾರಣದಿಂದ ಸಿ.ಜಿ. ಆಸ್ಪತ್ರೆಯಲ್ಲಿ ಕೇವಲ 64 ನರ್ಸಿಂಗ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೂ ಕೆಲಸದ ಒತ್ತಡದಲ್ಲಿದ್ದಾರೆ. ಈಗ ಕ್ಲಿನಿಕೇತರ ಸಿಬ್ಬಂದಿಯೂ ಬಳಲುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಒಂದೆರಡು ವಾರಗಳಿಂದ ಸಿ.ಜಿ. ಆಸ್ಪತ್ರೆಯಲ್ಲಿರುವ ಅಪೌಷ್ಠಿಕ ಮಕ್ಕಳ ಪುನಶ್ಚೇತನ ಕೇಂದ್ರಕ್ಕೆ ಮಕ್ಕಳನ್ನು ದಾಖಲಿಸಿಕೊಳ್ಳುತ್ತಿಲ್ಲ. ತೀವ್ರ ಅಪೌಷ್ಠಿಕತೆ ಎದುರಿಸುವ ಮಕ್ಕಳಿಗೆ ಇಲ್ಲಿ ಆರೈಕೆ ಮಾಡಲಾಗುತ್ತಿತ್ತು. ಈಗ ಕೇಂದ್ರ ಖಾಲಿ ಹೊಡೆಯುತ್ತಿದೆ. ಇಲ್ಲಿಗೆ ಬರುವ ಮಕ್ಕಳ ಪೋಷಕರ ಸಂಪರ್ಕ ಸಂಖ್ಯೆ ಪಡೆದು, ಮುಂದಿನ ದಿನಗಳಲ್ಲಿ ಕರೆಸಿಕೊಳ್ಳುವುದಾಗಿ ಹೇಳಿ ಕಳಿಸಲಾಗುತ್ತಿದೆ.
ಎನ್.ಸಿ.ಡಿ. (ಸೋಂಕೇತರ ಕಾಯಿಲೆ) ತಪಾಸಣೆಗೂ ಸಮಸ್ಯೆಯಾಗಿದೆ. ಮೊದಲು ಎನ್.ಹೆಚ್.ಎಂ. ಸಿಬ್ಬಂದಿ ಈ ಕಾಯಿಲೆಯ ತಪಾಸಣೆ ನಡೆಸುತ್ತಿದ್ದರು. ಈಗ ಅವರ ಮುಷ್ಕರದ ಕಾರಣದಿಂದಾಗಿ ತಪಾಸಣೆಯ ಹೊಣೆ ಖಾಯಂ ಸಿಬ್ಬಂದಿಯ ಮೇಲೆ ಬಿದ್ದಿದೆ. ಇದೂ ಆಸ್ಪತ್ರೆಯಲ್ಲಿ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಪ್ರಭಾರಿ ಜಿಲ್ಲಾ ಸರ್ಜನ್ ಡಾ. ಸುಭಾಷ್ ಚಂದ್ರ, ಹಾಲಿ ಲಭ್ಯವಿರುವ ಸಿಬ್ಬಂದಿಯನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ. ಖಾಯಂ ಸಿಬ್ಬಂದಿಯ ರಜೆಗೆ ಕಡಿವಾಣ ಹಾಕಲಾಗಿದೆ. ಇದರಿಂದಾಗಿ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ. ಆದರೂ, ತುರ್ತು ಚಿಕಿತ್ಸಾ ಸೇವೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಸಿ.ಜಿ. ಜಿಲ್ಲಾ ಆಸ್ಪತ್ರೆಗೆ ಸುತ್ತಲಿನ ಜಿಲ್ಲೆಗಳ ಜನರು ಬರುತ್ತಾರೆ. ಅವರ ಆರೋಗ್ಯ ಸೇವೆಗೆ ಧಕ್ಕೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕಿದೆ. ಸಿಬ್ಬಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ಲವಾದರೆ ಜನ ಸಾಮಾನ್ಯರು ಸಂಕಷ್ಟ ಎದುರಿಸಬೇಕಾಗುತ್ತದೆ.