ಶಾಮನೂರಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
ದಾವಣಗೆರೆ, ಮಾ. 24 – ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಶಾಮನೂರಿನಲ್ಲಿ ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ನ ಭರವಸೆಗಳ ಗ್ಯಾರಂಟಿ ಕಾರ್ಡ್ ವಿತರಿಸಿದರು.
ಶಾಮನೂರಿನ ಆಂಜನೇಯ, ಈಶ್ವರ ಹಾಗೂ ದುರ್ಗಮ್ಮ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ, ನಂತರ ಎ.ಕೆ. ಕಾಲೋನಿಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ಗ್ಯಾರಂಟಿ ಕಾರ್ಡುಗಳನ್ನು ಹಂಚಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಯೋಜನೆಯ ಅನ್ವಯ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ರೂ. ಹಾಗೂ ಗೃಹ ಜ್ಯೋತಿ ಅನ್ವಯ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂಬ ಗ್ಯಾರಂಟಿಯ ಕಾರ್ಡ್ಗಳನ್ನು ವಿತರಿಸಿದರು.
ಗೃಹಲಕ್ಷ್ಮಿ, ಗೃಹ ಜ್ಯೋತಿ ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಯ ಕುರಿತ ಭಿತ್ತಿ ಚಿತ್ರಗಳನ್ನು ಅಂಟಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಗ್ಯಾರಂಟಿ ಕಾರ್ಡಿಗೆ ನಾನು ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಸಹಿ ಹಾಕಿದ್ದೇವೆ. ಇದುವರೆಗೂ ನುಡಿದಂತೆ ನಡೆದಿದ್ದೇವೆ. ಮುಂದೆಯೂ ನುಡಿದಂತೆ ನಡೆಯುತ್ತೇವೆ ಎಂದರು.
ಬಿಜೆಪಿ ರೀತಿ ಸುಳ್ಳು ಭರವಸೆ ನೀಡುವ ಪಕ್ಷವಲ್ಲ ಕಾಂಗ್ರೆಸ್. ಯಾವ ಮಾತು ಕೊಡುತ್ತೇವೋ ಅದರಂತೆ ನಡೆದುಕೊಳ್ಳುತ್ತೇವೆ. ಇಡೀ ರಾಜ್ಯದಲ್ಲಿ ಗ್ಯಾರಂಟಿ ಕಾರ್ಡ್ಗಳನ್ನು ಹಂಚುತ್ತಿದ್ದೇವೆ ಎಂದು ತಿಳಿಸಿದರು.
ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಬಿಜೆಪಿ ಸೋಲುವುದು ನಿಶ್ಚಿತವಾಗಿದೆ. ಬಿಜೆಪಿ ಭ್ರಷ್ಟಾಚಾರ ಮಾಡುವುದನ್ನು ಬಿಟ್ಟರೆ ಬೇರೆ ಕಾರ್ಯಕ್ರಮ ಮಾಡಿಲ್ಲ, ಇವರಿಗೆ ಬದ್ಧತೆ ಇಲ್ಲ ಎಂದರು.
ಮೊನ್ನೆ ಒಬ್ಬ ರೌಡಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಮಸ್ಕರಿಸಿದ್ದಾರೆ. ಇದು ರೌಡಿಗಳ ಸರ್ಕಾರ, ಜನ ಈ ಸರ್ಕಾರದಿಂದ ಭ್ರಮ ನಿರಸನರಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದರು.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಡಿರುವ ಸಿ.ಡಿ. ಆರೋಪ ತಳ್ಳಿ ಹಾಕಿರುವ ಅಹಮದ್, ಸೋಲುವ ಭೀತಿಯಿಂದಾಗಿ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಹುನ್ನಾರವಾಗಿ ಇಂತಹ ಆರೋಪ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಜಮೀರ್ ಅಹಮದ್, ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಕಾಂಗ್ರೆಸ್ ಮುಖಂಡರಾದ ಬಿ.ಕೆ. ಪರಶುರಾಮ್, ಗಣೇಶ್ ಹುಲ್ಮನಿ, ಗಡಿಗುಡಾಳ್ ಮಂಜುನಾಥ್, ಕೆ.ಎಸ್. ಬಸವಂತಪ್ಪ, ಕಣ್ಣಾಳ್ ಅಂಜಿನಪ್ಪ, ಕಲ್ಲಳ್ಳಿ ನಾಗರಾಜ್, ಅಯೂಬ್ ಪೈಲ್ವಾನ್, ಅನಿತಾ ಬಾಯಿ, ನಿಖಿಲ್ ಕೊಂಡಜ್ಜಿ, ಕೆ.ಜಿ. ಶಿವಕುಮಾರ್, ಶಾಮನೂರು ಟಿ. ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.