ಮಾನ್ಯರೇ,
ರಾಜಕಾರಣಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಿ ಅಪಾರ ಪ್ರಮಾಣದ ನಗದು ಸಿಕ್ಕಾಗ ಅಥವಾ ಆದಾಯ ದುಪ್ಪಟ್ಟಾಗಿದೆ ಎಂದಾಗ, ಮುನ್ನೆಲೆಗೆ ಬರುವ ವಿಷಯವೆಂದರೆ ಅದುವೇ ಕೃಷಿಯಿಂದ ಬಂದ ಆದಾಯ ಎಂಬ ಮಾತು. ಹಾಗಾದರೆ ಕೃಷಿ ಭೂಮಿಯಲ್ಲಿ ಕೋಟಿ ಕೋಟಿ ರೂಗಳಿಸುವಷ್ಟು ಆದಾಯ ಇದೆಯೇ? ಅಥವಾ ರಾಜಕಾರಣಿಗಳ ಕೃಷಿ ಭೂಮಿಯಲ್ಲಿ ಮಾತ್ರ ಅಂತಹ ಬೆಳೆಗಳನ್ನು ಬೆಳೆಯಲು ಸಾಧ್ಯವಾ? ಕೃಷಿ ಭೂಮಿಯಲ್ಲಿ ನಿಜಕ್ಕೂ ಕೋಟಿ ಕೋಟಿ ಲಾಭ ಗಳಿಸುವುದಾದರೆ, ನಮ್ಮ ಸಾಮಾನ್ಯ ರೈತರೆಲ್ಲ ಯಾಕೆ ಇಂದಿಗೂ ಕೂಡ ಕಷ್ಟ ಪಡುತ್ತಿದ್ದಾರೆ.?
ಕೃಷಿ ಭೂಮಿಯಲ್ಲಿ ಕೋಟಿ ಕೋಟಿ ಲಾಭ ಮಾಡುವ ರಾಜಕಾರಣಿಗಳನ್ನು ದೇಶದ `ಯಶಸ್ವೀ ಮಾದರಿ ರೈತರು’ ಎಂದು ಕರೆಯಬಹುದಲ್ಲವೇ? ರಾಜ್ಯದಲ್ಲಿ ರೈತರು ಇಂದಿಗೂ ಕೂಡ ಸರಿಯಾದ ಬೆಂಬಲ ಬೆಲೆ, ಬೆಲೆ ಏರಿಕೆ, ವಿದ್ಯುತ್ ಕೊರತೆ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳಿಂದ ಹೊರ ಬರದೇ ಒದ್ದಾಡುತ್ತಿದ್ದಾರೆ. ಆದರೆ ರಾಜಕಾರಣಿಗಳು ಮಾತ್ರ ತಮ್ಮ ಕೃಷಿ ಭೂಮಿಯಲ್ಲಿ ಕೋಟಿ ಕೋಟಿ ಗಳಿಸುತ್ತಿದ್ದಾರೆ.
ರಾಜಕಾರಣಿಗಳು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳ ಬಗ್ಗೆ ಸಾಮಾನ್ಯ ರೈತರಿಗೂ ತಿಳಿಸುವಂತಾಗಲಿ, ಆಗ ರಾಜ್ಯದ ಸಾಮಾನ್ಯ ರೈತರು ಕೂಡ ಉತ್ತಮ ಬೆಳೆ ಬೆಳೆದು ಕೋಟ್ಯಾಧಿಪತಿಗಳಾಗುತ್ತಾರೆ.
– ಡಿ. ಮುರುಗೇಶ, ದಾವಣಗೆರೆ.