ದಾವಣಗೆರೆ ನಗರದ ರಸ್ತೆಗಳು ಅದೇನು ಕರ್ಮ ಮಾಡಿವೆಯೋ ದೇವರೇ ಬಲ್ಲ. ಕಾಂಕ್ರೀಟ್ ರಸ್ತೆ ಪೂರ್ಣಗೊಂಡಿರುತ್ತದೆ. ಮತ್ಯಾವುದೋ ಪೈಪ್ ಲೈನ್ ಹಾಕಲು ಮತ್ತದೇ ರಸ್ತೆ ಕೊರೆಯಲು ಡ್ರಿಲ್ ಹಚ್ಚಿ ನೆಲ ಬಗೆಯಲಾಗುತ್ತದೆ. ಹೀಗೆಯೇ ಸಾಗುತ್ತೇ ರಸ್ತೆಗಳ ಕಥೆ. ನಿತ್ಯದ ಕಥೆ `ಕೆತ್ತು-ಮೆತ್ತು’..!
ಈ ಕಾಂಕ್ರೀಟ್ ರಸ್ತೆಗಳು ಪದೇ ಪದೇ ಜಜ್ಜಿಸಿಕೊಂಡು, ರಿಪೇರಿ ಆದ ನಂತರ, ವೈದ್ಯರು ಆಪರೇಷನ್ ಮಾಡಿ ಹೊಲಿಗೆ ಹಾಕಿ, ಪ್ಲಾಸ್ಟರ್ ಅಂಟಿಸಿದ ರೀತಿ ಕಾಣತೊಡಗುತ್ತದೆ. ಅದು ಹೋಗಲಿ, ಆ ರಿಪೇರಿ ಮಾಡಿದ ರಸ್ತೆಯಲ್ಲಿಯೇ, ಅವರು ಮಾಡಿದ ಕೆಲಸದ ಪಕ್ಕದಲ್ಲಿಯೇ ಬೇರೆ ಯಾವುದೋ ಒಂದು ಸಣ್ಣ ಗುಂಡಿ ಇದ್ದು, ಅದು ಸಂಚಾರಕ್ಕೆ ತೊಂದರೆ ಕೊಡುತ್ತದೆ ಎಂದು ಗೊತ್ತಾದರೂ ಅದನ್ನು ಮುಚ್ಚುವ ಗೋಜಿಗೆ ಹೋಗುವುದಿಲ್ಲ. ಏಕೆಂದರೆ ಅದು ಅವರ ಕಾಂಟ್ರ್ಯಾಕ್ಟ್ ವ್ಯಾಪ್ತಿಗೆ ಬರುವುದಿಲ್ಲ..! ಪ್ಲಾನ್ ಮೊದಲೇ ಇಲ್ಲ.
ಕೆಲಸಗಾರರನ್ನು ಬಿಡಿ, ಅಲ್ಲಿ ಉಸ್ತುವಾರಿ ನಡೆಸುವ ಇಂಜಿನಿಯರ್ಗಾದರೂ ತುಸು ಜಾಣತನ, ಜ್ಞಾನ ಬೇಡವೇ, ಅಲ್ಲಿ ಕಾಂಕ್ರೀಟ್ ಹಾಕದಿದ್ದರೂ ಸ್ವಲ್ಪ ಮಣ್ಣನ್ನಾದರೂ ಹಾಕಿಸಿ ಗುಂಡಿ ಮುಚ್ಚಿಸುವ ಶಕ್ತಿ ಇರುತ್ತದಲ್ಲವೇ..? ಲಕ್ಷ್ಮೀ ಪ್ಲೋರ್ ಮಿಲ್ ಬಳಿ ಕೆರೆಗೆ ಹೋಗುವ ಕಾರ್ನರ್ ರಸ್ತೆಯಲ್ಲಿ ಆ ಕೆಲಸ ನೋಡಬಹುದು. ಗುಂಡಿ ಚಿಕ್ಕದಾದರೂ ಅಲ್ಲಿ ಆಗುವ ಅನಾಹುತ ದೊಡ್ಡದೇ ಆಗಿರುತ್ತದೆ.
ಜಲ್ಲಿ ಕಲ್ಲು ಅವಾಂತರ..
`ಸ್ಮಾರ್ಟ್ಸಿಟಿ’ ದಾವಣಗೆರೆ ನಗರ ಮತ್ತು ಸುತ್ತ-ಮುತ್ತಲ ಪ್ರದೇಶಗಳಲ್ಲಿ ರಸ್ತೆ, ಚರಂಡಿ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿಗಳು ಭರ್ಜರಿ ಯಾಗಿಯೇ ನಡೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಎಲ್ಲ ಕೆಲಸಗಳಿಗೂ ವಿವಿಧ ತರಹದ ಜಲ್ಲಿ ಕಲ್ಲುಗಳ ಅವಶ್ಯಕತೆ ಇದೆ. ಆ ಜಲ್ಲಿ ಕಲ್ಲುಗಳನ್ನು ಪ್ರಮಾಣಕ್ಕನುಗುಣವಾಗಿ ಆಪೆ ಗಾಡಿ, ಟ್ರ್ಯಾಕ್ಟರ್, ಮಜ್ಡಾ, ಲಾರಿ ಮತ್ತು ಟಿಪ್ಪರ್ ಇತ್ಯಾದಿ ವಾಹನಗಳಲ್ಲಿ ಸಾಗಿಸಲಾಗುತ್ತಿದೆ. ಅದರಲ್ಲೇನು ವಿಶೇಷ ಇಲ್ಲ ಬಿಡಿ.
ಆದರೆ, ಈ ಗಾಡಿಗಳಲ್ಲಿ ಕಲ್ಲನ್ನು ತುಂಬಿಕೊಂಡು ಬರುವಾಗ, ಮಾರ್ಗ ಮಧ್ಯೆ ಹಂಪ್ಸ್ಗಳು ಬಂದಾಗ, ಬ್ರೇಕ್ ಹಾಕಿದಾಗ ಗಾಡಿಯಲ್ಲಿರುವ ಕಲ್ಲುಗಳು ರಸ್ತೆಗೆ ಬೀಳುತ್ತವೆ. ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಗಾಡಿಗಳು ಮುಂದೆ ಚಲಿಸುತ್ತದೆ. ಬಿದ್ದ ಆ ಕಲ್ಲುಗಳನ್ನು ಯಾರೂ ತೆಗೆಯುವುದಿಲ್ಲ. ಪಾಲಿಕೆ ಯವರಂತೂ ಕಣ್ಣೆತ್ತಿಯೂ ನೋಡುವುದಿಲ್ಲ. ಹಾಗಾದರೆ ಇದನ್ನು ಸರಿಪಡಿಸಬೇಕಾದವರು ಯಾರು.?
ರಸ್ತೆಗೆ ಬಿದ್ದ ಆ ಕಲ್ಲುಗಳು ವಾಹನಗಳ ಟೈರುಗಳ ಅಡಿ ಸಿಕ್ಕು ಪುಡಿ-ಪುಡಿಯಾಗಿ ಕರಗಬೇಕಷ್ಟೇ. ಕೆಲ ದಿನಗಳ ಹಿಂದೆ ನಿಜಲಿಂಗಪ್ಪ ಬಡಾವಣೆಯ ಶಾರದಾ ದೇವಿ ದೇವಸ್ಥಾನದ ಬಳಿ ಇರುವ ಸರ್ಕಲ್ ಬಳಿ ಹೀಗೆಯೇ ಯಾವುದೋ ಗಾಡಿ ಕಲ್ಲು ಚೆಲ್ಲಿ ಹೋಗಿದೆ. ಅವನ್ನು ಈವರೆಗೂ ಯಾರೂ ಸ್ವಚ್ಛ ಮಾಡಿಸಿರುವುದಿಲ್ಲ. ಇದು ಬರೀ ಒಂದು ಸ್ಯಾಂಪಲ್ ಅಷ್ಟೆ.
ರಸ್ತೆಗೆ ಬಿದ್ದ ಈ ಕಲ್ಲುಗಳು ಟೈರ್ ತುದಿಗೆ ಸಿಲುಕಿ, ಸಿಡಿದು ರಸ್ತೆ ಬದಿಯಲ್ಲಿ ಹೋಗುವವರಿಗೆ ಘಾಸಿ ಮಾಡಲೂಬಹುದು. ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳಲುಬಹುದು. ಆದ್ದರಿಂದ ಹೀಗೆ ವಾಹನಗಳಲ್ಲಿ ಜಲ್ಲಿ ಕಲ್ಲುಗಳನ್ನು ಸಾಗಿಸುವ ಜನರಿಗೆ ಎಚ್ಚರಿಸುವವರು ಯಾರು? ಕ್ರಮ ತೆಗೆದುಕೊಳ್ಳು ವವರು ಯಾರು?
ಅಬ್ಬಾ ಅದೆಂತಾ ನಾಯಿಗಳು..
ನಗರದಲ್ಲಿ ನಾಯಿಗಳ ಸಂಖ್ಯೆ ಜಾಸ್ತಿಯೋ ಅಥವಾ ಹಂದಿಗಳ ಸಂಖ್ಯೆ ಜಾಸ್ತಿಯೋ ಎಂಬ ಪ್ರಶ್ನೆ ಹಾಕಿದರೆ ನಾಯಿಗಳ ಸಂಖ್ಯೆಯೇ ಜಾಸ್ತಿ ಎನ್ನುವವರೇ ಜಾಸ್ತಿ. ಅದರಲ್ಲಿಯೂ ಬೀದಿ ನಾಯಿಗಳ ಸಂಖ್ಯೆಯೇ ಜಾಸ್ತಿ.
ಯಾವುದೇ ಬಡಾವಣೆ, ಸಂಧಿ-ಗೊಂದಿಗಳಲ್ಲಿ ನೋಡಿದರೂ ಈ ನಾಯಿಗಳ ಕಾಟ ಹೇಳತೀರ ದಾಗಿದೆ. ಪೂರ್ಣ ಶಾಖಾಹಾರಿಗಳಂತಾಗಿರುವ ಈ ಬೀದಿ ನಾಯಿಗಳು ತಂಗಳು ತಿನ್ನುವುದನ್ನೇ ಮರೆತಿವೆ. ತಂಗಳಲ್ಲ, ಬಿಸಿ ಅನ್ನ-ರೊಟ್ಟಿ-ಮುದ್ದೆ ಹಾಕಿದರೂ ಈ ಬೀದಿ ಶುನಕಗಳು ಮೂಸಿ ನೋಡುತ್ತವೆಯೇ ಹೊರತು ತಿನ್ನುವುದಿಲ್ಲ.
ನಗರ ಸ್ವಚ್ಛತೆಯ ಹರಿಕಾರರು ಆಗಿರುವ ಚಿಂದಿ ಆಯುವವರನ್ನು, ರಸ್ತೆಯಲ್ಲಿ ಅಡ್ಡಾಡುವ ಅಪರಿಚಿತ ಮತ್ತು ಪರಿಚಿತ ಎಂಬ ಭೇದ-ಭಾವ ತೋರದೆ ಬೆನ್ನು ಹತ್ತುತ್ತವೆ. ಸೋಜಿಗವೆಂದರೆ ಅಲ್ಲಿಯೇ ವಾಸಿಸುವ ಜನರನ್ನು ಕಂಡರೂ ಗುರ್. ಎನ್ನುತ್ತವೆ. ಅಂದರೆ ಈ ಬೀದಿ ನಾಯಿಗಳು ಸಂವೇದನೆ ಕಳೆದುಕೊಂಡುಬಿಟ್ಟವೆ. ರಾತ್ರಿ ವೇಳೆಯಂತೂ ಜನ ಮಲಗುವಂತಿಲ್ಲ ಬಿಟ್ಟು-ಬಿಡದೆ ಅಳತೊಡಗುತ್ತವೆ.
ಅನಾರೋಗ್ಯ ಮತ್ತಿನ್ಯಾವುದೋ ಕಾರಣಕ್ಕೆ ಕೆಲವರು ಸಾಕು ನಾಯಿಗಳನ್ನು ಬೇರಲ್ಲೋ ದೂರ ಬಿಟ್ಟು ಬರುವುದು ಹೊಸದೇನಲ್ಲ. ವಿದ್ಯಾನಗರ ದವರಿಗೆ ಅರಸು ಬಡಾವಣೆ ದೂರವಾದರೆ, ಅಲ್ಲೇ ಇರುವ ನಿಜಲಿಂಗಪ್ಪ ಬಡಾವಣೆಗೂ ವಿದ್ಯಾನಗರ ದೂರವಾಗಿಯೇ ಕಾಣುತ್ತದೆ. ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ನಾಯಿಗಳು ಬಂದು ಸೇರುತ್ತಲೇ ಇವೆ.
ಶಾಂತಿನಗರ, ರಿಂಗ್ ರಸ್ತೆ ಭೂತಪ್ಪ ದೇವಸ್ಥಾನದ ಬಳಿ ನಾಯಿ ಒಂದಿದೆ. ಅದು ರಸ್ತೆಯಲ್ಲಿ ಅಡ್ಡಾಡುವ ಕಾರನ್ನು ಕಂಡರೆ ಸಾಕು, ಬೊಗಳುತ್ತಾ ಬೆನ್ನು ಹತ್ತುತ್ತದೆ, ಪಿ.ಬಿ.ರಸ್ತೆಯಲ್ಲಿ, ಶನೇಶ್ವರ ದೇವಸ್ಥಾನದ ಹತ್ತಿರವೂ ಇಂತಹ ಕೆಲವು ನಾಯಿಗಳಿವೆ. ಆಗಾಗ್ಗೆ ವಾಹನಕ್ಕೆ ಸಿಕ್ಕು ಸಾಯುವ ನಾಯಿಗಳನ್ನು ಅಲ್ಲಿ ಸಾಮಾನ್ಯವಾಗಿ ಕಾಣಬಹುದು.
ಈ ಮೂರು ಸಮಸ್ಯೆಗಳು ಜನತೆಗೆ ಮಾರಕ ವಾಗಿರುವಂತಹವೇ ಆಗಿವೆ. ಇವುಗಳು ಯಾರ ಖಾತೆಗೆ ಸೇರುತ್ತವೆ ಮತ್ತು ಅದಕ್ಕೆ ಪರಿಹಾರ ಯಾವಾಗ ? ಎಂಬುದು ನೊಂದ ಜನರ ಕಳಕಳಿಯ ಪ್ರಶ್ನೆ.
ಉತ್ತಂಗಿ ಕೊಟ್ರೇಶ್, [email protected]