ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ
ಹೊನ್ನಾಳಿ, ಮಾ.5- ದುಂದು ವೆಚ್ಚವಿಲ್ಲದೆ, ಜಾತಿ, ಮತಗಳ ಭೇದವಿಲ್ಲದೇ ಪವಿತ್ರ ಸ್ಥಳಗಳಲ್ಲಿ ಹಲವಾರು ಮಠಾಧಿಪತಿ ಗಳ ಸಮ್ಮುಖದಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವರದಾನವಾಗಿದ್ದು, ಸಾಮೂಹಿಕ ವಿವಾಹ ಕಾರ್ಯಗಳು ಹೆಚ್ಚು ಹೆಚ್ಚಾಗಿ ನಡೆಯುವಂತಾಗಬೇಕು ಎಂದು ಸಿ.ಎಂ. ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ ಹಿರೇಕಲ್ಮಠದಲ್ಲಿ ಲಿಂ. ಶ್ರೀ ಮೃತ್ಯುಂಜಯ ಶಿವಾಚಾರ್ಯ ಮಹಾಸ್ವಾಮೀಜಿಗಳ 53ನೇ ವಾರ್ಷಿಕ ಪುಣ್ಯಾರಾಧನೆ, ಲಿಂ. ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರ 8ನೇ ವಾರ್ಷಿಕ ಸಂಸ್ಮರಣೆ ಹಾಗೂ ಲಿಂ. ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯವರ ಪಟ್ಟಾಧಿಕಾರದ 50ನೇ ವರ್ಷದ ಸುವರ್ಣ ಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಡಿಟೋರಿಯಂ ಕಟ್ಟಡದ ಶಿಲಾ ಫಲಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಕೇವಲ ಬಡ ಮತ್ತು ಮಧ್ಯಮ ವರ್ಗಗಳಲ್ಲದೇ ಸಿರಿವಂತರೂ ಕೂಡ ಮಠಮಾನ್ಯಗಳಲ್ಲಿ, ಪವಿತ್ರ ಕ್ಷೇತ್ರಗಳಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ವಿವಾಹವಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹಿತ ನುಡಿದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯ ಮತ್ತು ಅಧ್ಯಕ್ಷತೆ ವಹಿಸಿದ್ದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ತಂದೆ-ತಾಯಿ ಮನೆಯಲ್ಲಿ ಹುಟ್ಟಿದ ಹೆಣ್ಣು ಮಗಳು ವಿವಾಹದ ನಂತರ ಇನ್ನೊಂದು ಮನೆಗೆ ಸೊಸೆಯಾಗಿ ಆ ಮನೆಯನ್ನು ಬೆಳಗುವ ಕೆಲಸ ಮಾಡುತ್ತಾರೆ. ತನ್ನ ತವರು ಮನೆಯಂತೆಯೇ ಅವಳು ತನ್ನ ಗಂಡನ ತಂದೆ-ತಾಯಿಗೆ ಮಗಳಾಗಿ ಆ ಮನೆಯ ಸದಸ್ಯರೊಂದಿಗೆ ಸಹೋದರಿಯಾಗಿ ತಾಳ್ಮೆ, ಸಹಕಾರ, ಜವಾಬ್ದಾರಿಯಿಂದ ಕುಟುಂಬವನ್ನು ಮುನ್ನಡೆಸಿಕೊಂಡು ಹೋದಾಗ ಆ ಮನೆಯಲ್ಲಿ ಸದಾ ಶಾಂತಿ, ಸಂತೋಷಗಳು ನೆಲೆಸಿರುತ್ತವೆ ಎಂದು ಹೇಳಿದರು.
ರಾಂಪುರ ಹಾಲಸ್ವಾಮಿ ಮಠದ ಶ್ರೀ ಶಿವಕುಮಾರ ಹಾಲಸ್ವಾಮೀಜಿ, ಹಿರೇಮಠ ಜಕ್ಕಲಿ ಬಿದರಗಡ್ಡೆ, ರಾಮಲಿಂಗೇಶ್ವರ ಮಠ ಹಾರನಹಳ್ಳಿ ಮಠದ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಕೋಣಂದೂರು ಪುರವರ್ಗ ಮಠದ ಪಟ್ಟಣದ ಅಭಿನವ ಶ್ರೀ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ನೂತನ ವಧು-ವರರನ್ನು ಹಾರೈಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಧ್ಯಕ್ಷೆ ಸುಮಾ ಮಂಜುನಾಥ ಇಂಚರ, ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ದೊಡ್ಡಗೌಡ್ರು, ಎಸ್.ಸಿ.ಆರ್.ಜೆ.ಸಿ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಉಪ್ಪಿನ್, ರಾಣೇಬೆನ್ನೂರಿನ ವರ್ತಕ ಬಸವರಾಜ್ ಪಾಟೀಲ್, ತಾಲ್ಲೂಕು ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ಕೆ.ಎಸ್.ಡಿ.ಎಲ್. ನಿರ್ದೇಶಕ ಶಿವು ಹುಡೇದ್, ಮುಖಂಡ ಮಂಜುನಾಥ್ ಇಂಚರ, ಕಸಬಾ ಸೊಸೈಟಿ ಸದಸ್ಯ ಬಿ.ಎಲ್. ಕುಮಾರಸ್ವಾಮಿ, ಪುರಸ್ಕೃತ ಸದಸ್ಯ ಹೊಸಕೇರಿ ಸುರೇಶ್, ಶ್ರೀ ಚನ್ನಪ್ಪ ಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ, ಶ್ರೀಮಠದ ವ್ಯವಸ್ಥಾಪಕ ಎಂ.ಪಿ.ಎಂ. ಚನ್ನಬಸಯ್ಯ, ಹಾಗು ಅನೇಕ ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.
ಶ್ರೀ ಚನ್ನೇಶ್ವರ ಗಾನ ಕಲಾ ಸಂಘದಿಂದ ಪ್ರಾರ್ಥನೆ, ಮಠದ ಗುರುಕುಲದ ಸಾಧಕರಿಂದ ವೇದಘೋಷ, ಶ್ರೀ ಚನ್ನಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ, ಪಟ್ಟಣಶೆಟ್ಟಿ ಪರಮೇಶ್ ಸ್ವಾಗತಿಸಿದರು. ವಿದ್ಯಾ ಟಿ.ಆರ್. ನಿರೂಪಿಸಿದರು.