ಕೊಟ್ಟೂರು, ಫೆ. 1 – ಸ್ವಾತಂತ್ರ್ಯ ದುರ್ಬಳಕೆ ಯಾಗಿ ದೇಶ ಅತಂತ್ರವಾಗುತ್ತಿದೆ. ಸಂವಿಧಾನ ಗೌರವಿಸದೇ ಲೂಟಿ, ಭ್ರಷ್ಟಾಚಾರಗಳು ನಡೆಯು ತ್ತಿವೆ. ಇಂತಹ ಸಂದರ್ಭದಲ್ಲಿ ಪಕ್ಷಗಳು ಹಾಗೂ ರಾಜಕೀಯದ ಶುದ್ಧೀಕರಣ ಆಗಬೇಕಿದೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.
ತರಳಬಾಳು ಹುಣ್ಣಿಮೆ ಮಹೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಾಲೆ ಉದ್ಧಾರ ಮಾಡುತ್ತೇವೆ ಎಂದು ರಾಜಕಾರಣಿಗಳು ಭರವಸೆ ನೀಡುತ್ತಾರೆ. ಆದರೆ, ಈ ಬಗ್ಗೆ ಕಾಳಜಿ ವಹಿಸದ ಕಾರಣ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಹೀಗಾಗಿ ಬಡವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂದು ವಿಷಾದಿಸಿದರು.
ನಾನು 70 ವರ್ಷವಾದಾಗ ರಾಜಕೀಯದಲ್ಲಿರುವುದಿಲ್ಲ ಎಂಬ ನಿರ್ಧಾರ ಮಾಡಿದ್ದೆ. ಉಳಿದವರೂ ಅದೇ ನಿರ್ಧಾರ ಮಾಡಲಿ. ಈಗ ಗಾಲಿ ಕುರ್ಚಿಯಲ್ಲಿರುವವರಿಗೂ ಅಧಿಕಾರ ಬೇಕಿದೆ. ನಮ್ಮ ಮಕ್ಕಳೇ ಅಧಿಕಾರ ವಹಿಸಿಕೊಳ್ಳಬೇಕು ಎಂಬ ಸ್ವಾರ್ಥ ಕಂಡು ಬರುತ್ತಿದೆ. ಇದು ಪ್ರಜಾಪ್ರಭುತ್ವವೇ? ಇದು ಸರ್ವರಿಗೂ ಸಮಬಾಳು ಸಮಪಾಲೇ? ಎಂದವರು ಪ್ರಶ್ನಿಸಿದರು.
ಕಾಳಾಪುರ ಘಟನೆಯಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ : ಎಸ್ಸೆಸ್ಸೆಂ
ಮೊನ್ನೆ ನಡೆದ ಕಾಳಾಪುರ ಘಟನೆಯಲ್ಲಿ ಗಾಯಗೊಂಡವರಿಗೆ ಹಾಗೂ ಕೊಟ್ಟೂರಿಗೆ ಯಾತ್ರೆಯಲ್ಲಿ ಬರುವಾಗ ಬೈಕ್ನಿಂದ ಬಿದ್ದು ಗಾಯಗೊಂಡವರಿಗೆ ತಮ್ಮ ಎಸ್.ಎಸ್.ಐ. ಎಂ.ಎಸ್. ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಈ ಹಿಂದೆ ನನ್ನ ಆಸ್ಪತ್ರೆಯಲ್ಲಿ 25 ಲಕ್ಷ ರೂ.ಗಳ ಠೇವಣಿ ಇರಿಸಿ, ಈ ಹಣದಲ್ಲಿ ತಮ್ಮ ಭಕ್ತರಿಗೆ ಉಚಿತ ಚಿಕಿತ್ಸೆ ನೀಡುವಂತೆ ತಿಳಿಸಿದ್ದರು. ಈ ರೀತಿ ಹಣ ನೀಡಿದ್ದನ್ನೇ, ಕೆಲವರು ತಪ್ಪಾಗಿ ಸುದ್ದಿ ಹರಡಿದ್ದರು. ಹೀಗಾಗಿ ಸ್ಪಷ್ಟನೆ ನೀಡುತ್ತಿರುವುದಾಗಿ ಎಸ್ಸೆಸ್ಸೆಂ ತಿಳಿಸಿದರು.
ಮತದಾನ ಮಾಡಬೇಕಾ ದರೆ ಕನ್ಯಾದಾನ ಮಾಡುವಷ್ಟೇ ಎಚ್ಚರಿಕೆ ವಹಿಸಬೇಕು. ನಮ್ಮ ಮತ ಪಡೆಯುವವನು ಯೋಗ್ಯ ನೇ? ನಮ್ಮನ್ನು ಸರಿಯಾಗಿ ನೋಡುತ್ತಾನಾ? ಕಾಪಾಡುತ್ತಾನಾ? ಎಂಬುದನ್ನು ನೋಡಿ ಮತ ಚಲಾಯಿಸಿ ಎಂದವರು ಕಿವಿಮಾತು ಹೇಳಿದರು.
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ತರಳಬಾಳು ಹುಣ್ಣಿಮೆ ಕೇವಲ ಕಾರ್ಯಕ್ರಮವಲ್ಲ. ಇದು ಜಾತಿ ಧರ್ಮಗಳ ಸಮ್ಮಿಲನದ ಅಮೃತ ಮಹೋತ್ಸವ. ತರಳಬಾಳು ಹುಣ್ಣಿಮೆ ನಡೆದ ಸ್ಥಳಗಳನ್ನು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಬೆಳೆಸಲು ತರಳಬಾಳು ಶ್ರೀಗಳು ಶ್ರಮಿಸುತ್ತಾ ಬಂದಿದ್ದಾರೆ ಎಂದರು.
ಸಮಾಜದಲ್ಲಿ ಅನ್ಯೋನ್ಯತೆ ತರುವ ಹಾಗೂ ಸಮಾಜದ ಗಣ್ಯರನ್ನು ಒಂದೇ ವೇದಿಕೆಗೆ ತರುವ ಹುಣ್ಣಿಮೆಯಾಗಿದೆ. ಇಲ್ಲಿನ ಸಂದೇಶಗಳನ್ನು ಇಲ್ಲೇ ಬಿಟ್ಟು ಹೋಗದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಹುಣ್ಣಿಮೆ ಸಾರ್ಥಕವಾಗುತ್ತದೆ ಎಂದವರು ಹೇಳಿದರು.