ಹೊನ್ನಾಳಿ, ಜ. 30- ಪಟ್ಟಣದ ಪುರಸಭೆಯ ಅಧ್ಯಕ್ಷರಾಗಿ ಸುಮಾ ಮಂಜುನಾಥ್ ಇಂಚರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಟಿ.ಹೆಚ್. ರಂಗನಾಥ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನದಲ್ಲಿ ಉಪಾಧ್ಯಕ್ಷರಾಗಿದ್ದ ರಂಜಿತ ಚನ್ನಪ್ಪ ಅವರು ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಸುಮಾ ಮಂಜುನಾಥ್ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇವರನ್ನು ಅವಿರೋಧ ಆಯ್ಕೆ ಎಂದು ತಹಶೀಲ್ದಾರ್ ತಿರುಪತಿ ಪಾಟೀಲ್ ಘೋಷಿಸಿದರು. ಚುನಾವಣಾ ಸ್ಥಳಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಭೇಟಿ ನೀಡಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ಮಾಜಿ ಅಧ್ಯಕ್ಷರಾದ ಬಾಬು ಹೋಬಳದಾರ್, ರಂಗಪ್ಪ, ಕೆ.ವಿ. ಶ್ರೀಧರ್, ಮುಖ್ಯಾಧಿಕಾರಿ ಎಸ್.ಆರ್. ವೀರಯ್ಯ ಸೇರಿದಂತೆ ಮುಖಂಡರಾದ ಮಂಜುನಾಥ್ ಇಂಚರ್, ನವೀನ್ ಇಂಚರ್ ಮತ್ತಿತರರಿದ್ದರು.