ಶಿವನಹಳ್ಳಿಯ ಹಿಮಗಿರಿ ಭವನದ ನೂತನ ಕಟ್ಟಡದ ಉದ್ಘಾಟನೆಯಲ್ಲಿ ರಂಭಾಪುರಿ ಜಗದ್ಗುರುಗಳು
ದಾವಣಗೆರೆ, ಜ. 27- ಪ್ರಸ್ತುತ ದಿನಗಳಲ್ಲಿ ಮನುಷ್ಯರಲ್ಲಿನ ಧರ್ಮನಿಷ್ಠೆ ಕೊರತೆಯಿಂದಾಗಿ ಧಾರ್ಮಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳು ಅಸ್ತವ್ಯಸ್ತಗೊಂಡು ಅಸಮಾಧಾನ, ಅತೃಪ್ತಿ ಮನೆ ಮಾಡಿದೆ ಎಂದು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಪ್ರಸನ್ನ ರೇಣುಕ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಹರಿಹರ ತಾಲ್ಲೂಕು ಶಿವನಹಳ್ಳಿ (ಷಂಷೀಪುರ) ಯ ದಕ್ಷಿಣ ಕೇದಾರ ವೈರಾಗ್ಯಧಾಮದಲ್ಲಿ ಶ್ರೀ ಹಿಮಗಿರಿ ಭವನ ನೂತನ ಕಟ್ಟಡದ ಉದ್ಘಾಟನೆ ಹಾಗೂ ಸನಾತನ ವೀರಶೈವ ಧರ್ಮಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮನುಷ್ಯ ಕೇವಲ ಹಣ ಮತ್ತು ತೋಳ್ಬಲಗಳ ಪ್ರಾಬಲ್ಯದಿಂದ ಸಾಂಘಿಕ ಜೀವನಕ್ಕೆ ಒತ್ತು ನೀಡದೇ, ವೈಯಕ್ತಿಕ ಬದುಕಿನಲ್ಲೇ ಕಾಲಹರಣ ಮಾಡುತ್ತಿದ್ದಾನೆ ಎಂದರು.
ವೀರಶೈವ ಧರ್ಮದ ಇತಿಹಾಸ, ಬೆಳೆದುಕೊಂಡು ಬಂದಂತಹ ಪರಂಪರೆ ಸಣ್ಣದಲ್ಲ. ಭವ್ಯವಾದ ಪರಂಪರೆಯ ತಪೋ ಶಕ್ತಿ ಇರುವುದನ್ನು ತಾವೆಲ್ಲಾ ಬಲ್ಲವರಾಗಿದ್ದೀರಿ. ಒಂದಾನೊಂದು ಕಾಲದಲ್ಲಿ ಪೀಠಗಳ ದರ್ಶನ ಮಾಡಬೇಕಾದರೆ ಅತ್ಯಂತ ಕಷ್ಟದ ಕೆಲಸವಾಗಿತ್ತು.
ಇವತ್ತಿನ ಆಧುನಿಕ ಜಗತ್ತಿನಲ್ಲಿ ಭಕ್ತರ ಸಾಮೀಪ್ಯದ ಕಡೆ ಬಂದು ನಿಜವಾದ ಧರ್ಮದ ಆದರ್ಶಗಳ ಮೌಲ್ಯಗಳನ್ನು ಪ್ರತಿಪಾದಿಸಿ ಜನರನ್ನು ಸನ್ಮಾರ್ಗದ ಕಡೆ ಕರೆತರುವ ಪ್ರಾಮಾಣಿಕ ಪ್ರಯತ್ನವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಇದನ್ನು ನಾಡಿನ ಭಕ್ತರು ಇವತ್ತಿನ ಸಂದರ್ಭದಲ್ಲಿ ಬಹಳಷ್ಟು ಬಲ್ಲರು. ಗ್ರಾಮೀಣ ಭಾಗದಿಂದ ನಿರೀಕ್ಷೆಗೂ ಮೀರಿ ಭಕ್ತ ಸಮೂಹ ಹರಿದು ಬಂದಿರುವಂತದ್ದು ಈ ಸಮಾರಂಭದ ವೈಶಿಷ್ಟ್ಯ ಎಂದು ಹೇಳಬೇಕಾಗಿಲ್ಲ ಎಂದರು.
ವೀರಶೈವ ಧರ್ಮದಲ್ಲಿ ಇರುವಂತಹ ಆದರ್ಶ ಮೌಲ್ಯಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ವೀರಶೈವ ಧರ್ಮದ ಉದಾತ್ತ ಮಾನವೀಯ ಮೌಲ್ಯಗಳನ್ನು ಎಲ್ಲಾ ಧರ್ಮ ಬಾಂಧವರು ಅಭಿಮಾನದಿಂದ ಅವುಗಳನ್ನು ಸ್ವಾಗತಿಸಿದ್ದಾರೆ. ಓರ್ವ ದಾರ್ಶನಿಕರು ಹೇಳುವ ಪ್ರಕಾರ ಜೈನರ ಅಹಿಂಸೆ, ಬೌದ್ಧರ ಸಮತೆ, ಕ್ರೈಸ್ತರ ಕರುಣೆ, ಇಸ್ಲಾಮರ ನಿಷ್ಠೆ, ಆರ್ಯರ ಜ್ಞಾನ, ದ್ರಾವಿಡರ ಭಕ್ತಿ ಇವು ಎಲ್ಲಿಯಾದರೂ ಒಂದು ಕಡೆ ಸಂಗಮಗೊಂಡಿವೆ ಎಂದರೆ ಅದು ವೀರಶೈವ ಧರ್ಮದಲ್ಲಿ ಸಾಧ್ಯ ಎಂದು ಹೇಳಿದರು.
ಪ್ರಸ್ತುತ ಧರ್ಮ ಮತ್ತು ಜಾತಿಗಳ ನಡುವೆ ಸಂಘರ್ಷಗಳು ಹೆಚ್ಚಾಗುತ್ತಿದ್ದು, ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಾಮರಸ್ಯದ ಪರಂಪರೆಯನ್ನು ಮೂಡಿಸಬೇಕಾದ ಜವಾಬ್ದಾರಿ ಧರ್ಮಪೀಠಗಳ ಮೇಲಿದೆ. ಆದರೆ ನಾಗರಿಕರ ಸಮಾಜದಲ್ಲಿ ಅನಾಗರೀಕತೆಯ ವರ್ತನೆಗಳು ಪೀಠಗಳಿಗೆ ತುಂಬಾ ನೋವನ್ನು ಉಂಟು ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸ್ಕಾರ, ಧಾರ್ಮಿಕ ಶ್ರದ್ಧೆ ಇಲ್ಲದ ಕಾರಣ ಸಮಾಜದಲ್ಲಿ ಅಶಾಂತಿ ಉಂಟಾಗಿದ್ದು, ವೀರಶೈವ ಧರ್ಮದ ಅಹಿಂಸೆ, ಸತ್ಯ, ಆಸ್ತೇಯ, ಪೂಜಾ ಧ್ಯಾನ, ಜಪ ಸೇರಿದಂತೆ ದಶ ಸೂತ್ರಗಳಿಂದ ಮಾತ್ರ ಮನುಷ್ಯ ಶ್ರೇಯಸ್ಸು ಕಾಣಲು ಸಾಧ್ಯ ಎಂದರು.
ಶಿವನಹಳ್ಳಿಯಲ್ಲಿ ದಕ್ಷಿಣ ಕೇದಾರ ವೈರಾಗ್ಯ ಧಾಮ ನಿರ್ಮಾಣ ಮಾಡುವ ಮೂಲಕ ಧರ್ಮದ ಪುನರುತ್ಥಾನಕ್ಕೆ ಭದ್ರ ಬುನಾದಿ ಹಾಕಿದಂತಾಗಿದೆ. ಸತತ ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಕಣ್ವಕುಪ್ಪೆ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯೇ ಸಾಕ್ಷಿ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಕೇದಾರ ಪೀಠದ ಜಗದ್ಗುರು ಡಾ. ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಇಂದಿನ ನಾಗರಿಕ ಸಮಾಜದಲ್ಲಿ ಅನಾಗರಿಕ ವರ್ತನೆಗಳೇ ಹೆಚ್ಚಾಗಿ ನಡೆಯುತ್ತಿದ್ದು, ವೀರಶೈವ ಧರ್ಮದ ತತ್ವಾದರ್ಶಗಳು, ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸಗಳನ್ನು ಪೀಠಗಳು ಮಾಡಬೇಕಾಗಿದೆ ಎಂದು ಹಿತ ನುಡಿದರು.
`ಹಿಮಗಿರಿ ಭವನ’ದ ಉದ್ಘಾಟನೆಯ ಜೊತೆಗೆ ಗುರು ನಿವಾಸ, ಯಾತ್ರಿ ನಿವಾಸ ಮತ್ತು ಪ್ರಸಾದ ನಿಲಯಗಳ ನಿರ್ಮಾಣದ ಭೂಮಿ ಪೂಜೆಯನ್ನೂ ಸಹ ನೆರವೇರಿಸಿದ್ದು, ಮುಂದೆ ಕೇದಾರ ಶಿಲಾಮಂಟಪ ಕೂಡ ನಿರ್ಮಾಣವಾಗಲಿದೆ. ದೀಪಾವಳಿ ಹಬ್ಬದೊಳಗೆ ನಿರ್ಮಾಣ ಕಾರ್ಯ ಪೂರ್ಣಗೊಂಡು ಈ ಪ್ರಯುಕ್ತ ಅಖಂಡ ಅನ್ನ ದಾಸೋಹ ಕೂಡ ನಡೆಯುವಂತಾಗಲಿ ಎಂದು ಆಶಿಸಿದರು.
ಮುಂದಿನ 5 ವರ್ಷಗಳಲ್ಲಿ 5 ಕೋಟಿ ಜನರ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿಗೊಳ್ಳಲಿದೆ. ಈ ಕೇಂದ್ರದ ಸಂರಕ್ಷಣೆಯ ಹೊಣೆಯನ್ನು ರಂಭಾಪುರಿ ಪೀಠಕ್ಕೆ ವಹಿಸಲಾಗುವುದು. ಕಣ್ವಕುಪ್ಪಿ ಶ್ರೀಗಳ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ ಎಂದರು.
ಭಕ್ತರ ಸಹಕಾರದೊಂದಿಗೆ ನಿರಂತರವಾಗಿ ಧಾರ್ಮಿಕ ಕಾರ್ಯಗಳು ನಡೆದುಕೊಂಡು ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಕೇದಾರನಾಥನ ಕಾರುಣ್ಯ ಕೂಡ ಇರುತ್ತದೆ ಎಂದು ಶುಭ ಹಾರೈಸಿದರು.
ಮಾ. 3 ರಿಂದ 5 ರವರೆಗೆ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆಯುವ ಶ್ರೀ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಮಾರಂಭದ ಪೂರ್ವ ಪ್ರಕಟಣೆಯನ್ನು ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯ ಅಧ್ಯಕ್ಷರಾದ ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ನೇತೃತ್ವ ವಹಿಸಿದ್ದ ಕಣ್ವಕುಪ್ಪೆ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನಾಂದಿ ನುಡಿಯನ್ನಾಡಿ, ಉಭಯ ಜಗದ್ಗುಗುರುಗಳಿಗೆ ಭಕ್ತಿ ಸಮರ್ಪಿಸಿದರು. ಶಿವಯೋಗಿ ಕಂಬಾಳಿಮಠ ಕಾರ್ಯಕ್ರಮ ನಿರೂಪಿಸಿದರು.
ಶ್ರೀನಿವಾಸ ಸರಡಗಿ, ಬಂಕಾಪುರ, ಸಿದ್ಧರಬೆಟ್ಟ, ಹುಕ್ಕೇರಿ, ಸೂಡಿ, ನೆಗಳೂರು, ಜುಕ್ತಿಮಠ, ಮುತ್ನಾಳು, ಕೊಟ್ಟೂರು ಹಿರೇಮಠ, ರಾಯಚೂರು ಕಿಲ್ಲೇ ಬೃಹನ್ಮಠ, ರಾಮಘಟ್ಟ, ದೇವಾಪುರ, ನವಿಲು ಕಲ್ಲು ಮಠ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ವೇದಿಕೆಯಲ್ಲಿದ್ದರು.
ಮಾಜಿ ಸಂಸದ ಮಂಜುನಾಥ್ ಕುನ್ನೂರು, ಮಾಜಿ ಶಾಸಕ ಬಿ.ಪಿ. ಹರೀಶ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ. ಸುರೇಶ್, ಇಂಜಿನಿಯರ್ ಕರಿಬಸಯ್ಯ, ಅಜ್ಜಂಪುರ ಶೆಟ್ರು ಮೃತ್ಯುಂಜಯ, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಶಿವನಹಳ್ಳಿಯಿಂದ ಹಿಮಗಿರಿ ಭವನದ ವರೆಗೆ ಉಭಯ ಜಗದ್ಗಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.