ಪೌರ ಕಾರ್ಮಿಕರ ಮೇಲೆ ಹೂವಿನ ಮಳೆ ಸುರಿಸಿ ಅಭಿನಂದನೆ

ಹರಪನಹಳ್ಳಿ, ಸೆ.23- ಪಟ್ಟ ಣದ ಸ್ವಚ್ಛತೆಯನ್ನು ಕಾಪಾಡುತ್ತಿರುವ ತಮಗೆ ಸರ್ಕಾರ ರೂಪಿಸಿರುವ ಗೃಹ ಭಾಗ್ಯ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪೌರ ಕಾರ್ಮಿಕರಿಗೆ ಪುರಸಭಾ ಮುಖ್ಯಾಧಿಕಾರಿ ನಾಗರಾಜನಾಯ್ಕ ತಿಳಿಸಿದ್ದಾರೆ.

ಇಲ್ಲಿನ ಪುರಸಭಾ ಸಭಾಂಗಣ ದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಗೃಹ ಭಾಗ್ಯ ಯೋಜನೆಯಲ್ಲಿ ಸ್ವಂತ ಮನೆ ನಿರ್ಮಿಸಲು ಅವಕಾಶವಿದ್ದು, ಸ್ವಂತ ನಿವೇಶನವಿದ್ದರೆ ಅರ್ಜಿ ಸಲ್ಲಿಸಿದರೆ, ಮನೆ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ಪೌರ ಕಾರ್ಮಿಕರಿಗೆ ತಿಳಿಸಿದರು. ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಎರಡು ಎಕರೆ ಜಮೀನನ್ನು ಮಂಜೂರು ಮಾಡಲು ತಹಶೀಲ್ದಾರ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮಂಜೂರಾತಿ ಸಿಕ್ಕರೆ ಅಲ್ಲಿ ಇದೇ ಯೋಜನೆಯಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಅವರು ಪೌರ ಕಾರ್ಮಿಕರಿಗೆ ತಿಳಿಸಿದರು.

ಸಮುದಾಯ ಆರೋಗ್ಯ ಸಂಘಟಕ ಲೋಕ್ಯಾನಾಯ್ಕ ಮಾತನಾಡಿ, ದೇಶವನ್ನು ಸೈನಿಕರು ಕಾಯುತ್ತಿದ್ದರೆ ಪಟ್ಟಣದ ಸಾರ್ವಜನಿಕರ ಆರೋಗ್ಯವನ್ನು ನೀವು ಕಾಯುತ್ತಿದ್ದೀರಿ, ಗೃಹ ಭಾಗ್ಯ ಯೋಜನೆಯಲ್ಲಿ ರಾಜ್ಯದಿಂದ 6 ಲಕ್ಷ ರು. ಕೇಂದ್ರದಿಂದ 7.50 ಲಕ್ಷ ರೂ. ಬಂದಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.

ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಪ್ರಸ್ತಾವಿಕವಾಗಿ ಮಾತನಾಡಿದರು. ಪೌರ ಕಾರ್ಮಿಕರ ಸಂಘದ ಸ್ಥಳೀಯ ಅಧ್ಯಕ್ಷ ಕೆಂಚನಹಳ್ಳಿ ಹನುಮಂತಪ್ಪ, ಕಂದಾಯ ಅಧಿಕಾರಿ ಸವಿತಾ ಮಾತನಾಡಿದರು. 

ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಪೌರ ಕಾರ್ಮಿಕರ ಮೇಲೆ ಹೂವಿನ ಮಳೆ ಸುರಿಸಿ ಅಭಿನಂದನೆ ಸಲ್ಲಿಸಿದರು. ಪೌರ ಕಾರ್ಮಿಕ, ಸಂಘದ ಉಪಾಧ್ಯಕ್ಷ ಶಿವಪ್ಪ, ಡಿ.ಲಿಂಗಪ್ಪ, ಕಚೇರಿ ವ್ಯವಸ್ಥಾಪಕ ಅಶೋಕ್, ಸುರೇಶ್ ಇತರರು ಉಪಸ್ಥಿತರಿದ್ದರು.  

error: Content is protected !!