ದಾವಣಗೆರೆ, ಆ.4- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಭೂಮಿ ಪೂಜೆ ಇಂದು ಬುಧವಾರ ನಡೆಯಲಿದ್ದು, ದೇವನಗರಿಯ ರಾಮಭಕ್ತರು ಆ ಕ್ಷಣಕ್ಕಾಗಿ ಕಾತರರಾಗಿದ್ದಾರೆ.
ಹಲವಾರು ವರ್ಷಗಳ ಹೋರಾಟದ ಫಲವಾಗಿ ನಿರ್ಮಾಣವಾಗುತ್ತಿರುವ ಮಂದಿರದ ಭೂಮಿ ಪೂಜೆ ನೋಡಲು ನಾಡಿನ ಜನರ ಸಂತಸ ಇಮ್ಮಡಿಕೊಂಡಿದ್ದು, ಇದಕ್ಕೆ ದಾವಣಗೆರೆಯ ಜನರೂ ಹೊರತಾಗಿಲ್ಲ.
ನಗರದ ಹೊಂಡದ ವೃತ್ತದಲ್ಲಿ ಶ್ರೀರಾಮನ ಬೃಹತ್ ಕಟೌಟ್ ನಿರ್ಮಿಸಲಾಗಿದೆ. ಬುಧವಾರ ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಯ ಯಶಸ್ಸಿಗಾಗಿ ನಗರದ ಹಿಂದೂ ಪರ ಸಂಘಟನೆಗಳಿಂದ ಪೂಜೆ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ನಾಡಿನ ಸೇವೆ ಸಲ್ಲಿಸಿ ಹುತಾತ್ಮರಾದವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ಜೊತೆಗೆ ರಾಮ ಮಂದಿರ ನಿರ್ಮಾಣದ ಖುಷಿ ಹಂಚಿಕೊಳ್ಳಲು ಸಾರ್ವಜನಿಕರಿಗೆ ಸಿಹಿ ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಯೋಧ್ಯೆ, ಶ್ರೀರಾಮನ ಕುರಿತ ಚಿತ್ರಗಳು ಹರಿದಾಡು ತ್ತಿವೆ. ವಾಟ್ಸಾಪ್ ಸ್ಟೇಟಸ್, ಡಿಪಿಗಳಲ್ಲಿದ್ದ ವೈಯಕ್ತಿಕ ಚಿತ್ರಗಳ ಸ್ಥಾನಗಳನ್ನು ಶ್ರೀರಾಮನ ಚಿತ್ರಗಳು ತುಂಬಿವೆ. ನಗರದ ಹಳೇ ಭಾಗದಲ್ಲಿಯೇ ಶ್ರೀರಾಮನ ಧ್ಯಾನ ಹೆಚ್ಚಾಗಿದೆ. ಇದಕ್ಕೆ ಕಾರಣವೂ ಇದೆ.
ಅಯೋಧ್ಯೆಗೆ 15 ಕೆಜಿ ಬೆಳ್ಳಿ ಇಟ್ಟಿಗೆ : ಅಕ್ಟೋಬರ್ 6ಕ್ಕೆ ದಾವಣಗೆರೆಗೆ ರಥಯಾತ್ರೆ ಆಗಮಿಸಿ 30 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ದಾವಣಗೆರೆಯಿಂದ 15 ಕೆ.ಜಿ. ಬೆಳ್ಳಿ ಇಟ್ಟಿಗೆಯನ್ನು ಅಯೋಧ್ಯೆಗೆ ಕಳುಹಿಸಿಕೊಡಲಾಗುತ್ತಿದೆ.
ಈ ಇಟ್ಟಿಗೆ ಮೇಲೆ ರಥಯಾತ್ರೆ ಬಂದ ವೇಳೆ ಹುತಾತ್ಮರಾದ ಎಂಟು ಜನರ ಹೆಸರನ್ನು ಬರೆಸಲಾಗುತ್ತಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಹೇಳಿದ್ದಾರೆ.
ಇದರೊಟ್ಟಿಗೆ ಅಂದಿನ ಗಲಭೆಯಲ್ಲಿ ಗಾಯಗೊಂಡ ಕುಟುಂಬ ವರ್ಗವನ್ನೂ ಸನ್ಮಾನಿಸುವ ಕಾರ್ಯಕ್ರಮವನ್ನು ಹಿಂದೂ ಪರ ಸಂಘಟನೆಗಳು ಹಮ್ಮಿಕೊಂಡಿವೆ.
1992ರಲ್ಲಿ ನಡೆದ ರಾಮ ಜ್ಯೋತಿ ರಥಯಾತ್ರೆ ಜಗಳೂರು ಕಡೆಯಿಂದ ದಾವಣಗೆರೆ ಪ್ರವೇಶಿಸಿತ್ತು. ರಥಯಾತ್ರೆ ಸ್ವಾಗತಕ್ಕಾಗಿ ಬೇತೂರು ರಸ್ತೆ ವೆಂಕಟೇಶ್ವರ ವೃತ್ತದಲ್ಲಿ ಸಾವಿರಾರು ಜನ ಜಮಾಯಿಸಿದ್ದರು. ಆಗ ಯಾತ್ರೆಯ ಮೆರವಣಿಗೆ ಯಾವ ರಸ್ತೆಯಲ್ಲಿ ಸಾಗಬೇಕು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಭೆ ಸೃಷ್ಟಿಯಾಗಿತ್ತು.
ಪೊಲೀಸರು ಲಾಠಿ ಪ್ರಹಾರದ ಜತೆ ಗೋಲಿಬಾರ್ ಮಾಡಿದ್ದರು. ನಗರದ ಚಂದ್ರಶೇಖರ್ ಸಿಂಧೆ, ಆರ್.ಜಿ. ಶ್ರೀನಿವಾಸ್ ರಾವ್, ಶಿವಾಜಿ ರಾವ್ ಘಾಟೆ, ರಾಮಕೃಷ್ಣ ಸಾವಳಗಿ, ದುರ್ಗಪ್ಪ ಎಲೆಬೇತೂರು, ಚಿನ್ನಪ್ಪ, ಅಂಬರೀಶ್, ಎಚ್. ನಾಗರಾಜ್ ಸೇರಿ ಎಂಟು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಸುಮಾರು 72 ಕಾರ್ಯಕರ್ತರು ಗಾಯಗೊಂಡಿದ್ದರು.
ಇದೀಗ ನ್ಯಾಯಾಲಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸುತ್ತಿದ್ದಂತೆ, ನಗರದ ಜನತೆಯಲ್ಲೂ ತೀವ್ರ ಸಂತಸ ವ್ಯಕ್ತವಾಗಿತ್ತು. ಇದೀಗ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತಿರುವುದು ಹಳೆ ಭಾಗದಲ್ಲಿ ಸಂತಸ ಇಮ್ಮಡಿಸಿದೆ.
ಸುದ್ದಿಯಾಗಿದ್ದ ಹರಿಹರ: ಹರಿಹರದ ತುಂಗಾ ಭದ್ರ ನದಿ ತಟದಲ್ಲಿರುವ ದೇವಸ್ಥಾನದಲ್ಲಿ ಅಯೋಧ್ಯೆ ಯಲ್ಲಿದ್ದ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರ ಮೂಲ ವಿಗ್ರಹಗಳಿವೆ ಎಂಬ ಸುದ್ದಿ ಹರಡಿತ್ತು.
ಅಯೋಧ್ಯೆಯ ಮೇಲೆ ಮೊಘಲ್ ದೊರೆ ಬಾಬರ್ ಆಕ್ರಮಣ ಮಾಡಿದ ಸಂದರ್ಭದಲ್ಲಿ ಅಯೋಧ್ಯೆಯ ರಾಮ ಮಂದಿರದ ಅರ್ಚಕರು ಮೂಲ ವಿಗ್ರಹಗಳನ್ನು ಕಾಪಾಡಲು ಅಲ್ಲಿಂದ ವಿಗ್ರಹಗಳೊಂದಿಗೆ ತಪ್ಪಿಸಿಕೊಂಡು ಬಂದು, ಇಲ್ಲಿಟ್ಟಿದ್ದರು ಎಂದು ಹೇಳಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಆ ಸುದ್ದಿ ಸುಳ್ಳು ಎಂದು ಜನರಿಂದಲೇ ನಿರ್ಲಕ್ಷಿಸಲ್ಪಟ್ಟಿತು