ಚಿತ್ರದುರ್ಗ ಆ. 1 – ಸಂಪ್ರದಾಯದ ಮೇಲೆ ಸಮಾಜ ನಡೆಯಬೇಕೆಂಬ ಕಟ್ಟುಕಟ್ಟಳೆಗಳನ್ನು ವಿಧಿಸಿಕೊಂಡು ಬರಲಾಗಿದೆ. ಪ್ರಾಚೀನ ಕಾಲದಿಂದಲೂ ಆಚರಣೆಗಳು ನಡೆದುಕೊಂಡು ಬಂದಿವೆ. ಅಂಧಾನುಕರಣೆ ಮತ್ತು ವಿಮೋಚನೆಯ ಮೇಲೆ ಚಿಂತನೆ ಸಾಗುತ್ತಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಇಲ್ಲಿನ ಮುರುಘಾ ಮಠದಿಂದ ಶನಿವಾರ ನಡೆದ ಶ್ರಾವಣ ದರ್ಶನ 12ನೇ ದಿನದ ಫೇಸ್ಬುಕ್ ಮತ್ತು ಯುಟ್ಯೂಬ್ ಲೈವ್ ಕಾರ್ಯಕ್ರಮದಲ್ಲಿ ಅಂಧಾನುಕರಣೆ ಮತ್ತು ಅದರ ವಿಮೋಚನೆ ವಿಷಯ ಕುರಿತು ಶರಣರು ಆಶೀರ್ವಚನ ನೀಡಿದರು.
ವಿಷಯವಿಲ್ಲದೆ ನಾವು ಯಾವುದೇ ಕಾರ್ಯಕ್ರಮ ನಡೆಸುವುದಿಲ್ಲ. ಹಲವಾರು ಸಭೆ- ಸಮಾರಂಭಗಳಲ್ಲಿ ನಿರ್ದಿಷ್ಟವಾದ ವಿಷಯ ಇಲ್ಲದಿದ್ದರೆ ಆ ಸಭೆ ಗೊಂದಲಮಯವಾಗುತ್ತದೆ. ವಿಚಾರವನ್ನು ನೀಡಿದರೆ ಪ್ರತಿಯೊಬ್ಬರು ಆ ವಿಷಯದ ಮೇಲೆ ಮಾತನಾಡುತ್ತಾರೆ. ಅಂಧಾನುಕರಣೆಯಲ್ಲಿ ಅನುಕರಣೆ ಇದೆ. ಇದರಲ್ಲಿ ಎರಡು ಬಗೆ.
ನೇತ್ಯಾತ್ಮಕವಾಗಿರುವ ಅನುಕರಣೆ : ಚಲನಚಿತ್ರಗಳನ್ನು ನೋಡಿ ಸಾವಿಗೆ ಶರಣಾಗಬಾರದು. ನಾವು ಪರೀಕ್ಷಾ ಭಯ ಬಿಡಿಸಲು ಸಾವಿರಾರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದೇವೆ. ಸಂವಾದ ಸಂದೇಹ ನಿವಾರಿಸುತ್ತದೆ. ಸಂದೇಹಗಳು ಜೀವನದಲ್ಲಿ ಇರಬಾರದು. ಸಂವಾದಗಳಿಗೆ ಅನುಭವ ಮಂಟಪ ಮುಕ್ತ ವಿಶ್ವವಿದ್ಯಾಲಯವಾಗಿತ್ತು. ನಾವು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುವಾಗ ಭೂತ ಪ್ರೇತಗಳಿಗೆ ಹೆದರಬಾರದು ಎಂದು ಹೇಳಿದ್ದೇವೆ.
ಧನಾತ್ಮಕವಾಗಿರುವ ಅನುಕರಣೆ : ಇಲ್ಲಿ ಅತ್ಯಂತ ಸಕಾರಾತ್ಮಕವಾಗಿರುವ ಅನುಕರಣೆ ನೋಡಬಹುದು. ದಾರ್ಶನಿಕರು ಜೀವನ್ಮುಖಿ ಪ್ರಯೋಗಗಳನ್ನು ಮಾಡಿದ್ದಾರೆ. ಬಂಗಾರದ ಮನುಷ್ಯ ಒಂದು ಸಕಾರಾತ್ಮಕವಾಗಿರುವ ಸಿನೆಮಾ. ದುಡಿಮೆಯ ಬಗೆಗೆ ಆಸಕ್ತಿ ಹುಟ್ಟಿಸಿದಂತಹ ಸಿನೆಮಾ ಅದು. ಇಂತವುಗಳಿಂದ ಧನಾತ್ಮಕವಾಗಿ ಯೋಚಿಸಬೇಕು. ಬಸವಣ್ಣ, ಬುದ್ಧ, ಗಾಂಧೀಜಿ ಮೊದಲಾದವರು ಧನಾತ್ಮಕವಾದ ಅನುಕರಣೆ ಮಾಡಿದರು. ಗಾಂಧೀಜಿ ಸತ್ಯಹರಿಶ್ಚಂದ್ರ ನಾಟಕ ನೋಡಿ ಸತ್ಯಕ್ಕೆ ಪ್ರಭಾವಿತರಾದರು. ನೋಡಿದವರೆಲ್ಲರು ಗಾಂಧೀಜಿ ಆಗಲು ಸಾಧ್ಯವಿಲ್ಲ. ಇಲ್ಲಿ ಸಮರ್ಪಣಾಭಾವದ ಕೊರತೆ ಎದ್ದುಕಾಣುತ್ತದೆ. ಜನರು ಸಿನೆಮಾ ಮತ್ತು ಧಾರಾವಾಹಿಗಳನ್ನು ಮನರಂಜನೆಗಾಗಿ ನೋಡುತ್ತಾರೆ. ಶ್ರವಣಕುಮಾರನ ಪಿತೃಭಕ್ತಿಯನ್ನು ಗಾಂಧೀಜಿ ನೋಡುತ್ತಾರೆ. ಹಿರಿಯರ ಬಗ್ಗೆ ಗೌರವ ಇರಬೇಕೆಂದು ಗಾಂಧೀಜಿ ನೋಡಿ ಕಲಿಯುತ್ತಾರೆ. ಜನರು ಬದುಕನ್ನು ಧನಾತ್ಮಕವಾಗಿ ನೋಡಬೇಕು.
ದಾವಣಗೆರೆಯ ಶಿವಯೋಗಾಶ್ರಮದಲ್ಲಿ ನಡೆದ ಶರಣ ಸಂಸ್ಕತಿ ಉತ್ಸವದಲ್ಲಿ ದೇವದಾಸಿಯರ ಗಂಟುಕಟ್ಟಿದ ಕೂದಲುಗಳಿಗೆ ಕತ್ತರಿ ಹಾಕಿ ಕತ್ತರಿಸಲಾಯಿತು. ಮಾಯಕೊಂಡದ ಹತ್ತಿರವಿರುವ ಮದಕರಿ ನಾಯಕರ ಸಮಾಧಿಗೆ ಯಾರೋ ವಾಮಾಚಾರ ಮಾಡಿದ್ದೂ ಇದೆ. ಮದಕರಿ ನಾಯಕರು ಕೆರೆ ಕಟ್ಟೆ ಕಟ್ಟಿ ಉತ್ತಮ ಆಡಳಿತ ನೀಡಿದವರು. ಅವರ ಸಮಾಧಿ ಹತ್ತಿರ ಹೋಗಿ ಅವರಿಗೆ ಅಗೌರವ ತೋರಿಸಬಾರದು ಎಂದು ಖುದ್ದಾಗಿ ನಾನೇ ಹೋಗಿ ಜಾಗೃತಿ ಮೂಡಿಸಿ ಬಂದಿದ್ದೇನೆ. ಅಮಾವಾಸ್ಯೆಯಲ್ಲಿ ಮಧ್ಯರಾತ್ರಿ ವಾಮಾಚಾರ ಮಾಡಲು ಚಿಕ್ಕಮಕ್ಕಳನ್ನು ಅಪಹರಿಸಿ ಬಲಿ ಕೊಡುವ ಅಮಾನವೀಯ ಘಟನೆಗಳು ನಡೆದಿವೆ. ಗುಲ್ಬರ್ಗ ಜಿಲ್ಲೆಯ ಆ ಗ್ರಾಮಕ್ಕೆ ಕೆಲವು ಚಿಂತಕರೊಂದಿಗೆ ಹೋಗಿ ಜಾಗೃತಿ ಮೂಡಿಸಿ ಬಂದಿದ್ದೇವೆ ಎಂದು ಶರಣರು ವಿವರಿಸಿದರು.