ದಾವಣಗೆರೆ, ಜು.22- ನಗರದ ಲಯನ್ಸ್ ಕ್ಲಬ್ಬಿನ ನೂತನ ಅಧ್ಯಕ್ಷ ಕೆ.ಎಂ. ವಿಜಯಕುಮಾರ್ ಅವರ ಅಧಿ ಕಾರವಧಿಯಲ್ಲಿ ನಡೆಸಲುದ್ದೇಶಿಸಿರುವ ಸೇವಾ ಕಾರ್ಯ ಕ್ರಮಗಳಿಗೆ ಶಾಲಾ ಶಿಕ್ಷಕರಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸುವುದರ ಮೂಲಕ ಚಾಲನೆ ನೀಡಲಾಯಿತು.
ಲಯನ್ಸ್ ಭವನದಲ್ಲಿ ಮೊನ್ನೆ ಏರ್ಪಾಡಾಗಿದ್ದ ಸರಳ ಕಾರ್ಯಕ್ರಮದಲ್ಲಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಶಿಕ್ಷಕರಿಗೆ ಕಿಟ್ ಗಳನ್ನು ವಿತರಿಸಿ, ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ವಿಜಯಕುಮಾರ್ ಮತ್ತು ಅವರ ತಂಡದವರಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಲೆಕ್ಕ ಪರಿಶೋಧಕ ಬಸವರಾಜ್ ಜಿ. ಒಡೆಯರ್ ಅವರು ತಾಂಡ ವವಾಡುತ್ತಿರುವ ಕೊರೊನಾದ ಬಗ್ಗೆ ವ್ಯಾಕುಲತೆ ವ್ಯಕ್ತಪಡಿಸಿ, ಇಂಥ ಕ್ಲಿಷ್ಟಕರ ಸಮಯದಲ್ಲಿ ಲಯನ್ಸ್ ಕ್ಲಬ್ ನಂತಹ ಸಾಮಾಜಿಕ ಸಂಘ – ಸಂಸ್ಥೆಗಳು ನಿರ್ಗತಿಕರು ಮತ್ತು ಬಡವರಿಗೆ ಮಾಡುತ್ತಿರುವ ಸೇವೆಯನ್ನು ಪ್ರಶಂಸಿಸಿದರು.
ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಜಿ.ನಾಗನೂರು, ಲಯನ್ಸ್ ವಲಯಾಧ್ಯಕ್ಷ ವೈ.ಬಿ. ಸತೀಶ್, ಲಯನ್ಸ್ ಟ್ರಸ್ಟ್ ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಮೃತ್ಯುಂಜಯ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಲಯನ್ಸ್ ಕ್ಲಬ್ ಖಜಾಂಚಿ ಸಂಪತ್ ಬಿ. ಹಳ್ಳಿಕೇರಿ ಕಾರ್ಯಕ್ರಮ ನಿರೂಪಿಸಿದರು.