ಆಟೋ, ಟ್ಯಾಕ್ಸಿ ಚಾಲಕರ ಕಲ್ಯಾಣಕ್ಕೆ ಒತ್ತು ನೀಡಬೇಕು

ದಾವಣಗೆರೆ, ಜೂ.26- ಆಟೋ ಹಾಗೂ ಟ್ಯಾಕ್ಸಿ ಚಾಲಕರು ಬಳಸುವ ಪೆಟ್ರೋಲ್ ಮೇಲೆ ಸರ್ಕಾರ ತೆರಿಗೆ ವಿಧಿಸುತ್ತದೆ. ವರಮಾನ ನೀಡುತ್ತಿರುವ ಈ ಸಮೂಹದ ಕಲ್ಯಾಣಕ್ಕೆ ರಾಜ್ಯ ಸರ್ಕಾರ ಒತ್ತು ನೀಡುತ್ತಿಲ್ಲ ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಆರೋಪಿಸಿದರು.

ನಗರದ ಕಾಂ. ಪಂಪಾಪತಿ ಭವನದಲ್ಲಿ ಇಂದು ಏರ್ಪಾಡಾಗಿದ್ದ ಜಿಲ್ಲಾ ಚಾಲಕರ ಕ್ಷೇಮಾಭಿವೃದ್ಧಿ ಸಂಘವನ್ನು ಚಾಲಕರಿಗೆ ಸದಸ್ಯತ್ವದ ಬ್ಯಾಡ್ಜ್ ವಿತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಆಟೋ ಮೊಬೈಲ್ ಬಿಡಿ ಭಾಗಗಳ ಮೇಲೆ ಚಾಲಕರು ಹಾಗೂ ಮಾಲೀಕರ ಸೆಸ್ ಸಂಗ್ರಹಿಸಿ ಈ ಕಲ್ಯಾಣ ಮಂಡಳಿಗೆ ನೀಡುವ ಮುಖೇನ ಚಾಲಕರ ಹಿತಾಸಕ್ತಿ ಕಾಪಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಸಾವಿರಾರು ವಾಹನಗಳು ಪ್ರತಿ ದಿನ ತಯಾರಾಗಲಿದ್ದು, ಈ ವಾಹನಗಳು ‌ಹಾಗೂ ಬಿಡಿ ಭಾಗಗಳ ಮೇಲೆ ಸರ್ಕಾರ ಸೆಸ್‌ ಸಂಗ್ರಹಿಸಿದರೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತದೆ. ಆ ಮೂಲಕ ಚಾಲಕರಿಗೆ ಸಾಮಾಜಿಕ ಭದ್ರತೆ, ಅಪಘಾತವಾದರೆ ಅವರ ಕುಟುಂಬಕ್ಕೆ ಹಲವು ಸೌಲಭ್ಯಗಳನ್ನು ಒದಗಿಸಬಹುದು ಎಂದು ತಿಳಿಸಿದರು.

ಪ್ರಸ್ತುತ ಚಾಲಕರು ಕನಿಷ್ಠ ಕೂಲಿಯೂ ಇಲ್ಲದೇ ಅಭದ್ರತೆಯಲ್ಲಿ ಬದುಕುತ್ತಿದ್ದಾರೆ. ಪ್ರವಾಸಿಗರು ಬಂದರಷ್ಟೇ ದುಡಿಮೆ. ಅದಕ್ಕಾಗಿ ಹಗಲು-ರಾತ್ರಿ ಎನ್ನದೇ ಕಾದು ಕುಳಿತುಕೊಳ್ಳುವಂತಾಗಿದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ಕೂಲಿ ಇದೆ. ಆದರೆ ಅದೇ ಇಲಾಖೆಯಲ್ಲಿ ಕೆಲಸ ಮಾಡುವ ಚಾಲಕರಿಗೆ ಇಲ್ಲವಾಗಿದೆ. ರಾಜ್ಯದಲ್ಲಿ 8 ರಿಂದ 10 ಲಕ್ಷ ಚಾಲಕರು ಕೋವಿಡ್–19 ಸಂದರ್ಭದಲ್ಲಿ ದುಡಿಮೆ ಇಲ್ಲದೇ ಮತ್ತಷ್ಟು ಸಂಕಷ್ಟ ಪಡುತ್ತಿದ್ದಾರೆ. ಸಂಘಟನೆ ಇಲ್ಲವಾದರೆ ಹೋರಾಟ ಅಸಾಧ್ಯ. ಸಂಘಟನೆ ಬಹು ಮುಖ್ಯವೆಂದರು.

ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ಸರ್ಕಾರ ಘೋಷಿಸಿದ 5 ಸಾವಿರ ಪರಿಹಾರ ಕೆಲವು ಕಡೆ ಮಾತ್ರ ತಲುಪಿದ್ದು, ಮತ್ತೆ  ಕೆಲವು ಕಡೆ ತಲುಪಬೇಕಿದೆ. ಸಂಘಟನೆ ಮಾಡದಿದ್ದರೆ ಅದು ಕೇವಲ ದಾಖಲೆಯಲ್ಲೇ ಉಳಿಯಲಿದೆ ಎಂದರು.

ಜಿಲ್ಲಾ ಗೌರವಾಧ್ಯಕ್ಷ ಹೆಚ್‌.ಜಿ. ಉಮೇಶ್ ಆವರಗೆರೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರು ಪಾರ್ಕಿಂಗ್ ಗೆ ಪ್ರತ್ಯೇಕ ಜಾಗದ ಅವಶ್ಯವಿದೆ. ಅಲ್ಲದೇ ಚಾಲಕರಿಗೆ ಕಲ್ಯಾಣ ಮಂಡಳಿ ರಚನೆಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಎಐಟಿಯುಸಿ ಜಿಲ್ಲಾ ಖಜಾಂಚಿ ಆನಂದರಾಜ್, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್. ಪರಮೇಶಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಸುಭಾಷ್, ಸಂಘಟನೆ ಪೋಷಕರಾದ ಕೆ.ಡಿ. ದೀಕ್ಷಿತ್, ಹೆಚ್. ರಾಜಪ್ಪ, ಜಿಲ್ಲಾ ಕಾರ್ಯದರ್ಶಿ
ಟಿ. ಮಂಜುನಾಥ್, ಟಿ. ಪ್ರಭು, ಬಿ.ಎನ್. ಸುಧೀಂದ್ರ ಕುಮಾರ್ ಸೇರಿದಂತೆ ಇತರರು ಇದ್ದರು. ಜಿಲ್ಲಾ ಖಜಾಂಚಿ ಕೆ.ಎಂ. ರಮೇಶ್‌ ಸ್ವಾಗತಿಸಿದರು.

error: Content is protected !!