ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ

ವಿದ್ಯಾರ್ಥಿಗಳ ಜೊತೆ ಆಡಳಿತವೂ ಎದುರಿಸಿತು ಕೊರೊನಾ ಪರೀಕ್ಷೆ !

ದಾವಣಗೆರೆ, ಜೂ. 25 – ಕೊರೊನಾ ಪ್ರಕರಣಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿಗೂ ಹರಡುತ್ತಿರುವುದರ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಗುರುವಾರ ಶುಭಾರಂಭ ಕಂಡಿದೆ.

ಕೊರೊನಾ ಸಾಮಾಜಿಕ ಅಂತರದ ನಡುವೆ ಪಿ.ಯು.ಸಿ. ಇಂಗ್ಲಿಷ್ ಪರೀಕ್ಷೆಗೆ ಹೋಲಿಸಿದರೆ, ಎಸ್ಸೆಸ್ಸೆಲ್ಸಿಯ ಮೊದಲ ದಿನದ ಇಂಗ್ಲಿಷ್ ಪರೀಕ್ಷೆ ಹೆಚ್ಚು ಶಿಸ್ತು ಬದ್ಧ ಹಾಗೂ ವ್ಯವಸ್ಥಿತವಾಗಿತ್ತು.

ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಮಾತ್ರ ಒರೆಗೆ ಹಚ್ಚುತ್ತಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಈ ಬಾರಿ ಕೊರೊನಾ ಕಾರಣದಿಂದಾಗಿ ಸರ್ಕಾರದಿಂದ ಹಿಡಿದು ಸಿಬ್ಬಂದಿಯವರೆಗೆ ಎಲ್ಲರನ್ನೂ ಒರೆಗೆ ಹಚ್ಚಿರುವುದು ವಿಶೇಷ.

ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಜೊತೆಗೆ ಸ್ಕೌಟ್ಸ್ ಹಾಗೂ ಆರೋಗ್ಯ ಇಲಾಖೆಯೂ ಈ ಬಾರಿ ಪರೀಕ್ಷೆಗೆ ಕೈ ಜೋಡಿಸಿದೆ. ಸ್ಕೌಟ್ಸ್ ಶಿಕ್ಷಕ ಸ್ವಯಂ ಸೇವಕರು ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿಯೊಂದು ಪರೀಕ್ಷಾ ಕೇಂದ್ರದ ಎದುರು ಹಾಜರಿದ್ದರು. ವಿದ್ಯಾರ್ಥಿಗಳ ಆಗಮನಕ್ಕೆ ಮುಂಚೆಯೇ ಪೊಲೀಸರಿಂದ ಹಿಡಿದು ಶಾಲಾ ಸಿಬ್ಬಂದಿಯವರೆಗೆ ಎಲ್ಲರೂ ಸಜ್ಜಾಗಿ ನಿಂತಿದ್ದರು. ವಿದ್ಯಾರ್ಥಿಗಳು ಗುಂಪು ಗೂಡದಂತೆ ನೇರ ವಾಗಿ ಪರೀಕ್ಷಾ ಕೋಣೆಗೆ ಕಳಿಸಲು ನೆರವಾಗುತ್ತಿದ್ದರು. ಶಾಲೆಯ ಬಾಗಿಲಿನಿಂದ ಹಿಡಿದು ಕಾರಿಡಾರ್‌ಗೆ ಸಾಗಿ ಕೋಣೆ ಸೇರುವ ಎಲ್ಲ ಹಂತಗಳಲ್ಲೂ ಶಿಕ್ಷಕರು ಸಾಮಾಜಿಕ ಅಂತರದ ಬಗ್ಗೆ ನಿಗಾ ವಹಿಸುತ್ತಿದ್ದರು.

ಬಹುತೇಕ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ದ್ದರಾದರೂ, ಕೆಲವರು ಕರ್ಚೀಫ್ ಕಟ್ಟಿಕೊಂಡು ಬಂದಿದ್ದರು. ಶಿಕ್ಷಣ ಇಲಾಖೆ ಹಾಗೂ ಸ್ಕೌಟ್ಸ್ ಮೂಲಕ ಎಲ್ಲ ಮಕ್ಕಳಿಗೆ ತಲಾ ಎರಡು ಮಾಸ್ಕ್ ನೀಡುತ್ತಿದ್ದರಿಂದ ಇದೇನೂ ಸಮಸ್ಯೆಯಾಗಲಿಲ್ಲ.

ವಿದ್ಯಾರ್ಥಿಗಳಷ್ಟೇ ಅಲ್ಲದೇ, ಅವರ ಮೊಬೈಲ್‌ಗಳನ್ನು ಸುರಕ್ಷಿತವಾಗಿಡಲೂ ಸಹ ವ್ಯವಸ್ಥೆ ಮಾಡಲಾಗಿತ್ತು.  ವಿದ್ಯಾರ್ಥಿಗಳು ಮೊಬೈಲ್ ತಂದಿದ್ದರೆ, ಅದನ್ನು ಪ್ರತ್ಯೇಕ ಕವರ್‌ ಗಳಲ್ಲಿ ಇಡಲಾಗುತ್ತಿತ್ತು. ಇದಕ್ಕಾಗಿ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನೇಮಿಸಲಾಗಿತ್ತು.

ನಗರದ ಶಿವಕುಮಾರಸ್ವಾಮಿ ಬಡಾವಣೆ ಯಲ್ಲಿರುವ ಸೇಂಟ್ ಜಾನ್ಸ್ ಶಾಲೆಗೆ ಭೇಟಿ ನೀಡಿದಾಗ ತೇಜಸ್ವಿನಿ ಎಂಬ ಕೈ ವೈಕಲ್ಯಕ್ಕೆ ಸಿಲು ಕಿದ್ದ ಯುವತಿಯೊಬ್ಬರು ಪರೀಕ್ಷೆಗೆ ಹಾಜರಾಗಿ ದ್ದರು. ನನ್ನ ಕೈ ದುರ್ಬಲವಾಗಿದೆ, ಹೀಗಾಗಿ ಉತ್ತರ ಬರೆಯಲು ಒಂದು ಗಂಟೆ ಹೆಚ್ಚುವರಿ ಸಮಯ ನೀಡಲಾಗಿದೆ ಎಂದವರು ಹೇಳಿದರು.

ಇದೇ ಶಾಲೆಗೆ ನಿತೀಶ್ ಎಂಬ ವಿಕಲ ಚೇತನ ವಿದ್ಯಾರ್ಥಿ ಗಾಲಿ ಕುರ್ಚಿಯಲ್ಲಿ ಪರೀಕ್ಷೆಗೆ ಹಾಜರಾಗಿದ್ದನು. ಇವರನ್ನು ಇಬ್ಬರು ಸಹಾ ಯಕರು ಕರೆ ತಂದಿದ್ದರು. ಪರೀಕ್ಷೆ ಬರೆಯಲು ಒಬ್ಬ ಸಹಾಯಕನನ್ನು ನೇಮಿಸಲಾಗಿತ್ತು.

ವಿದ್ಯಾರ್ಥಿಗಳು ಬೇಗನೇ ಪರೀಕ್ಷಾ ಕೇಂದ್ರಗ ಳಿಗೆ ಬರಬೇಕೆಂದು ತಿಳಿಸಿದ್ದರಿಂದ, ಕೊನೆಯ ಕ್ಷಣದ ಓದಿಗೆ ಪರೀಕ್ಷಾ ಕೋಣೆಗಳಲ್ಲೇ ಅವಕಾಶ ಕಲ್ಪಿಸಲಾಗಿತ್ತು. ಬೆಳಿಗ್ಗೆ 9.30ರವರೆಗೆ ವಿದ್ಯಾರ್ಥಿ ಗಳು ಓದಬಹುದು ಎಂದು ತಿಳಿಸಲಾಗಿತ್ತು.

ಸಿದ್ದಗಂಗಾ ಶಾಲೆ, ನೂತನ ಪಿಯು ಕಾಲೇಜು, ಸರ್ಕಾರಿ ಪ್ರೌಢಶಾಲೆ, ಅಕ್ಕಮಹಾದೇವಿ ಶಾಲೆ ಮುಂತಾದ ಶಾಲೆಗಳ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ವಿದ್ಯಾರ್ಥಿಗಳನ್ನು ನಿಭಾಯಿಸಿದ್ದು ಕಂಡು ಬಂದಿತು.

ಕೊರೊನಾ ಕಣ್ಣಾಮುಚ್ಚಾಲೆ ಕಾರಣದಿಂದ ಎರಡು ತಿಂಗಳ ಕಾಲ ವಿಳಂಬವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೊನೆಗೂ ಆರಂಭವಾಗಿದೆ. ಸುಸೂತ್ರವಾಗಿ ಮುಗಿದರೆ ಸಾಕು ಎಂಬುದೇ ಎಲ್ಲರ ಹಾರೈಕೆಯಾಗಿದೆ.

error: Content is protected !!