ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸಮೂಹ ಪ್ರತಿಭಟನೆ

ದಾವಣಗೆರೆ, ಜೂ.24- ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಮತ್ತು ಪಕ್ಷದ ವಿವಿಧ ಘಟಕಗಳು ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಏಕ ಕಾಲದಲ್ಲಿ ಪ್ರತಿಭಟಿಸಿ ವಿನೂತನ ರೀತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.

ಜಯದೇವ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಸೇರಿದಂತೆ ಮುಖಂಡರು, ಪಾಲಿಕೆ ಸದಸ್ಯರ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.

ಹೆಚ್.ಬಿ. ಮಂಜಪ್ಪ ಮಾತನಾಡಿ, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಜನರಿಗೆ ಹೊರೆಯಾಗದಂತೆ ಕ್ರಮ ವಹಿಸಿತ್ತು. ಆದರೆ ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ದಿನನಿತ್ಯದ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಇದರಿಂದಾಗಿ ಸಾಮಾನ್ಯ ಜನರು ಜೀವನ ನಡೆಸುವುದೇ ದುಸ್ತರವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಅಧಿಕಾರ ಹಿಡಿದು ಈಗ ಜನರ ಸಹಾಯಕ್ಕೆ ಬಾರದೆ ಪ್ರತಿ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಜನರ ಜೀವನದ ಜೊತೆ ಸರ್ಕಾರಗಳು ಚೆಲ್ಲಾಟವಾಡುತ್ತಿವೆ ಎಂದು ಟೀಕಿಸಿದರು.

ತೈಲ ಬೆಲೆ ತಕ್ಷಣ ಇಳಿಕೆ ಮಾಡಬೇಕು. ದೇಶದ ಸೈನಿಕರ ಮೇಲೆ ದಾಳಿ ನಡೆಸಿ ಸುಮಾರು 20 ಕ್ಕೂ ಹೆಚ್ಚು ಯೋಧರನ್ನು ಕೊಂದಿರುವ ಚೀನಾ ದೇಶದ ಉತ್ಪನ್ನಗಳನ್ನು ಸಂಪೂರ್ಣ ನಿಷೇಧ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ  ಕಾಂಗ್ರೆಸ್ ಪಕ್ಷದಿಂದ ಕೇಂದ್ರದ ವಿರುದ್ಧ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಅವರು ಎಚ್ಚರಿಸಿದರು.

ಮೋದಿ ಅಣಕು ಸಮಾಧಿ: ಲಕ್ಷ್ಮಿ ಫ್ಲೋರ್ ಮಿಲ್ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದಿಂದ ಪ್ರಧಾನಿ ಮೋದಿ ಆರ್ಥಿಕ ಪರಿಸ್ಥಿತಿ ದಿವಾಳಿ ಮಾಡಿ ದೇಶದ ಜನ ರನ್ನು ಶವ ಸಂಸ್ಕಾರ ಮಾಡಿ ಅದರ ಮೇಲೆ ಕೂತಿ ದ್ದಾರೆ ಎನ್ನುವ ರೀತಿ ಅಣಕು ಸಮಾಧಿ ನಿರ್ಮಿಸಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು. 

ಪ್ರತಿಭಟನೆಯಲ್ಲಿ ಶಿವನಹಳ್ಳಿ ರಮೇಶ್, ಮುದೇಗೌಡ್ರು ಗಿರೀಶ್, ಕೆ. ಚಮನ್ ಸಾಬ್, ಅಬ್ದುಲ್ ಲತೀಫ್, ಕೆ.ಎಸ್. ಬಸವಂತಪ್ಪ, ಡಿ. ಬಸವರಾಜ್, ಕೆ.ಜಿ. ಶಿವಕುಮಾರ್, ಜಿ.ಬಿ. ಲಿಂಗರಾಜು, ಮಾಗಾನಹಳ್ಳಿ ಪರಶುರಾಮ್, ಶಾಮನೂರು ಟಿ. ಬಸವರಾಜ್, ಬಿ.ಎಚ್. ವೀರಭದ್ರಪ್ಪ, ಓಬಳೇಶಪ್ಪ, ಜೆ.ಸಿ. ನಿಂಗಪ್ಪ, ಜೆ.ಎನ್. ಶ್ರೀನಿವಾಸ್, ಎಸ್. ಮಲ್ಲಿಕಾರ್ಜುನ್, ಅಯೂಬ್ ಪೈಲ್ವಾನ್, ಎಚ್. ಜಯಣ್ಣ, ಕೆ.ಎಲ್. ಹರೀಶ್ ಬಸಾಪುರ, ಎ.ಬಿ ರಹೀಮ್, ಪಂಡಿತ್, ಕಬೀರ್, ಜಾಕೀರ್, ರಾಘವೇಂದ್ರ ಗೌಡ, ಡೋಲಿ ಚಂದ್ರು, ಪ್ರಕಾಶ್ ಪಾಟೀಲ್, ಆಶಾ ಉಮೇಶ್, ಅನಿತಾ ಬಾಯಿ ಮಾಲತೇಶ್, ಅಲಿ ರೆಹಮತ್, ಮೋಹಿನುದ್ದೀನ್, ಸದ್ದಾಮ್, ದಯಾನಂದ್, ಕೆಂಗಲಹಳ್ಳಿ ಹರೀಶ್, ನಂಜಾ ನಾಯ್ಕ, ಎಲ್ಎಂಎಚ್ ಸಾಗರ್, ಟಿ. ಜಾನ್, ರಂಗನಾಥ ಸ್ವಾಮಿ, ಪ್ರವೀಣ್ ಕುಮಾರ್, ಗಡಿ ಗುಡಾಳ್ ಮಂಜುನಾಥ್, ವಿನಾಯಕ ಪೈಲ್ವಾನ್, ಪಾಮೇನಹಳ್ಳಿ ನಾಗರಾಜ್, ಕಲ್ಲಳ್ಳಿ ನಾಗರಾಜ್, ಜಿ.ಡಿ. ಪ್ರಕಾಶ್, ಇಟ್ಟಿಗುಡಿ ಮಂಜುನಾಥ್, ಶ್ವೇತಾ ಎಸ್. ಬೇತೂರ್ ಕರಿಬಸಪ್ಪ, ಕಣ್ಮ ಸಂತೋಷ್, ರಾಜಶೇಖರ್ ಗೌಡ್ರು, ಅನಿಲ್ ಗೌಡ, ಲಿಂಗರಾಜ್, ಎಸ್. ಬಸವರಾಜಪ್ಪ, ಸೋಮಲಾಪುರ ಹನುಮಂತಪ್ಪ, ಆಶಾ ಮುರಳಿ, ಎಂ. ಮಂಜುನಾಥ್, ಜಯಪ್ರಕಾಶ್, ಆರಿಫ್ ಖಾನ್, ನಲ್ಲೂರು ರಾಘವೇಂದ್ರ, ಶಫಿ ದೇವರಹಟ್ಟಿ, ಕೋಳಿ ಇಬ್ರಾಹಿಂ, ಬೆಳ್ಳೂಡಿ ಮಂಜುನಾಥ್, ಗಾಜಿ ಖಾನ್, ಎಸ್.ಎಂ. ರುದ್ರೇಶ್, ಜಗದೀಶ್, ಸಾವನ್ ಜೈನ್, ರಾಕೇಶ್, ನಿಖಿಲ್, ಮಹಮದ್ ಜಿಕ್ರಿಯಾ, ಬಾತಿ ಶಿವಕುಮಾರ್  ಮತ್ತಿತರರು ಉಪಸ್ಥಿತರಿದ್ದರು. 

ಅಂತೆಯೇ ನಗರದ ಗಣೇಶ್ ಲೇಔಟ್  ಹತ್ತಿರ ಇರುವ ಪೆಟ್ರೋಲ್ ಬಂಕ್ ಮುಂದೆ ಜಿಲ್ಲಾ ಕಾಂಗ್ರೆಸ್ ಮತ್ತು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಹಯೋಗದಲ್ಲಿ ಸಾಂಕೇತಿಕವಾಗಿ  ಧರಣಿ ಮಾಡಲಾಯಿತು.

ಜಿಲ್ಲಾ ಕಿಸಾನ್ ಕಾಂಗ್ರೆಸ್ ವತಿಯಿಂದ ಹದಡಿ ರಸ್ತೆಯಲ್ಲಿನ ಕತ್ತಲಗೆರೆ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ಮಾಡಲಾಯಿತು.

ಸುಮಾರು 25 ಕಡೆಗಳಲ್ಲಿ ಜಿಲ್ಲಾ ಕಾಂಗ್ರೆಸ್ ನ ಎಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಒಂದೊಂದು ಬಂಕ್ ಗಳ ಮುಂದೆ ಪ್ರತಿಭಟಿಸಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿದರು.

error: Content is protected !!