ಹರಿಹರದ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್
ಹರಿಹರ, ಜೂ.23- ನಗರದಲ್ಲಿ ನಾಲ್ಕು ಮತ್ತು ಗ್ರಾಮೀಣ ಪ್ರದೇಶದ ಆರು ಕೇಂದ್ರಗಳಲ್ಲಿ ನಾಡಿದ್ದು ದಿನಾಂಕ 25 ರಿಂದ ಜುಲೈ 4 ರವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಕೋವಿಡ್ -19 ಹರಡುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಗಳ ಸುರಕ್ಷತೆಯನ್ನು ಕಾಪಾಡಿಕೊಂಡು ಶಿಕ್ಷಕರು ಜಾಗ್ರತೆಯಿಂದ ಕಾರ್ಯ ನಿರ್ವಹಿಸುವಂತೆ ದಾವಣಗೆರೆ ಉಪ ವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್ ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ನೀಡಿದರು.
ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಪರೀಕ್ಷೆ ಪೂರ್ವಭಾವಿ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮಾಸ್ಕ್ ಧರಿಸಿರುವುದನ್ನು ಖಚಿತ ಪಡಿಸಿಕೊಂಡು ಒಳ ಬಿಡಬೇಕು. ಪ್ರತಿ 200 ವಿದ್ಯಾರ್ಥಿಗಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೇಂದ್ರವನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ಫಾರ್ಮಾಸಿಸ್ಟ್, ಪ್ರಯೋಗಶಾಲಾ ತಂತ್ರಜ್ಞರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಇರಲಿದ್ದಾರೆ ಎಂದರು.
ತಪಾಸಣೆ ಸಮಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೆಮ್ಮು, ಜ್ವರ, ನೆಗಡಿ ಇತ್ಯಾದಿಗಳು ಇರುವುದು ಕಂಡುಬಂದರೆ, ಅವರಿಗೆ ಪ್ರವೇಶ ನಿರಾಕರಿಸಬೇಕು. ಯಾವುದೇ ವಿದ್ಯಾರ್ಥಿಗಳಿಗೆ ಲಕ್ಷಣಗಳು ಕಂಡುಬಂದರೆ ಮುಖ್ಯ ಅಧಿಕಾರಿಗಳ ಗಮನಕ್ಕೆ ತಂದು ಮೂರು ಪದರಗಳ ಸರ್ಜಿಕಲ್ ಮಾಸ್ಕ್ ನೀಡಿ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಕ್ರಮ ವಹಿಸಬೇಕು ಎಂದರು.
ಬಿಇಓ ಯು. ಬಸವರಾಜಪ್ಪ ಮಾತನಾಡಿ, ತಾಲ್ಲೂಕಿನಲ್ಲಿ 3056 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಹೇಳಿದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ, ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಮೇಶ್ವರಪ್ಪ, ಬೆಸ್ಕಾಂ ಇಇ ಸಿ.ಎನ್. ರಮೇಶ್, ಹಣಕಾಸು ಇಲಾಖೆ ಚಂದ್ರಪ್ಪ, ನಗರ ಠಾಣೆ ಪಿಎಸ್ಐ ಎಸ್. ಶೈಲಾಶ್ರೀ, ಮಲೇಬೆನ್ನೂರು ಪಿಎಸ್ಐ ಶಿವಬಸಪ್ಪ, ಮಲೇಬೆನ್ನೂರು ಪುರಸಭೆ ಅಧಿಕಾರಿ ಧರಣೇಂದ್ರ, ಶಿಕ್ಷಕರಾದ ಎಸ್. ಹೆಚ್. ಹೂಗಾರ್, ಮೆಹಬೂಬ್ ಬಾಷಾ ಹಾಗು ಇತರರು ಸಭೆಯಲ್ಲಿ ಹಾಜರಿದ್ದರು.