ತಂಬಾಕು ಗುಟ್ಕಾ ಎಂಬ ವಿಷದ ಗುಟುಕು…

ಚಿಂತನ-ಮಂಥನ

ತಂಬಾಕು ಎಂದರೆ ಅಮಲು ನೀಡುವ ಪದಾರ್ಥ, ಇದರಲ್ಲಿ ನಿಕೋಟಿನ್ ಎಂಬ ಅಂಶವಿದ್ದು ಇದನ್ನು ಸೇವಿಸುವ ಮಾನವನ ಮೆದುಳಿನಲ್ಲಿ ಹಾಗೂ  ಶ್ವಾಸಕೋಶದಲ್ಲಿ ನೇರ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ತಂಬಾಕನ್ನು ಹಲವಾರು ರೀತಿಯಲ್ಲಿ ಬಳಸುವ ವಿಧಾನ ಚಾಲ್ತಿಯಲ್ಲಿದೆ. ಅವುಗಳೆಂದರೆ, ಸಿಗರೇಟ್, ಬೀಡಿ ಸೇವನೆ, ಗುಟ್ಕಾ ಆಗಿಯುವುದು, ಗಾಂಜಾ ಸೇವನೆ ಮಾಡುವುದು ಹಾಗೂ ಹಲವಾರು ಬಗೆಯ ಸೇವನೆಯಿಂದಾಗಿ ಕ್ಯಾನ್ಸರ್‌ಗೆ ತುತ್ತಾಗುವ ಅದರಲ್ಲೂ ಬಾಯಿ-ಗಂಟಲು ಕ್ಯಾನ್ಸರ್ ಬರುವ ಸಾಧ್ಯತೆ ಶೇ. 50 ಆಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸುತ್ತದೆ. ಆದರೂ ನಮ್ಮ ಜನರು ನಿರಂತರ ಸೇವಿಸುತ್ತಲೇ ಬರುತ್ತಿದ್ದಾರೆ. ಭಾರತದಲ್ಲಂತೂ ಶೇ. 50 ಜನರು ಶ್ವಾಸಕೋಶ ತೊಂದರೆಯಿಂದ ಬಳಲುವುದರ ಜೊತೆಗೆ ಕ್ಯಾನ್ಸರ್ ನಿಂದಲೂ ಬಳಲುತ್ತಿದ್ದಾರೆ.

ಯುವ ಜನತೆ ಇದರಲ್ಲಿ ತೊಡಗಿರುವುದು ತುಂಬಾ ಆತಂಕಕಾರಿಯಾದದ್ದು. ಇವರಿಗೊಂದು ಕಿವಿಮಾತು ಮುಂದೆ ನಿರಂತರ ತಂಬಾಕು ಸೇವನೆಯಿಂದ ನಿಮ್ಮ ವೈವಾಹಿಕ ಜೀವನವೂ ಹಾಳಾಗುವುದರಲ್ಲಿ ಸಂಶಯವಿಲ್ಲ. ಮಕ್ಕಳಾಗುವುದು ಕಷ್ಟ ಸಾಧ್ಯ. ಜಿದ್ದಿಗೆ ಬಿದವರ ಹಾಗೆ ಸಿಗರೇಟ್ ಹಾಗೂ ಗುಟ್ಕಾ ಮಾಫಿಯಾ ಪ್ರಾರಂಭವಾಗಿದೆ. ಇದು ಹಣ ಮಾಡುವ ಗುರಿಯನ್ನಷ್ಟೇ ಹೊಂದಿದ್ದು ಮನುಕುಲದ ಒಳಿತಿನ ಬಗ್ಗೆ ಕಿಂಚಿತ್ತೂ ಯೋಚನೆ ಮಾಡುವುದಿಲ್ಲ. ಇದರಲ್ಲಿ ಸರ್ಕಾರದ ಕೆಲವು ದೋರಣೆಗಳು ತಪ್ಪು ದಾರಿಗೆ ಕೊಂಡೊಯ್ಯಲು ದಾರಿಮಾಡಿಕೊಟ್ಟಿದೆ. ಒಂದೆಡೆ ಉತ್ಪಾದನೆಗೆ ಪ್ರೋತ್ಸಾಹ ಮತ್ತೊಂದೆಡೆ ಕ್ಯಾನ್ಸರ್ ಮತ್ತು ಶ್ವಾಸಕೋಶ ತೊಂದರೆಗೆ ಚಿಕಿತ್ಸೆ ನೀಡುವ ದ್ವಿಮುಖ ನೀತಿ ತುಂಬಾ ಕಳವಳಕಾರಿಯಾಗಿದೆ.

ತಂಬಾಕು ನಿರಂತರ ಸೇವನೆಯಿಂದ ಸಿ.ಬಿ. ಖಾಯಿಲೆಗೆ ತುತ್ತಾಗುವರಲ್ಲಿ ಮಹಿಳೆಯರು ಮತ್ತು ಮಕ್ಕಳು ಇರುವುದು ಇದರ ಇನ್ನೊಂದು ಮುಖವನ್ನು ಪರಿಚಯಿಸುತ್ತಿದೆ. ಸಿಕ್ಕ ಸಿಕ್ಕ ರಸ್ತೆ, ಸರ್ಕಾರಿ ಕಛೇರಿ, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇವರು ಉಗುಳಿದ ಚಿತ್ತಾರದ ಬಣ್ಣವು ಅಸಯ್ಯವೆನಿಸದಿರದು. ಇದರಿಂದ ತಂಬಾಕು ಸೇವಿಸುವವರ ಆರೋಗ್ಯವಲ್ಲದೇ ಸಮಾಜದ ಸ್ವಾಸ್ಥ್ಯವನ್ನೂ ಹಾಳುಮಾಡುತ್ತಿದ್ದಾರೆ. ಹಲವಾರು ಸಾಂಕ್ರಾಮಿಕ ರೋಗಗಳಿಗೆ ದಾರಿಮಾಡಿಕೊಟ್ಟಂತಾಗಿದೆ. ಇದಕ್ಕಾಗಿ ಸರ್ಕಾರ ಸಂಘ-ಸಂಸ್ಥೆಗಳು ಸಾಕಷ್ಟು ಕಾನೂನು ಹಾಗೂ ಸೂಕ್ತ ತಿಳುವಳಿಕೆಯನ್ನು ನೀಡಿದರೂ ಯಾರೂ ಕಂಡೂ ಕಾಣದಂತಿರುತ್ತಾರೆ. 

ಆಶ್ಚರ್ಯವೆಂದರೆ, ತಂಬಾಕು ಉತ್ಪನ್ನಗಳ ಮೇಲೆಯೇ ಕ್ರೂರಿ ಕ್ಯಾನ್ಸರ್ ಭಾವಚಿತ್ರವಿದ್ದರೂ ಯಾರೂ ನೋಡಿಯೂ ಕಾಣದವರಂತೆ ತಂಬಾಕು ಸೇವಿಸುವವರಿಗೇನನ್ನಬೇಕೊ?. ಲಾಕ್ ಡೌನ್ ಸಮಯದಲ್ಲಿ ನಾಲ್ಕು ಪಟ್ಟು ಬೆಲೆ ತೆತ್ತು ತಮ್ಮ ದಾಹವನ್ನೂ ನೀಗಿಸಿಕೊಂಡವರಿದ್ದಾರೆ. ಇದನ್ನು ನಾವು ಕಂಡು ಕಾಣದಂತೆ ನೋಡಿಯೂ ಸುಮ್ಮನೆ ಇರುವ ಪರಿಸ್ಥಿತಿ ಎದುರಿಸಿದ್ದೇವೆ. ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳು ಯಾವುದೇ ಕ್ರಮವನ್ನು ಮಾರಾಟಮಾಡುವವರ ಹಾಗೂ ತಿನ್ನುವವರ ವಿರುದ್ಧ ಕಾನೂನು ಕ್ರಮ ನಡೆಸದಿರು ವುದು ಇನ್ನೂ ಉತ್ತೇಜನ ನೀಡಿದಂತಾಗಿದೆ. 

ವರ್ಷಕ್ಕೆ ಒಂದು ಬಾರಿ ಮಾತ್ರ ಜಾತ್ರಾ, ಸಭೆ, ಪೋಸ್ಟರ್, ಪ್ರಬಂಧದಿಂದ ಕಡಿಮೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಹವ್ಯಾಸವನ್ನು ತ್ಯಾಜಿಸುವ ಇಚ್ಛಾಶಕ್ತಿ ಬೇಕು. ಮಾನಸಿಕವಾಗಿ ಸಿದ್ದರಾಗಬೇಕು. ಕಾರಣ ನಿರಂತರ ಸೇವನೆ ಇವರನ್ನು ಮಾನಸಿಕವಾಗಿ ಹೊಂದಿಕೊಳ್ಳುವಂತೆ ಮಾಡಿರುತ್ತದೆ. ಸ್ವಭಾವ ಮತ್ತು ಚಟುವಟಿಕೆಯಲ್ಲಿನ ಬದಲಾವಣೆಗೆ ಇರನ್ನು ಸಜ್ಜುಗೊಳಿಸಬೇಕಿದೆ.

ಮನೆಯಲ್ಲಿ ಹಿರಿಯರು ಹಾಗೂ ನೆರೆಹೊರೆಯವರು ಇದನ್ನು ವಿರೋಧಿಸದಿರುವುದು ಹಾಗೂ ಸೇವನೆಯನ್ನು ಹೆಚ್ಚಿಸಲು ಪ್ರೇರೇಪಣೆ ನೀಡಲು ಸುಂದರವಾದ ತಾರೆಯರ ಆಕರ್ಷಕ ಚಿತ್ರಗಳು ಹಾಗೂ ಜಾಹಿರಾತುಗಳು ಪ್ರಮುಖ ಪಾತ್ರವಹಿಸುತ್ತಿವೆ. ಗಲ್ಲಿಗೊಂದರಂತೆ ಬೀದಿಬದಿಯ ಅಂಗಡಿಗಳಲ್ಲಿ ರಾರಾಜಿಸುವ ಬಣ್ಣ ಬಣ್ಣದ ಗುಟ್ಕಾ ಪ್ಯಾಕೇಟ್ ಹಾಗೂ ವಿದೇಶಿ ಸಿಗರೇಟ್ ಹಾವಳಿಯಂತೂ ಶಾಲಾ ಕಾಲೇಜ್ ಹತ್ತಿರವೇ ಸರಬರಾಜು ಮಾಡುತ್ತಿರುವುದು ಜಗಜ್ಜಾಹಿರಾಗಿದೆ.

ಕೊರೊನಾ ಹೆಮ್ಮಾರಿ ಹಟ್ಟಹಾಸ ಮೆರೆಯುವ ದಿನದಲ್ಲೂ ಜನರು ಮಾಸ್ಕ್ ಧರಿಸಿಯೇ ಗುಟ್ಕಾ ಅಗಿಯುವ ಹಾಗೂ ಎಲ್ಲೆಂದರಲ್ಲಿ ಉಗಿಯುವುದು  ನೋಡಿದರೆ ಇವರಿಗೆ ಮಾಹಿತಿಯ ಕೊರತೆಯೋ ಅಥವಾ ಭಯವಿಲ್ಲದೇ ನಡೆದುಕೊಳ್ಳುತ್ತಿದ್ದಾರೋ ತಿಳಿಯದು. ನಮ್ಮೆಲ್ಲರ ಆರೋಗ್ಯ ನಮ್ಮ ಕೈಯಲ್ಲಿ ಎಂದು ತಿಳಿದು ಸಾರ್ವಜನಿಕರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳುವದರ ಜೊತೆಗೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು, ಮಿತ ವ್ಯಯಿಗಳಾಗಿ ಬದುಕುವ ಕಲೆಯನ್ನು ಕಲಿಯಬೇಕೆನ್ನುವುದು ನಮ್ಮ ಆಶಯವಾಗಿದೆ.


ಮಾಡಾಳ್ ಸಿದ್ದೇಶ್
ಅಧ್ಯಕ್ಷರು ಉಜ್ವಲ ಸೇವಾ ಸಂಸ್ಥೆ (ರಿ.) ದಾವಣಗೆರೆ.
9845529037

error: Content is protected !!