ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸುತ್ತಿವೆ ಈ ಜೀವಗಳು….

ಕೋವಿಡ್! ಈಗ ಬಹುತೇಕ ಎಲ್ಲರಿಗೂ ಗೊತ್ತಿರುವ ಹೆಸರು. ಇದು ಅಪರಿಚಿತವಾಗಿ ಕಾಣಿಸಿಕೊಂಡಾಗ ಜಾಗತಿಕವಾಗಿ ಕೋಲಾಹಲ, ಕೌತುಕ, ಆತಂಕ ಮನೆ ಮಾಡಿತ್ತು. ಈ ಅಗೋಚರ ವೈರಾಣು ಚೈನಾ ದೇಶದಲ್ಲಿ ಸುಮಾರು ಆರು ತಿಂಗಳ ಹಿಂದೆ ಜನ್ಮವತ್ತಿ ಜಗವನ್ನೇ ವ್ಯಾಪಿಸಿದೆ. ಈಗ ನಮ್ಮ ಸುತ್ತ ಮುತ್ತಲೇ ತನ್ನ ಸಂತಾನ ಉತ್ಪತ್ತಿ ಮಾಡುತ್ತಿದೆ. ಇದರ ಹೆರಿಗೆ ಆಸ್ಪತ್ರೆ ಮನುಷ್ಯನ ಶ್ವಾಸ ಕೋಶ! ಹೀಗಾಗಿ ಇದು ಸಮಾಜದ ಸ್ವಾಸ್ಥ್ಯವನ್ನು ಕದಡಿರುವ ವೈರಾಣು.

ಆರಂಭದ ದಿನಗಳಲ್ಲಿ ಇದರ ಗುಣ ಸ್ವಭಾವವನ್ನು ಅರಿಯದ ನಾವೆಲ್ಲಾ ಹೆದರಿಕೊಂಡಿದ್ದೆವು. ತಿಂಗಳುಗಟ್ಟಲೇ ಮನೆಯ ಬಾಗಿಲು ಹಾಕಿ ಮುದುರಿಕೊಂಡು ಬಿದ್ದಿದ್ದೆವು. ನಮ್ಮ ಬೀದಿಗಳು, ಅಂಗಡಿ ಮುಂಗಟ್ಟುಗಳು, ಸಾರಿಗೆ ಸ್ತಬ್ದವಾಗಿತ್ತು. ಕಾಲ ಕ್ರಮೇಣ ಇದನ್ನು ಪ್ರತಿರೋಧಿಸಬಹುದು, ಎದುರಿಸಬಹುದು ಎಂಬ ವಿಶ್ವಾಸ ಮೂಡತೊಡಗಿದೆ. ಈಗ ಇದರ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಿ ಹೊರಗೆ ಓಡಾಡುತ್ತಿದ್ದೇವೆ. ನಮ್ಮ ಎಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಸಮಾಜ ಸಹಜ ಸ್ಥಿತಿಗೆ ಮರಳಲು ಇನ್ನೊಂದಿಷ್ಟು ಸಮಯ ಹಿಡಿಯುತ್ತದೆ.

ಈ ಕೋವಿಡ್ ನಿಯಂತ್ರಣ, ನಿರ್ವಹಣೆ, ಚಿಕಿತ್ಸೆ ಕುರಿತು ಪ್ರಪಂಚದ ಪ್ರತಿಯೊಂದು ಮೂಲೆಯಲ್ಲೂ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರುಗಳಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ್ ಮತ್ತು ಇತರೆ ಶಾಸಕರುಗಳು ಹಾಗೂ ಮಹಾನಗರ ಪಾಲಿಕೆ ಮಹಾಪೌರ ಬಿ.ಜಿ.ಅಜಯ್‌ಕುಮಾರ್‌ ಮತ್ತು ಪಾಲಿಕೆಯ ಎಲ್ಲಾ ಸದಸ್ಯರ ಸಹಕಾರದಲ್ಲಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರ ಸಮರ್ಥ ಸಾರಥ್ಯದಲ್ಲಿ ಕೋವಿಡ್ ನಿಯಂತ್ರಣ, ಚಿಕಿತ್ಸೆಗೆ ಸಂಬಂಧ ಪಟ್ಟ ಕೆಲಸಗಳು ಎಲ್ಲಾ ವಲಯಗಳಲ್ಲಿ ಚುರುಕಿನಿಂದ ನಡೆಯುತ್ತಿವೆ. ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಹನುಮಂತರಾಯ ನೇತೃತ್ವದಲ್ಲಿ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಸಮರೋಪಾದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾ ಪಂಚಾಯತ್ ಸಿ.ಇ.ಒ ಡಾ. ಪದ್ಮಾ ಬಸವಂತಪ್ಪ ಅವಿರತವಾಗಿ ತಮ್ಮ ಇಲಾಖೆಯ ಸಿಬ್ಬಂದಿಗಳೊಡನೆ ತೊಡಗಿಸಿಕೊಂಡಿದ್ದಾರೆ.

ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸುತ್ತಿವೆ ಈ ಜೀವಗಳು.... - Janathavani

ಪಾಲಿಕೆೆಯ ಕಮೀಷನರ್ ವಿಶ್ವನಾಥ್ ಮುದಜ್ಜಿ ತಮ್ಮ ತಂಡದೊಂದಿಗೆ ಕೆಲಸ ಮಾಡುತ್ತಿರುವವರಿಗೆ ಸಹಕರಿಸಿ, ಅವರ ಕೈ ಬಲಪಡಿಸುತ್ತಿದ್ದಾರೆ. ಒಂದು ಕೋವಿಡ್ ಸೋಂಕಿತ ಪ್ರಕರಣ ಕಂಡ ಕೂಡಲೇ ಆ ವ್ಯಕ್ತಿಯ ಮನೆಯಿರುವ ರಸ್ತೆಯನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗುತ್ತದೆ ಸುತ್ತಲಿನ 200 ಮೀಟರ್ ಪ್ರದೇಶವನ್ನು ಬಫರ್‌ಜೋನ್‌ ಎಂದು ಜಿಲ್ಲಾಧಿಕಾರಿಗಳು ಘೋಷಿಸಿ, ಆದೇಶಿಸುತ್ತಾರೆ. ಪ್ರತಿ ಕಂಟೈನ್‌ಮೆಂಟ್ ಜೋನ್‌ಗೆ ಗ್ರೂಪ್ `ಎ’ ದರ್ಜೆಯ ಅಧಿಕಾರಿಯೊಬ್ಬರನ್ನು ಇನ್ಸಿಡೆಂಟ್ ಕಮಾಂಡರ್‌ ಎಂದು ನಿಯೋಜಿಸಲಾಗುತ್ತದೆ. ಬಿ.ಟಿ.ಕುಮಾರ ಸ್ವಾಮಿ, ಆಯುಕ್ತರು ದೂಡಾ, ಶ್ರೀಮತಿ ಮಮತಾ ಹೊಸಗೌಡರ್, ಉಪವಿಭಾಗಾಧಿಕಾರಿ, ಸಿ.ಹೆಚ್.ವಿಜಯಕುಮಾರ್, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಇಲಾಖೆ ಇವರು ಕ್ರಮವಾಗಿ, ಜಾಲಿನಗರ, ಭಾಷಾನಗರ ಮತ್ತು ಬೇತೂರು ರಸ್ತೆ ಈ ವಲಯಗಳಿಗೆ ನಿಯೋಜಿಸಲ್ಪಡುತ್ತಾರೆ ಹಾಗೂ ಇತರೆ ಹಿರಿಯ ಅಧಿಕಾರಿಗಳು ಒಟ್ಟು 16 ಕಂಟೈನ್‌ಮೆಂಟ್‌ ಜೋನ್‌ಗಳಿಗೆ ಇನ್ಸಿಡೆಂಟ್ ಕಮಾಂಡರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯುದ್ಧೋಪಾದಿಯಲ್ಲಿ ಅಸಂಖ್ಯಾತ ಜೀವಗಳು ದುಡಿಯುತ್ತಿವೆ, ಮಿಡಿಯುತ್ತಿವೆ. ಆರೋಗ್ಯ ಇಲಾಖೆಯ ಅಧಿಕಾರಿ ರಾಘವೇಂದ್ರರ ಮಾರ್ಗದರ್ಶನದಲ್ಲಿ ಇಲಾಖೆಯ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಬಹುಮುಖ್ಯವಾಗಿ ಸೋಂಕಿತರ ಸರ್ವೇಕ್ಷಣೆ ಅವರ ಚಿಕಿತ್ಸೆಯ ನಿರ್ವಹಣೆ ಕಾರ್ಯದಲ್ಲಿ ಹಗಲಿರಳೂ ಶ್ರಮಿಸುತ್ತಿರುವ, ಎಲ್ಲರ ಕಣ್ಣಿಗೆ ಕಾಣದ ಯೋಧರನ್ನು, ಅವರ ಕಷ್ಟಕರ ಕಾರ್ಯವನ್ನು ಸಮಾಜಕ್ಕೆ ಪರಿಚಯಿಸುವ ಪ್ರಯತ್ನವನ್ನು ನಮ್ಮ ಪತ್ರಿಕೆ ಮಾಡುತ್ತಿದೆ. ಈ ಲೇಖನದಲ್ಲಿ ನಮ್ಮ ತಂಡದ ಗಮನವನ್ನೂ ಮೀರಿ ಹಲವಾರು ಹೆಸರುಗಳು ಮತ್ತು ಫೋಟೋಗಳು ಬಿಟ್ಟು ಹೋಗಿರುವ ಸಾಧ್ಯತೆ ಖಂಡಿತಾ ಇದೆ. ಯಾರೂ ಅನ್ಯತಾ ಭಾವಿಸಬೇಕಾಗಿಲ್ಲ.

ಸಾಮಾನ್ಯವಾಗಿ ಸಾಂಕ್ರಾಮಿಕ, ಕ್ಷಾಮ, ಬರ, ಪ್ರವಾಹ, ಭೂಕಂಪ ಇತ್ಯಾದಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಸಮಾಜದ ಸ್ವಾಸ್ಥ್ಯ ಕದಡುತ್ತದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಕಾರ್ಯೋನ್ಮುಖವಾಗುತ್ತವೆ. ಇದರ ಮೊದಲ ಮಹತ್ತರ ಜವಾಬ್ದಾರಿ ವಹಿಸಿಕೊಳ್ಳುವುದೇ ಸರ್ವೇಕ್ಷಣಾ ಇಲಾಖೆ. ವಸ್ತು ಸ್ಥಿತಿಯನ್ನು ಅಧ್ಯಯನ ಮಾಡುವುದು. ಮೂಲ ಕಾರಣಗಳನ್ನು ಹುಡುಕಿ, ಅಂಕಿ-ಅಂಶಗಳನ್ನು ಕಲೆ ಹಾಕುವುದು. ಪರಿಸ್ಥಿತಿ ಇನ್ನೂ ವಿಕೋಪಕ್ಕೆ ತಿರುಗುವ ಮುನ್ನ ಮಂಜಾಗ್ರತೆ ವಹಿಸುವುದು. ಅಗತ್ಯ ಪರಿಹಾರ ಕಾರ್ಯ ಕುರಿತು ಅಧ್ಯಯನ ಮಾಡುವುದು. ಈ ಇಲಾಖೆಯ ಅಧಿಕಾರಿಗಳ ಆದ್ಯ ಕೆಲಸ.

ಇವರ ವರದಿ ಕಾರ್ಯಸೂಚಿಗಳ ಆಧಾರದ ಮೇಲೆ ಇತರೆ ಇಲಾಖೆಗಳು ಕಾರ್ಯೋನ್ಮುಖವಾಗುತ್ತವೆ. ಸಾಮಾನ್ಯವಾಗಿ ಇವರು ನೇರವಾಗಿ ರಾಜ್ಯದ ಸರ್ವೇ ಕ್ಷಣಾ ಇಲಾಖೆಗೆ ವರದಿಯನ್ನು ಒಪ್ಪಿಸುತ್ತಾರೆ.. ಆದರೆ, ಕೋವಿಡ್ `ಅಂತರರಾಷ್ಟ್ರೀಯ ಸಾಮಾಜಿಕ ಆರೋಗ್ಯ ತುರ್ತು ಪರಿಸ್ಥಿತಿ’ (PHEIC – Public Health Emergency of International Concern)  ಎಂದು ಘೋಷಣೆಯಾಗಿರುವುದರಿಂದ ಇವರು ಜಿಲ್ಲಾಡಳಿತದ ಮೂಲಕವೇ ವ್ಯವಹರಿಸಬೇಕು.

ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸುತ್ತಿವೆ ಈ ಜೀವಗಳು.... - Janathavani

ದೇಶದಲ್ಲಿ ಲಾಕ್ ಡೌನ್ ಜಾರಿಯಾಗಿತ್ತು. ಸಾರ್ವಜನಿಕರೆಲ್ಲಾ ಸಕಾರತ್ಮಕವಾಗಿ ಸ್ಪಂದಿಸ ತೊಡಗಿದರು. ಮೊದಲಿಗೆ ವಿದೇಶದಿಂದ ಬಂದವರ ಅಂಕಿ-ಅಂಶಗಳನ್ನು ಕಲೆ ಹಾಕಿ ಅವರನ್ನು ಸಂಬಂಧಪಟ್ಟ ಜಿಲ್ಲೆಗಳ ಅಧಿಕಾರಿಗಳನ್ನು ಸಂಪರ್ಕಿ ಸಲು ಕೋರಲಾಯಿತು. ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಯಿತು. ಅವರ ಗಂಟಲು ದ್ರವಗಳ ಮಾದರಿಗಳನ್ನು ಕಲೆಹಾಕಿ ಪರೀಕ್ಷೆ ಮಾಡುವ ಕಾರ್ಯ ಆರಂಭವಾಯಿತು.

ಈ ಪ್ರಕ್ರಿಯೆಯಲ್ಲಿ ಸೋಂಕು ಸ್ಪರ್ಷವಾಗಿಲ್ಲ ಎಂದು ಖಾತರಿಯಾದರೆ ಎಲ್ಲರಿಗೂ ನಿರಾಳ. ಇಲ್ಲವಾದಲ್ಲಿ ಶುರುವಾಗುವುದು ಕಳವಳ. ಸೋಂಕು ದೃಢಪಟ್ಟರೆ ಮೊದಲಿಗೆ ಸೋಂಕಿತ ವ್ಯಕ್ತಿಯನ್ನು ಚಿಕಿತ್ಸೆಗೆ ಒಳಪಡಿಸಬೇಕು. ನಂತರ ಅವರ ನೇರ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಕಲೆಹಾಕಿ ಕ್ವಾರಂಟೈನ್‌ನಲ್ಲಿ ಇರಿಸಬೇಕು. ಅವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ಮಾಡಬೇಕು. ಸೋಂಕಿತ ವ್ಯಕ್ತಿ ಓಡಾಡಿದ ಜಾಗಗಳಿಗೆ ಹೋಗಿ ಅಲ್ಲಿ ಸಂಪರ್ಕಿಸಿದ ವ್ಯಕ್ತಿಗಳ ವಿಳಾಸ ಹುಡುಕಿ ಅವರನ್ನೂ ಕ್ವಾರಂಟೈನ್‌ಗೆ ಒಳಪಡಿಸಿ, ಅವರ ಮಾದರಿಗಳನ್ನೂ ಸಂಗ್ರಹಿಸಿ, ಪರೀಕ್ಷೆ ಮಾಡಬೇಕು.

ಹೀಗೆ ಸಾಗುತ್ತದೆ ಸಾಲು ಸಾಲು ಸವಾಲಿನ ಹುಡುಕಾಟ. ಅಕಸ್ಮಾತ್ ಸೋಂಕಿತ ಸಂಪರ್ಕದಲ್ಲಿದ್ದ ವ್ಯಕ್ತಿಗಳಲ್ಲಿ ಸೋಂಕು ಕಂಡು ಬಂದರೇ! ಮತ್ತೆ ಅವರ ಸುತ್ತಮುತ್ತಲಿನ ವ್ಯಕ್ತಿಗಳಿಗೆ ಹುಡುಕಾಟ, ಅವರ ಮಾದರಿಗಳ ಪರೀ ಕ್ಷೆಯ ಪರದಾಟ. ಒಂದು ರೀತಿಯಲ್ಲಿ ಚಕ್ರವ್ಯೂಹವೇ ರಚನೆಯಾಗಿಬಿಟ್ಟಿರುತ್ತದೆ. ಇದು ಗುಣಿಸುವ ಗಣಿತವಲ್ಲ. ಅಗಣಿತ ಗುಣಾಕಾರ! It is not just multiplication, It is an Exponential!  ಒಮ್ಮೆ ಯೋಚಿಸಿ. ಈ ಸರ್ವೇಕ್ಷ ಣಾಧಿಕಾರಿಗಳ ಸಂಕಟ, ಕ್ವಾರಂಟೈನ್ ನಿರ್ವಹಿಸುವ ಅಧಿಕಾರಿಗಳ ಅಲೆದಾಟ, ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸುವವರ ಪರದಾಟ. ನಂತರ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವ ವೈದ್ಯರ, ನರ್ಸ್‌ಗಳ, ಸಿಬ್ಬಂದಿಗಳ ಸೆಣೆಸಾಟ. ಇವೆಲ್ಲದರ ಜೊತೆಗೆ ಭಯದಲ್ಲಿರುವ ಸೋಂಕಿತರ ಮತ್ತು ಅವರ ಸಂಬಂಧಿಗಳ ಬಳಲಾಟ. ಖಂಡಿತಾ ಅನ್ನಿಸುವುದು ಅಕಟಕಟಾ.

ದಾವಣಗೆರೆಯಲ್ಲಿ ಮೊದಲ ಬಾರಿಗೆ ಕೋವಿಡ್ ಕುರಿತ ಪರೀಕ್ಷೆ ಮಾಡಬೇಕಾದ ಸ್ಥಿತಿ ಬಂದೊದಗಿದ್ದು ಮಾರ್ಚ್‌ನ ಕೊನೆಯ ವಾರದಲ್ಲಿ. ಚೀನಾ ದೇಶದಿಂದ ತಮ್ಮ ಜಿಲ್ಲೆಗೆ ಬಂದ ವ್ಯಕ್ತಿಯೊಬ್ಬರಿಗೆ. ಕೂಡಲೇ ಅವರನ್ನು ತಪಾಸಣೆ ಮಾಡಿ ಕ್ವಾರಂಟೈನ್‌ಗೆ ಒಳಪಡಿಸಲಾಯಿತು. ಅದೃಷ್ಟವಶಾತ್ ಸಂಗ್ರಹಿಸಲಾಗಿದ್ದ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಿದಾಗ ಕೋವಿಡ್ ಸೋಂಕು ಕಾಣಿಸಿಕೊಳ್ಳಲಿಲ್ಲ. ನಂತರ ಪಕ್ಕದ ಜಿಲ್ಲೆಯಿಂದ ವರ್ಗಾವಣೆಗೊಂಡು ಬಂದ ಇಬ್ಬರು ಸೋಂಕಿತರನ್ನು ಎಸ್.ಎಸ್‌. ಆಸ್ಪತ್ರೆಯಲ್ಲಿರಿಸಿ, ಯಶಸ್ವಿ ಶುಶ್ರೂಷೆ ಮಾಡಲಾಯಿತು.

ಇದಾದ ಕೆಲವೇ ದಿನಗಳಲ್ಲಿ ವಿದೇಶದಿಂದ ಆಗಮಿಸಿದ್ದ ದಾವಣಗೆರೆಯ ವ್ಯಕ್ತಿಯೊಬ್ಬನಲ್ಲಿ ಸೋಂಕು ಕಾಣಿಸಿಕೊಂಡು ಆತನನ್ನು ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಯಿತು. ಕೋವಿಡ್ ರೋಗಿಗಳ ಶುಶ್ರೂಷೆಗೆ ಚಿಗಟೇರಿ ಆಸ್ಪತ್ರೆಯಲ್ಲಿ ಸಿದ್ಧಗೊಂಡಿತು. ಆರಂಭದಲ್ಲಿ ಜಿಲ್ಲೆಯ ವಾತಾವರಣ ನಿರಾತಂಕವಾಗಿತ್ತು. ದಾವಣಗೆರೆ ಹಸಿರು ವಲಯವೆಂದು ಘೋಷಣೆಯೂ ಆಯಿತು. ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಅದು ಕೇವಲ ಒಂದು ದಿನ ಮಾತ್ರ!

ಮಾರನೆಯ ದಿನ ಈ ಕೊರೊನಾ ಅದೆಲ್ಲಿಂದ ಬಂದಿತ್ತೋ ಏನೋ ಹಳೆಯ ದಾವಣಗೆರೆ ಪ್ರದೇಶವೊಂದರ ಮಹಿಳೆಯೊಬ್ಬರಲ್ಲಿ ಪ್ರತ್ಯಕ್ಷವಾಗಿ ಬಿಟ್ಟಿತು! ನಂತರ ಅದೇ ಪ್ರದೇಶ ಮತ್ತು ಅಕ್ಕಪಕ್ಕದ ಬಡಾವಣೆಗಳಲ್ಲಿ ಸಾಲು ಸಾಲಾಗಿ ಸೋಂಕಿತರ ಪತ್ತೆಯಾಗತೊಡಗಿತು. ನೋಡು ನೋಡುತ್ತಲೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿ ಕೋವಿಡ್ ಕೆಂಬಾವುಟ ಹಾರಾಡತೊಡಗಿತು. ಈಗ ಶುರುವಾಯಿತು ದಾವಣಗೆರೆಯಲ್ಲಿ ಅಸಲಿ ಕೋವಿಡ್ ಆಟ-ಕಾಟ-ಚೆಂಡಾಟ. ಆರಂಭವಾಯಿತು ಅಧಿಕಾರಿಗಳ ಅಲೆದಾಟ, ಸೋಂಕು ತಗಲಿದವರ ಸಂಪರ್ಕಿತರ ಹುಡುಕಾಟ. ಪಾತಾಳದಲ್ಲಿದ್ದರೂ ಅವರನ್ನು ಹುಡುಕಿ ತರಬೇಕು. ಅವರ ಸಂಬಂಧಿಗಳ ಮನ ಒಪ್ಪಿಸಬೇಕು. ಗಂಟಲು ದ್ರವದ ಮಾದರಿ ಸಂಗ್ರಹಿಸಬೇಕು. ಫಲಿತಾಂಶ ಬರುವವರೆಗೂ ಅವರನ್ನು ಓಲೈಸಿ ಲಾಡ್ಜುಗಳಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಇರಿಸಬೇಕು.

ಇದಕ್ಕಾಗಿ ಲಾಡ್ಜ್ ಮಾಲೀಕರ ಮನ ವೊಲಿಸಿ ಅದನ್ನು ವಶಕ್ಕೆ ತೆಗೆದುಕೊಳ್ಳಬೇಕು. ಫಲಿತಾಂಶ ಬಂದಮೇಲೆ ಅದು ನೆಗೆಟಿವ್ ಆಗಿದ್ದರೆ ಅವರನ್ನು ಬಿಡುಗಡೆ ಮಾಡಿ ಸುರಕ್ಷಿತವಾಗಿ ಮನೆಗೆ ಕಳುಹಿಸಬೇಕು. ಅಕಸ್ಮಾತ್ ಕೋಣೆಗಳಲ್ಲಿ ಪ್ರತ್ಯೇಕವಾಗಿ ತಂಗಿದ್ದ ಒಬ್ಬರಿಗೆ ಕೋವಿಡ್ ಸೋಂಕು ದೃಡಪಟ್ಟರೆ, ಅವರನ್ನು ಕೂಡಲೇ ಅಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಬೇಕು. ಇನ್ನುಳಿದವರನ್ನು ಕೋಣೆಯಿಂದ ಹೊರಗೆ ಕರೆ ತಂದು ಅವರನ್ನು ಬೇರೆ ಲಾಡ್ಜ್‌ಗಳಿಗೆ ವರ್ಗಾಯಿಸಬೇಕು. ಅಲ್ಲಿ ಪ್ರತಿಯೊಬ್ಬರನ್ನೂ ಪ್ರತ್ಯೇಕ ಕೋಣೆಗಳಲ್ಲಿ ಇರಿಸಬೇಕು. ಸೋಂಕಿತ ತಂಗಿದ್ದ ಇಡೀ ಲಾಡ್ಜ್‌ನ್ನು ಹೈಪೋ ದ್ರಾವಣ ಸಿಂಪಡಿಸಿ ಶುಚಿಗೊಳಿಸಬೇಕು. ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸಬೇಕು. ಒಂದೇ ಎರಡೇ ಎಷ್ಟೊಂದು ಕೆಲಸಗಳು. ಇವು ಯಾವುವೂ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಸಾರ್ವಜನಿಕರ ಗಮನಕ್ಕೇ ಬರುವುದಿಲ್ಲ. ಈಗಾಗಲೇ ಏಳು ಸಾವಿರಕ್ಕೂ ಹೆಚ್ಚು ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಅಂದರೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ, ಸಿಬ್ಬಂದಿಗಳ ಬಿಡುವಿಲ್ಲದ ಕೆಲಸಗಳನ್ನು ಊಹಿಸಿಕೊಳ್ಳಿ.

ಈ ಮಹತ್ತರ ಕಾರ್ಯ ದಲ್ಲಿ ಮೊದಲಿಗೆ ತೊಡಗಿಸಿ ಕೊಳ್ಳುವುದೇ ಜಿಲ್ಲಾ ಸರ್ವೇಕ್ಷಣಾ ತಂಡ. ಇದರ ನೇತೃತ್ವವನ್ನು ವಹಿಸಿಕೊಂ ಡಿರುವ ವೈದ್ಯ ಡಾ. ಜಿ.ಡಿ. ರಾಘವನ್ ಓರ್ವ ದಕ್ಷ ಅಧಿಕಾರಿ. ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಅವಿರತವಾಗಿ ಕೆಲಸ ಮಾಡುತ್ತಿರು ವವರು ಕ್ಷಿಪ್ರ ಪ್ರತಿವರ್ತನಾ ತಂಡದ (ಆರ್.ಆರ್.ಟಿ) ಸೋಂಕು ರೋಗ ತಜ್ಞ ಡಾ. ಯತೀಶ್, ಸೂಕ್ಷ್ಮ ಜೀವ ವಿಜ್ಞಾನಿ ಪ್ರಶಾಂತ್ ಜೊತೆಗೆ ಹಿರಿಯ ವೈದ್ಯಕೀಯ ಮೇಲ್ವಿಚಾರಕ ಆರ್.ಲೋಕೇಶ್ ಹಾಗೂ ಜೆ.ವಿ. ಗೋಪಾಲ ಕೃಷ್ಣ ಮತ್ತು ಮುಂತಾದವರು. ಇದಲ್ಲದೇ ಕೋವಿಡ್ ಸೋಂಕಿ ತರ ಪ್ರಾಥಮಿಕ ಹಾಗೂ ಸಾಮಾಜಿಕ ಸಂಪರ್ಕಿ ತರನ್ನು ಪತ್ತೆ ಮಾಡಲು ತಂಡವೊಂದನ್ನು ನಿಯೋಜಿ ಸಲಾಗಿದ್ದು, ಡಾ. ರುದ್ರೇಶ್, ಡಾ. ಹೇಮಂತ್, ಡಾ. ಸಪ್ಪನ್ ಪಾಟೀಲ್ ಹಾಗೂ ಡಾ. ರಾಘವೇಂದ್ರ ಮುಂತಾ ದವರು ಈ ತಂಡದಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ಕಂಟೈನ್‌ಮೆಂಟ್ ವಲಯಗಳಲ್ಲಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಕೆಲಸ ಮಾಡುತ್ತಿದ್ದು, ಡಾ. ಮೀನಾಕ್ಷಿ, ಡಾ.ರೇಣುಕಾರಾಧ್ಯ, ಡಾ. ಮುರಳೀಧರ್‌ ಮುಂತಾದವರು ಕಾರ್ಯೋನ್ಮುಖರಾಗಿದ್ದಾರೆ. ಕೋವಿಡ್ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಅನುಸರಣ ಕಾರ್ಯವನ್ನು  ಡಾ. ಮಂಜುನಾಥ್ ಪಾಟೀಲ್ ಮುಂತಾದವರು ಮಾಡುತ್ತಿದ್ದಾರೆ.

ಸರ್ವೇಕ್ಷಣಾ ತಂಡಕ್ಕೆ ಸಹಕಾರಿಯಾಗಿ ಕೆಲಸ ಮಾಡುತ್ತಿರುವ ತಂಡಗಳೆಂದರೆ ಮುಖ್ಯವಾಗಿ ಕ್ವಾರಂಟೈನ್ ಮೇಲ್ವಿಚಾರಣೆಯ ತಂಡ ಹಾಗೂ ದ್ರವ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಕೋವಿಡ್ ಫಲಿತಾಂಶವನ್ನು ನೀಡುವ ತಂಡ. ಕ್ವಾರಂಟೈನ್ ಮೇಲ್ವಿಚಾರಣೆಯ ನೇತೃತ್ವವನ್ನು ಡಾ. ಕೆ. ನಟರಾಜ್ ವಹಿಸಿಕೊಂಡಿದ್ದು, ಅವರಿಗೆ ನವೀನ್, ಡಾ. ಪಿ.ಕೆ. ವೆಂಕಟೇಶ್, ಡಾ. ದೇವರಾಜ್, ಡಾ. ನೇತಾಜಿ, ಡಾ. ಪ್ರಶಾಂತ್, ಡಾ. ಶಂಕರೇಗೌಡ ಮುಂತಾದವರು ಸಹಕರಿಸುತ್ತಿದ್ದಾರೆ.

ಸೋಂಕಿತರನ್ನು ಕರೆತರಲು ಆಂಬ್ಯುಲೆನ್ಸ್ ಡ್ರೈವರ್‌ಗಳಾದದಾದು, ಲೋಕೇಶ್, ದಿನೇಶ್, ನರೇಂದ್ರ ಮುಂತಾದವರು ಎದೆಗುಂದದೆ ಸದಾ ಸಿದ್ಧರಿರುತ್ತಾರೆ. ಕ್ವಾರಂಟೈನ್‌ನಲ್ಲಿ ಇರಿಸಬೇಕಾದ ಕೋವಿಡ್ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು ಕರೆತರಲು ಕೆ.ಎಸ್.ಆರ್.ಟಿ.ಸಿ ಇಲಾಖೆ ಸಹಕರಿಸುತ್ತಿದ್ದು, ಈ ಇಲಾಖೆಯ ಡ್ರೈವರ್‌ಗಳು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಸಂಪರ್ಕಿತ ವ್ಯಕ್ತಿಗಳನ್ನು ಪ್ರತ್ಯೇಕವಾಗಿ ಲಾಡ್ಜ್ ಗಳಲ್ಲಿ ಇರಿಸಲು ದಾವಣಗೆರೆ ಮಹಾನಗರಪಾಲಿಕೆಯ ಕಮೀಷನರ್ ವಿಶ್ವನಾಥ್ ಮುದಜ್ಜಿ ತಮ್ಮ ತಂಡದೊಂದಿಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.

ಇದಕ್ಕೆ ನಗರದ ಇಪ್ಪತ್ತಕ್ಕೂ ಹೆಚ್ಚು ಲಾಡ್ಜುಗಳ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಇನ್ನು ಲಾಡ್ಜುಗಳನ್ನು ಪ್ರವೇಶಿಸುವ ಮುನ್ನ ಹಾಗೂ ತೆರವುಗೊಳಿಸಿದ ನಂತರ ಅವುಗಳನ್ನು ಸೋಂಕು ನಿರೋಧಕ ಹೈಪೋ ದ್ರಾವಣವನ್ನು ಸಿಂಪಡಿಸುವ ಮೂಲಕ ಶುಚಿಗೊಳಿಸಬೇಕು. ಈ ಕಾರ್ಯದಲ್ಲಿ ಅಗ್ನಿ ಶಾಮಕ ದಳದ ಅಧಿಕಾರಿ ಬಸವಪ್ರಭು ಶರ್ಮಾ ನೇತೃತ್ವದ ತಂಡ ಸಹಕರಿಸುತ್ತಿದೆ.

ಗಂಟಲು ದ್ರವ ಮಾದರಿಗಳ ತಪಾಸಣೆ ಮಾಡುತ್ತಿರುವ ತಂಡವನ್ನು ಡಾ. ಕೆ.ಹೆಚ್.ಗಂಗಾಧರ್ ಮುನ್ನಡೆಸುತ್ತಿದ್ದು, ಅವರೊಂದಿಗೆ ಕರಿಬಸವರಾಜು ಮುಂತಾದವರ ಜೊತೆಗೆ ಸುಮಾರು ನಲವತ್ತಕ್ಕೂ ಹೆಚ್ಚು ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಡಾಟಾ ಎಂಟ್ರಿ ಮಾಡುತ್ತಿರುವ ತಂಡ ಸಮರ್ಪಕ ಮಾಹಿತಿಯನ್ನು ಕಲೆ ಹಾಕುತ್ತಿದೆ. ಇಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸುವ ಯಶವಂತ್ ಎಂಬುವರ ಕುರಿತು ವಿಶೇಷವಾಗಿ ಹೇಳಲೇ ಬೇಕು. ಅದೆಷ್ಟೋ ವ್ಯಕ್ತಿಗಳ ಗಂಟಲಿನಿಂದ ಮಾದರಿಗಳನ್ನು ತೆಗೆದಿರುವ ಈತ ಹತ್ತಕ್ಕೂ ಹೆಚ್ಚು ಮೃತದೇಹಗಳಿಂದಲೂ ಮಾದರಿ ಸಂಗ್ರಹಿಸಿದ್ದಾರೆ.

ಸಾಮಾನ್ಯವಾಗಿ ಈಗ ಜಿಲ್ಲೆಯಲ್ಲಿ ಯಾರಾದರೂ ಮೃತ ಪಟ್ಟರೆ ಅವರ ನಾಸಿಕದ ಮೂಲಕ ನಳಿಕೆಯನ್ನು ಹಾಕಿ ದ್ರವ ಸಂಗ್ರಹ ಮಾಡಿ ಕೋವಿಡ್ ಪರೀಕ್ಷೆಯನ್ನು ಮಾಡುತ್ತಾರೆ. ಈ ಕೆಲಸವನ್ನು ಮಾಡಲು ಎಂಟೆದೆ ಬೇಕು. ಯಶವಂತ್ ಎಂತಹ ಸಮಯ ದಲ್ಲೂ ಈ ಕೆಲಸ ಕೊಟ್ಟರೆ ನಿಷ್ಠೆಯಿಂದ ಮಾಡುವ ಅಂಜದ ಗಂಡು. ಈತ ಎಲ್ಲರ ಹಾಗೆ ದೈಹಿಕವಾಗಿ ಸಹಜ ಸ್ಥಿತಿಯಲ್ಲಿ ಇರದ ವ್ಯಕ್ತಿ. ಒಬ್ಬ ವಿಕಲಚೇತನ. ಕಾಲಿನಲ್ಲಿ ನ್ಯೂನತೆ ಇದ್ದರೂ ಸಹ ಅದನ್ನು ಲೆಕ್ಕಿಸದೇ ಈ ಕೆಲಸವನ್ನು ಮಾಡಿಕೊಂಡು ಬರುತ್ತಾರೆ.

ಕ್ವಾರಂಟೈನ್ ನೇತೃತ್ವದ ಡಾ. ನಟರಾಜ್ ಹಾಗೂ ಮಾದರಿ ತಪಾಸಣಾ ತಂಡದ ಮುಖ್ಯಸ್ಥ ಡಾ. ಗಂಗಾಧರ್ ತಮಗೆ ನಿರ್ವಹಿಸಲು ಕೊಟ್ಟ ಕಾರ್ಯಗಳ ಜೊತೆಗೆ, ಬೇರೆಯ ಕೆಲಸಗಳಲ್ಲಿಯೂ ಸರ್ವೇಕ್ಷಣಾ ಅಧಿಕಾರಿ ಡಾ. ರಾಘವನ್‌ ಗೆ ಸಹಕರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸೂಚನೆಯಂತೆ ನಮ್ಮ ಜಿಲ್ಲೆಗೆ ಕಾಂಟಿನ್ ಜೆನ್ಸಿ ಪ್ಲಾನ್ ಮಾಡಬೇಕಿತ್ತು. ಅಂದರೆ, ಮುಂಜಾಗರೂಕತೆಯಿಂದ ಸಂಭವನೀಯ ಕೋವಿಡ್ ಚಿಕಿತ್ಸಾ ವ್ಯವಸ್ಥೆಗೆ ರೂಪು ರೇಷೆಗಳನ್ನು ತಯಾರಿಸಬೇಕಿತ್ತು.

ಇವರಿಗೆ ಕೊಡಲಾಗಿದ್ದ ಮಾರ್ಗ ಸೂಚಿಗಳನ್ನು ಆಧರಿಸಿ, ಜಿಲ್ಲೆಯಲ್ಲಿನ ಕೋವಿಡ್ ಸೋಂಕಿನ ಅಂಕಿ, ಅಂಶಗಳನ್ನು ಪರಿಗಣಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಒ ಡಾ. ಪದ್ಮಾ ಬಸವಂತಪ್ಪ ಅವರ ಸಲಹೆ ಪಡೆದು ಇವರಿಬ್ಬರೂ ಡಾ. ಜಿ.ಡಿ. ರಾಘವನ್ ನೇತೃತ್ವದಲ್ಲಿ ಸುಮಾರು ಐದು ನೂರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸಾ ವ್ಯವಸ್ಥೆಯನ್ನು ಸಿದ್ದಪಡಿಸಿದ್ದಾರೆ.

ಮೇಲ್ಕಾಣಿಸಿದ ಎಲ್ಲಾ ತಂಡಗಳದ್ದು ದೈತ್ಯದ ಕೆಲಸ. ಇವರಲ್ಲಿ ಪ್ರಮುಖರು ಸುಮಾರು ಮೂರು ವಾರಗಳಿಂದ ತಮ್ಮ ಮನೆಗಳಿಗೇ ಹೋಗಿಲ್ಲ. ಹಗಲೂ ರಾತ್ರಿ ಕೆಲಸ ಮಾಡಬೇಕಿರುವುದರಿಂದ ಅವರೆಲ್ಲಾ ಸ್ವಯಂಪ್ರೇರಿತ ನಿರ್ಧಾರ ಮಾಡಿ ಲಾಡ್ಜ್ ಗಳಲ್ಲಿ ಪ್ರತ್ಯೇಕ ಕೋಣೆಗಳಲ್ಲಿದ್ದಾರೆ. ಇವರ ಕಷ್ಟದ ಕೆಲಸಗಳು ಸಾರ್ವಜನಿಕರ ಕಣ್ಣಿಗೆ ಕಾಣುವುದಿಲ್ಲ. ಸೋಂಕಿತರ ಸಂಬಂಧಿಗಳಿಂದ, ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗಳಿಂದ ಇವರಿಗೆ ನಿರಂತರವಾಗಿ ಫೋನ್ ಕಾಲ್ ಗಳು ಬರುತ್ತಲೇ ಇರುತ್ತವೆ. ಅವರಲ್ಲಿ ಕೆಲವರಿಂದ ವಿಶೇಷವಾದ ಊಟಕ್ಕೆ, ತಮ್ಮನ್ನು ಬಿಡುಗಡೆ ಮಾಡಿರೆಂಬ ಬೇಡಿಕೆಗಳ ಕರೆಗಳು ಬಂದರೆ, ಮಾದರಿಗಳ ಫಲಿತಾಂಶ ಕುರಿತ ವಿಚಾರಣೆಗಳ ಕರೆಗಳು ಬರುತ್ತಲೇ ಇರುತ್ತವೆ.

ಈ ತಂಡಗಳ ಅನುಭವಗಳು ರೋಚಕವಾಗಿವೆ. ಅವುಗಳಲ್ಲಿ ಕೆಲವನ್ನು ಉದಾಹರಿಸಬೇಕೆಂದರೆ, ಹಳೆಯ ದಾವಣಗೆರೆ ಪ್ರದೇಶವೊಂದರಿಂದ ಕೋವಿಡ್ ಸೋಂಕಿತ ಇಬ್ಬರನ್ನು ಆಂಬ್ಯುಲೆನ್ಸ್ ನಲ್ಲಿ ಕೂರಿಸಿ ಕರೆತರಲಾಯಿತು. ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಿ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ನೂರ ಐವತ್ತಕ್ಕೂ ಹೆಚ್ಚು ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಅವರನ್ನು ಫಲಿತಾಂಶ ಬರುವ ತನಕ ಹಲವು ಲಾಡ್ಜ್‌ಗಳಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಇರಿಸಲಾಯಿತು. ಹಲವು ದಿನಗಳ ನಂತರ ಮಾದರಿಗಳ ಫಲಿತಾಂಶಗಳು ಬರಲು ಆರಂಭಿಸಿದವು. ಅದರಲ್ಲಿ ಒಂದೇ ದಿನಕ್ಕೆ ಇಪ್ಪತ್ತೊಂದು ಜನರಲ್ಲಿ ಸೋಂಕು ದೃಢಪಟ್ಟಿತ್ತು. ಸರಿ ಶುರುವಾಯ್ತು ನೋಡಿ. ಆ ಇಪ್ಪತ್ತೊಂದು ಜನರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗೆ ಹುಡುಕಾಟ.

ಇನ್ನೊಂದು ಪ್ರಕರಣದಲ್ಲಿ ಕೇವಲ ಎಂಟು ತಿಂಗಳ ಮಗುವಿಗೆ ಸೋಂಕು ದೃಢಪಟ್ಟಿತು. ಆದರೆ, ಆ ಮಗುವಿನ ತಂದೆ, ತಾಯಿಗಳಿಗೆ ಸೋಂಕು ತಗುಲಿರಲಿಲ್ಲ. ಹಾಗಾದರೆ, ಆ ಮಗುವಿಗೆ ಸೋಂಕು ತಗುಲಿದ್ದಾದರೂ ಯಾರಿಂದ ಮತ್ತು ಹೇಗೆ. ಪತ್ತೇದಾರಿ ಕೆಲಸ ಆರಂಭವಾಯಿತು. ಆ ಕುಟುಂಬದ ಚಲನವಲನ ವಿಚಾರಿಸಿದಾಗ ಆ ಮಗುವಿನೊಂದಿಗೆ ದಂಪತಿಗಳು ಹತ್ತಿರದಲ್ಲಿದ್ದ ತಮ್ಮ ಸಂಬಂಧಿಕರ ಮನೆಗೆ ಹೋಗಿ ಒಂದಷ್ಟು ಹೊತ್ತು ಕಳೆದಿದ್ದರು. ಆ ಸಂಬಂಧಿಕರ ಮನೆಯಲ್ಲಿ ಎಂಟು ಜನರಿದ್ದಾರೆ. ಅವರೆಲ್ಲಾ ಈ ಮಗುವನ್ನು ಎತ್ತಿಕೊಂಡು ಆಟವಾಡಿಸಿದ್ದಾರೆ.

ಸರಿ ಆ ಎಂಟೂ ಜನರನ್ನು ಕರೆದುಕೊಂಡು ಬಂದು ತಪಾಸಣೆ ಮಾಡಲಾಯಿತು. ಅವರಲ್ಲಿ ಆರು ಜನಕ್ಕೆ ಸೋಂಕು ಇರುವುದು ದೃಢಪಟ್ಟಿತ್ತು. ಅವರ ಮೂಲಕ ಈ ಮಗುವಿಗೆ ಸೋಂಕಿನ ಸ್ಪರ್ಷವಾಗಿರುವ ಸಾಧ್ಯತೆಯಿದೆ. ಸರಿ, ಈ ಆರೂ ಜನರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳ ಪತ್ತೆಗೆ ಓಡಾಟ ಶುರುವಾಯಿತು. ಇಂತಹ ಹಲವಾರು ಅನುಭವಗಳನ್ನು ಈ ತಂಡಗಳು ಅನುಭವಿಸಿವೆ. ಈ ತಂಡಗಳಲ್ಲಿ ಕರ್ತವ್ಯಕ್ಕೆ ಆದ್ಯತೆ ಕೊಟ್ಟು ಹಗಲು ರಾತ್ರಿಯೆನ್ನದೇ ದುಡಿಯುತ್ತಿರುವ ಸಿಬ್ಬಂದಿಗಳು ಅನೇಕರಿದ್ದಾರೆ. ಕೆಲವರು ನಿದ್ರೆ, ಹಸಿವನ್ನೂ ಲೆಕ್ಕಿಸದೇ ಕೆಲಸದಲ್ಲಿ ತೊಡಗಿರುತ್ತಾರೆ. ಅವರಂತೆಯೇ ಸೋಂಕಿನ ಭಯವಿಲ್ಲದೇ ರೋಗಿಗಳನ್ನು ಕರೆದೊಯ್ಯುವ ಆಂಬ್ಯುಲೆನ್ಸ್ ಡ್ರೈವರ್‌ಗಳು, ಕ್ವಾರಂಟೈನ್ ಗೆ ಶಂಕಿತರನ್ನು ಕರೆ ತರುವ ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಗಳು ನಮಗ್ಯಾರಿಗೂ ಗೋಚರಿಸುವುದೇ ಇಲ್ಲ.

ಜಿಲ್ಲಾ ಡ್ರಗ್ಸ್ ಮತ್ತು ಲಾಜಿಸ್ಟಿಕ್ಸ್  ಕೇಂದ್ರ ಕೋವಿಡ್ ಚಿಕಿತ್ಸಾ ಕಾರ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಚಿಕಿತ್ಸೆಗೆ ಅಗತ್ಯವಾದ ಔಷಧಿ, ಪಿ.ಪಿ.ಇ ಕಿಟ್ ಮುಂತಾದ ಅತೀ ಅವಶ್ಯಕ ವಸ್ತುಗಳನ್ನು ಪೂರೈಸುವ ಕೆಲಸವನ್ನು ಜಿಲ್ಲಾ ಫಾರ್ಮಸಿ ಅಧಿಕಾರಿ ಕೊಟ್ರೇಶ್ ಬಣಕಾರ್ ನೇತೃತ್ವದ ತಂಡ ಮಾಡುತ್ತಿದೆ. 

ಅಂತಿಮವಾಗಿ ಸೋಂಕಿತರ ಚಿಕಿತ್ಸೆಯ ವ್ಯವಸ್ಥೆಗೆ ಬಂದರೆ ಸಿ.ಜಿ. ಆಸ್ಪತ್ರೆ ಕೋವಿಡ್ ಚಿಕಿತ್ಸೆಗೆ ಸಜ್ಜಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಸರ್ಜನ್ ಡಾ. ನಾಗರಾಜ್ ಮಾರ್ಗದರ್ಶನದಲ್ಲಿ ಡಾ. ಸುರೇಂದ್ರ ನೇತೃತ್ವದ ತಜ್ಞರ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಡಾ.ಸುಬಾಷ್ ಚಂದ್ರ, ಡಾ. ಗಿರೀಶ್, ಡಾ. ಹೇಮಂತ್, ಡಾ. ದಿಲೀಪ್, ಡಾ. ಅರುಣಕುಮಾರಿ ಮುಂತಾದ ವೈದ್ಯರು ರೋಗಿಗಳ ಮೇಲ್ವಿಚಾರಣೆಯನ್ನು ಮಾಡುತ್ತಿದ್ದಾರೆ. ಡಾ. ಲೋಹಿತ್, ಡಾ. ಸುರೇಶ್ ಗುಂಡಪಲಿ ಕೋವಿಡ್ ಸೋಂಕಿತ ಮಕ್ಕಳ ಆರೋಗ್ಯ ವಿಚಾರಿಸುತ್ತಾರೆ.

ಡಾ. ಮರಳಸಿದ್ಧ, ಡಾ. ಶಶಿಧರ್ ಸರ್ವೇಕ್ಷಣಾ ತಂಡದೊಡನೆ ಸಹಕರಿಸುತ್ತಿದ್ದಾರೆ. ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ಅರಿವಳಿಕೆ ತಜ್ಞ ಡಾ. ಆರ್. ರವಿ ಮತ್ತು ಡಾ|| ಸಂಜಯ್ ಎಸ್.ಟಿ,  ಡಾ|| ದಿಲೀಪ್ ಮುಂತಾದವರು ತುರ್ತು ಘಟಕ ಐ.ಸಿ.ಯು ವೆಂಟಿಲೇಟರ್ ಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲಿ ವೈದ್ಯಕೀಯ ಸ್ನಾತಕೋತ್ತರದ ವಿದ್ಯಾರ್ಥಿಗಳು ಹಾಗೂ ಹೌಸರ್ಜೆನ್ಸಿ ಮಾಡುತ್ತಿರುವ ಕಿರಿಯ ವೈದ್ಯರು ತೊಡಗಿಸಿಕೊಂಡಿದ್ದಾರೆ. ಸರ್ಕಾರದಿಂದ ಇದುವರೆಗೂ ಇವರಿಗೆ ಸ್ಟೈಫಂಡ್ ದೊರೆಯದಿದ್ದರೂ ಈ ವಿದ್ಯಾರ್ಥಿಗಳು ಕೆಲಸಕ್ಕೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ.

ಗಂಟಲು ದ್ರವ ಸಂಗ್ರಹಣೆಯಲ್ಲಿ ಡಾ|| ಕುಮಾರ್, ಡಾ|| ಮಂಜುನಾಥ್ ಮುಂತಾದವರು ಕಾರ್ಯನಿರ್ವಹಿಸುತ್ತಿದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿ ಡಾ|| ಗುರುರಾಜ್, ಡಾ|| ಶಶಿಧರ್, ಡಾ|| ಮರುಳಸಿದ್ದಪ್ಪ ಹಾಗೂ ಆಯುಷ್ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಪೋಸ್ಟ್‌ ಮಾರ್ಟಮ್‌ ವಿಚಾರಣೆಯನ್ನು ಡಾ|| ಮೋಹನ್ ಮತ್ತು ತಂಡ ನಿಭಾಯಿಸುತ್ತಿದೆ.

ಚಿಗಟೇರಿ ಆಸ್ಪತ್ರೆಯ ಕೋವಿಡ್ ನಿರ್ವಹಣಾ ಕಾರ್ಯದಲ್ಲಿ ಪಕ್ಕದ ಜೆ.ಜೆ.ಎಂ ವೈದ್ಯಕೀಯ ಕಾಲೇಜು ಮತ್ತು ಎಸ್.ಎಸ್. ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಹಕಾರ ನೀಡುತ್ತಿವೆ.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ದಾವಣಗೆರೆ ಘಟಕದ ಛೇರ್ಮನ್ ಹಾಗೂ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹ ಲೈಫ್ ಲೈನ್ ಅಧ್ಯಕ್ಷ ನಗರದ ಖ್ಯಾತ ಕಿವಿ, ಗಂಟಲು, ಮೂಗು ತಜ್ಞ ಡಾ. ಎ.ಎಂ. ಶಿವಕುಮಾರ್ ತಮ್ಮ ಉತ್ಸಾಹಿ ತಂಡದೊಂದಿಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಅಲ್ಲದೇ ಕಾರ್ಯನಿರ್ವಹಿಸುತ್ತಿರುವ ವೈದ್ಯರುಗಳಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದಾರೆ.

ಚಿಗಟೇರಿ ಕೋವಿಡ್ ಆಸ್ಪತ್ರೆಯಲ್ಲಿ ಅತೀ ಹೆಚ್ಚು ಸೋಂಕಿತ ರೋಗಿಗಳ ಸಂಪರ್ಕಕ್ಕೆ ಬರುವ, ಅವರನ್ನು ಶುಶ್ರೂಷೆ ಮಾಡುವ ನರ್ಸ್‌ಗಳ ಸೇವೆ ಶ್ಲಾಘನೀಯ. ಆಶಾ ಕಾಂಬ್ಳೆ, ವರಲಕ್ಷ್ಮಿ ಬಳ್ಳಾರಿ, ಮೈನಾವತಿ ಜಿ.ನಾಯ್ಕ, ಎಸ್ತರ್ ಡಿ.ಸೊಂಟಕ್ಕಿ ಇವರ ನೇತೃತ್ವದಲ್ಲಿ ನರ್ಸಿಂಗ್ ತಂಡಗಳು ರೋಗಿಗಳ ಶುಶ್ರೂಷೆಯಲ್ಲಿ ತೊಡಗಿವೆ. ಅದರಂತೆಯೇ ವಾರ್ಡ್‌ಗಳನ್ನು ಶುಚಿಗೊಳಿಸುವ, ರೋಗಿಗಳ ಹಾಸಿಗೆ, ಹೊದಿಕೆಗಳನ್ನು ಹೊಂದಿಸುವ ಸಿಬ್ಬಂದಿಗಳನ್ನು ಮೆಚ್ಚಲೇಬೇಕು. ಇನ್ನು ಆಸ್ಪತ್ರೆಯ ತ್ಯಾಜ್ಯ ವಸ್ತುಗಳನ್ನು, ವಿಸರ್ಜಿಸಿದ ಉಡುಪುಗಳನ್ನು ಸೂಕ್ತ ಸ್ಥಳಗಳಿಗೆ ಸಾಗಿಸುವ ಸಿಬ್ಬಂದಿಗಳದ್ದು ಅತಿ ಹೆಚ್ಚು ಅಪಾಯಕಾರಿ ಕೆಲಸ.

ಇದನ್ನು ನಿರ್ವಹಿಸುವ ಕೆಲಸಗಾರರಿಗೆ ದೊಡ್ಡ ಸೆಲ್ಯೂಟ್ ಹೇಳಲೇಬೇಕು. ಮೇಲಾಗಿ ಕೋವಿಡ್ ನಿಂದ ಮೃತಪಟ್ಟವರ ದೇಹಗಳನ್ನು ದಫನ್ ಮಾಡುವ ಕರ್ಮಚಾರಿಗಳ ಕಾರ್ಯ ಅತ್ಯಂತ ಮಹತ್ತರವಾದದ್ದು. ಅಂತಿಮ ಸಂಸ್ಕಾರದಲ್ಲಿ ಆ ದೇಹಗಳನ್ನು ಶುಚಿಗೊಳಿಸಿ, ಸುಭದ್ರವಾದ, ಸೂಕ್ತವಾದ ಹೊದಿಕೆಗಳಲ್ಲಿ ಸುತ್ತಿ ದಫನ್ ಮಾಡಬೇಕು. ಈ ಯೋಧರಿಗೊಂದು ಸಲಾಂ.

ಇಲ್ಲಿಯವರೆಗೆ ದಾವಣಗೆರೆಯಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಗಂಟಲು ದ್ರವ ಮಾದರಿಗಳು ಸಂಗ್ರಹವಾಗಿದ್ದು ಅವುಗಳಲ್ಲಿ ಸುಮಾರು ಏಳೂವರೆ ಸಾವಿರಕ್ಕೂ ಹೆಚ್ಚು ಫಲಿತಾಂಶಗಳು ಹೊರ ಬಿದ್ದಿವೆ. ಅವುಗಳಲ್ಲಿ ಶೇಕಡಾ ತೊಂಬತ್ತೆಂಟು ಕೋವಿಡ್ ಸೋಂಕು ಇಲ್ಲ ಎಂಬ ಫಲಿತಾಂಶ ನೀಡಿವೆ. ಕೇವಲ ನೂರಾ ಐವತ್ತು ಫಲಿತಾಂಶಗಳು ಮಾತ್ರ ಸೋಂಕನ್ನು ಧೃಡಪಡಿಸಿವೆ. ಸೋಂಕಿತರ ಚಿಕಿತ್ಸೆ ಚಿಗಟೇರಿ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಅವರಲ್ಲಿ ಎಂಬತ್ತಕ್ಕೂ ಹೆಚ್ಚು ಜನ ಗುಣಮುಖರಾಗಿ ಹೊರ ಬಂದಿದ್ದಾರೆ. ಪ್ರತಿ ದಿನ ಸರಾಸರಿ ನಾಲ್ಕರಿಂದ ಐದು ಸೋಂಕಿತರು ಆಸ್ಪತ್ರೆಗೆ ಸೇರ್ಪಡೆಯಾಗುತ್ತಿದ್ದಾರೆ.

ಇಲ್ಲಿಯವರೆಗೂ ನಾಲ್ಕು ಜನ ಮೃತಪಟ್ಟಿದ್ದಾರೆ. ಅವರಲ್ಲಿ ಮೂವರಿಗೆ ಆರೋಗ್ಯದ ಇತರೆ ಗಂಭೀರ ತೊಂದರೆಗಳಿದ್ದವು. ಐವತ್ತೆರಡು ವರ್ಷದ ಓರ್ವ ಮಹಿಳೆಯ ಸಾವು ಮುಖ್ಯವಾಗಿ ಕೋವಿಡ್ ತೊಂದರೆಯ ಭಯದಿಂದ ಆಗಿರಬಹುದೆಂದು ಅಂದಾಜಿಸಲಾಗುತ್ತಿದೆ. ಈಗಾಗಲೇ ಆಸ್ಪತ್ರೆಯಿಂದ ಗುಣಮುಖರಾಗಿ ಹೊರ ಬಂದವರಲ್ಲಿ ವಯೋವೃದ್ಧರಿದ್ದಾರೆ.

ಹತ್ತು ವರ್ಷದ ಕೆಳಗಿನ ಮಕ್ಕಳಿದ್ದಾರೆ. ಮತ್ತು ಕೇವಲ ಎಂಟು ವರ್ಷದ ಮಗುವೂ ಕೂಡ ಇದೆ. ಇದನ್ನೆಲ್ಲಾ ಅವಲೋಕಿಸಿದರೆ, ಕೊರೊನಾದಿಂದ ಯಾರೂ ಹೆದರಬೇಕಿಲ್ಲ, ಬೆದರಬೇಕಿಲ್ಲ. ನಾವುಗಳು ಸೋಂಕು ತಗುಲದಂತೆ ಎಚ್ಚರವಹಿಸಿ ಧೈರ್ಯವಾಗಿ ಎದುರಿಸಬೇಕು. ಮುಖ್ಯವಾಗಿ ಸೋಂಕಿತರನ್ನು ಅದರಿಂದ ಬಿಡುಗಡೆಯಾದವರನ್ನು ಅಸ್ಪೃಶ್ಯರ ತರಹ ನೋಡಲೇ ಬಾರದು. ಆ ಧೈರ್ಯಶಾಲಿಗಳನ್ನು ಸಮಾಜ ಮಾನವೀಯ ಸ್ಪರ್ಷದಿಂದ ಪ್ರೋತ್ಸಾಹಿಸಿ ಸ್ವಾಗತಿಸಬೇಕಿದೆ.

ಮೇಲ್ಕಾಣಿಸಿದ ಬಹುತೇಕ ಮಾಹಿತಿಗಳನ್ನು ಕಲೆ ಹಾಕಿದ ನಮ್ಮ ತಂಡದ ವಿದ್ಯಾರ್ಥಿಗಳು ನಾವೆಲ್ಲರೂ ಗಮನಿಸಬೇಕಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ನಾವೆಲ್ಲರೂ ಸರ್ಕಾರಿ ವೈದ್ಯ ಕೀಯ ವ್ಯವಸ್ಥೆಯನ್ನು ಬಹಳ ಗೌಣವಾಗಿ ಪರಿಗ ಣಿಸಿದ್ದೆವು. ಈ ಕೋವಿಡ್ ಕರಾಳ ವಾತಾವರಣದಲ್ಲಿ ಸರ್ಕಾರಿ ವೈದ್ಯರು, ಇತರೆ ವೈದ್ಯಕೀಯ ಸಿಬ್ಬಂದಿಗಳು ಕರ್ತವ್ಯ ನಿಷ್ಠೆಯಿಂದ ತೊಡಗಿಸಿಕೊಂಡಿರುವುದನ್ನು ನೋಡಿದರೆ ಇವರ ಸೇವೆ ಗಣನೀಯ. ಇವರದ್ದು ರೂಪಾಯಿ ಮೌಲ್ಯಾಧಾರಿತ ಕಾರ್ಯವಲ್ಲ. ಮಾನವೀಯ ಮೌಲ್ಯಾಧಾರಿತ ಕಾಯಕ.


ಸಮಾಜದ ಸ್ವಾಸ್ಥ್ಯಕ್ಕಾಗಿ ಶ್ರಮಿಸುತ್ತಿವೆ ಈ ಜೀವಗಳು.... - Janathavani

ಅರುಣ್‌ಕುಮಾರ್  ಆರ್.ಟಿ.
[email protected]
ಕೋವಿಡ್ ಅಧ್ಯಯನ ತಂಡ.

error: Content is protected !!