ಸಿರಿ ಧಾನ್ಯ ಸವಿ ರುಚಿಯ ಮಾದರಿ ಮಹಿಳೆ…

Home ಲೇಖನಗಳು ಸಿರಿ ಧಾನ್ಯ ಸವಿ ರುಚಿಯ ಮಾದರಿ ಮಹಿಳೆ…

ಸಿರಿ ಧಾನ್ಯ ಸವಿ ರುಚಿಯ ಮಾದರಿ ಮಹಿಳೆ…

 2003 ನೇ ವರ್ಷದಲ್ಲಿ ರೈತರ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಿಂದ ಇವರ ಪರಿಚಯವಾಗಿ ತಮ್ಮ ಕ್ಷೇತ್ರದಲ್ಲಿ SRI (System of  Rice Intensification) ಶ್ರೀ ಭತ್ತದ ಪ್ರಾತ್ಯಕ್ಷಿಕೆ ಕೈಗೊಂಡು ಕಡಿಮೆ ಬಂಡವಾಳದಲ್ಲಿ ಹೆಚ್ಚು ಇಳುವರಿ ಪಡೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಕೈ ಕೆಸರಾದರೆ ಬಾಯಿ ಮೊಸರು’ ಎಂಬಂತೆ ಕೃಷಿ ಇಲಾಖೆಯೊಂದಿಗೆ ಹೆಚ್ಚು ಸಂಪರ್ಕ ಹೊಂದಿ ಸಮಗ್ರ ಪೀಡೆ ನಿರ್ವಹಣೆ ಕಾರ್ಯಕ್ರಮಗಳಲ್ಲಿ ಭೂಮಿ ಸಿದ್ಧತೆ ಅಂದರೆ ಮಾಗಿ ಉಳುಮೆ ಮಾಡುವುದರಿಂದ ಹಿಡಿದು ಎರೆಹುಳು ಗೊಬ್ಬರ ತಯಾರಿಸುವುದು, ಗುಣಮಟ್ಟದ ಬಿತ್ತನೆ ಬೀಜ ಆಯ್ಕೆ, ಟ್ರೈಕೋಡರ್ಮಾ ಶಿಲೀಂದ್ರ ನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ,
ಸಸಿ ಮಡಿ ತಯಾರಿಕೆ, ನಾಟಿ ಮಾಡುವ ತಾಂತ್ರಿಕತೆ ಒಳಗೊಂಡಂತೆ, ಬೆಳೆಯ ಪರಿಸರದಲ್ಲಿ ಬರುವ ಪರತಂತ್ರ ಜೀವಿ, ಪರಭಕ್ಷಕ ಕೀಟಗಳ (ರೈತರ ಮಿತ್ರ ಹಾಗೂ ಶತ್ರು ಕೀಟಗಳ) ಪರಿಚಯ, ಬೆಳೆಗಳನ್ನು ಬಾಧಿಸುವ  ಶತ್ರು ಕೀಟಗಳ ನಿರ್ವಹಣೆಗೆ ಸ್ಥಳೀಯವಾಗಿ ದೊರೆಯುವ ಸಸ್ಯಗಳಿಂದ ಕೀಟನಾಶಕಗಳನ್ನು ತಯಾರಿಸಿ ಬೆಳೆ ಸಂರಕ್ಷಣೆ ಮಾಡುವ ವಿಧಾನವನ್ನು ಪ್ರತಿ ವಾರ ಕೃಷಿ ಪಾಠಶಾಲೆಯಲ್ಲಿ ತರಬೇತಿ ನೀಡಿ, ರೈತ ಸೌಲಭ್ಯಗಾರರಾಗಿ ಹರಿಹರ ತಾಲ್ಲೂಕಿನ ಕುಂಬಳೂರು, ಮಲೇಬೆನ್ನೂರು, ದಿಬ್ಬದಹಳ್ಳಿ, ಹರಳಹಳ್ಳಿ, ದೇವರ ಬೆಳಕೆರೆ, ಕೊಮಾರನಹಳ್ಳಿ, ಮಿಟ್ಲಕಟ್ಟೆ ಸಂಕ್ಲೀಪುರ, ಮಲ್ಲನಾಯಕನಹಳ್ಳಿ, ರಂಗರಾವ್ ಕ್ಯಾಂಪ್ ಹಾಗೂ ಇತರೆ ಅನೇಕ ಗ್ರಾಮಗಳಲ್ಲಿ ಭತ್ತ ಮತ್ತು ಹತ್ತಿ ಬೆಳೆಯ ರೈತ ಕ್ಷೇತ್ರ ಪಾಠಶಾಲೆಗಳು ನಡೆಸಿರುವ ಸರೋಜ ಕೃಷಿ ಗೀತೆಗಳನ್ನು ರಚಿಸಿ ಕ್ಷೇತ್ರೋತ್ಸವಗಳಲ್ಲಿ ಹಾಡಿ ರೈತರನ್ನು ಹೆಚ್ಚು ಆದಾಯ ಪಡೆಯುವಲ್ಲಿ ಪ್ರೇರೇಪಿಸುತ್ತಿದ್ದಾರೆ.
ಕೃಷಿ ಇಲಾಖೆಯಿಂದ ಸಮಗ್ರ ಪೀಡೆ ನಿರ್ವಹಣೆ ಪುನಶ್ಚೇತನ ತರಬೇತಿಗೆ ಮಂಡ್ಯಕ್ಕೆ ಕಳಿಸಿದಾಗ, ಬೋರೇಗೌಡರ ದೇಶೀಯ ಅನೇಕ ಭತ್ತದ ತಳಿಗಳ ಕ್ಷೇತ್ರ ವೀಕ್ಷಿಸಿದ ನಂತರ ಇವರಲ್ಲಿಯೂ ಆಸಕ್ತಿ ಬೆಳೆದು ಅವರಿಂದ ವಿವಿಧ ಔಷಧಿ ಗುಣಗಳುಳ್ಳ ಭತ್ತದ ತಳಿಗಳನ್ನು ಪಡೆದು ನಂತರದ ದಿನಗಳಲ್ಲಿ ತಮ್ಮ ಜಮೀನಿನ ಎರಡು ಗುಂಟೆ ಪ್ರದೇಶದಲ್ಲಿ 23 ದೇಶಿಯ ಭತ್ತದ ತಳಿಗಳನ್ನು ಬೆಳೆದು, ಬೀಜ ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಈ ಬೆಳೆಗಳಿಗೆ ಎರೆಹುಳು ಗೊಬ್ಬರ, ಎರೆ ಜಲ ಹಾಗೂ ತಾವೇ ಸಿದ್ದ ಪಡಿಸಿದ ಬೇವಿನ ಕಷಾಯ, ಲಕ್ಕಿ ಸೊಪ್ಪಿನ ಕಷಾಯ, ಬೆಳುಳ್ಳಿ ಕಷಾಯ, ಜೀವಾಮೃತ, ಬೀಜಾಮೃತ, ಇವುಗಳನ್ನು ಸಿಂಪರಣೆ ಮಾಡಿ ಬೆಳೆ ಹಾನಿ ಮಾಡುವ ಕೀಟಗಳಿಂದ ರಕ್ಷಿಸುತ್ತಾರೆ.

ವೈಟಪ್ ಯೋಜನೆಯಡಿ ಶ್ರೀ ಬನಶಂಕರಿ ಸ್ವ ಸಹಾಯ ಸಂಘವನ್ನು ಸ್ಥಾಪಿಸಿ ಸುತ್ತಮುತ್ತಲಿನ ರೈತರಿಗೆ, ರೈತ ಮಹಿಳೆಯರಿಗೆ ಸಾವಯವ ಕೃಷಿ ಪದ್ಧತಿ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುವುದಲ್ಲದೆ, ಸಂಘದ ಸದಸ್ಯರಿಗೆ ಮತ್ತು ಇತರೆ ಮಹಿಳೆಯರಿಗೆ ಸಾವಯವ ಬೆಳೆಯ ಮತ್ತು ಸಿರಿಧಾನ್ಯಗಳಿಂದ ಸಂಸ್ಕರಿಸಿದ ಆಹಾರ ತಯಾರಿಕೆಯಲ್ಲಿ ಮಾಹಿತಿ ನೀಡಿ ಸ್ವಾವಲಂಬಿಗಳಾಗಿ ಬದುಕಲು ಸಹಾಯ ಹಸ್ತ ನೀಡಿದ್ದಾರೆ. ಕೃಷಿ ಇಲಾಖೆಯಿಂದ ರಿಯಾಯ್ತಿ ದರದಲ್ಲಿ ಶಾವಿಗೆ ಮಾಡುವ ಯಂತ್ರ ಹಾಗೂ ಅಡಿಕೆ ತಟ್ಟೆ ಮಾಡುವ ಯಂತ್ರವನ್ನು ಪಡೆದು ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಆಸಕ್ತ ಮಹಿಳೆಯರಿಗೆ ನೆರವಾಗಿದ್ದಾರೆ.
ಸಮಗ್ರ ಕೃಷಿ ಪದ್ಧತಿಯಲ್ಲಿ ಸಾವಯವ ಕೃಷಿ ಅಳವಡಿಸುವ ನಿಟ್ಟಿನಲ್ಲಿ ಎರೆಗೊಬ್ಬರ, ಎರೆಜಲ, ಕೃಷಿ ತ್ಯಾಜ್ಯಗಳ ಸಮರ್ಪಕ ಬಳಕೆಯಿಂದ ಸಾಗುವಳಿ ವೆಚ್ಚ ಕಡಿಮೆ ಮಾಡುತ್ತಾ ಗುಣಮಟ್ಟದ ಉತ್ಪಾದನೆ, ಸಮಗ್ರ ಪೀಡೆ ನಿರ್ವಹಣೆ ಕ್ರಮದಿಂದ ಕೀಟಗಳ ಹತೋಟಿ, ದೇಶಿಯ ಭತ್ತದ ತಳಿಗಳ ಅಭಿವೃಧ್ಧಿ, ಅಡಿಕೆ, ತೆಂಗು ಸಾಗುವಳಿಯಿಂದ ಅಧಿಕ ಲಾಭ, ಅಜೋಲ ಉತ್ಪಾದನೆ ಹಾಗೂ ಮೇವಿನ ಆಹಾರವಾಗಿ ಉಪಯೋಗಿಸುತ್ತಿರುವ ಇವರ ಸಾಧನೆಗಳನ್ನು ಪರಿಗಣಿಸಿ, ಸಮಗ್ರ ಕೃಷಿ ಪದ್ಧತಿ ಮತ್ತು ಬೆಳೆಗಳ ವೈವಿದ್ದೀಕರಣ ವಿಭಾಗದಲ್ಲಿ ಕೃಷಿ ಪಂಡಿತ ಪ್ರಶಸ್ತಿಗೆ 2008-09ನೇ ಸಾಲಿಗೆ ಶ್ರೀಮತಿ ಸರೋಜಮ್ಮ ಹಾಗೂ ಶ್ರೀ ನಾಗೇಂದ್ರಪ್ಪ ಪಾಟೀಲ ಸತಿ ಪತಿಗಳಿಬ್ಬರೂ ಭಾಜನರಾಗಿದ್ದಾರೆ.
2010-11ನೇ ಸಾಲಿನಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ, ಬೆಂಗಳೂರು ಇವರು ದವಸ ಧಾನ್ಯಗಳ ಬೆಳೆ ವಿಭಾಗದಲ್ಲಿ ಕೊಡಮಾಡುವ ಕೃಷಿ ಜೀವವೈವಿಧ್ಯ ಪ್ರಶಸ್ತಿಯನ್ನು ಸರೋಜ ಪಾಟೀಲರಿಗೆ ನೀಡಲಾಗಿದೆ.
ಮಹೀಂದ್ರ ಅಂಡ್‌ ಮಹೀಂದ್ರ ಕಂಪನಿ ಕೊಡುವ ಕೃಷಿ ಪ್ರೇರಣಾ ಸಮ್ಮಾನ್ ಕೃಷಿ ಪ್ರಶಸ್ತಿಯನ್ನು  ರೀಜನಲ್ ಅವಾರ್ಡ್‌ ವಿನ್ನರ್ ಆಫ್ ಸೌತ್ ಇಂಡಿಯಾ ವಿಭಾಗದಲ್ಲಿ ಪ್ರಶಸ್ತಿಯನ್ನು  ಸಂಸ್ಥೆಯ  ಅಧ್ಯಕ್ಷ ಆನಂದ ಮಹೀಂದ್ರ ಅವರಿಂದ 2013ರಲ್ಲಿ ನವದೆಹಲಿಯಲ್ಲಿ ಪಡೆದರು.
2017ರಲ್ಲಿ ಸಿರಿಧಾನ್ಯ ಎನರ್ಜಿ ಮಿಕ್ಸ್ ಹಾಗೂ ರೊಟ್ಟಿ ಚಟ್ನಿ ಪುಡಿಗಳಿಂದ ಪ್ರಾರಂಭವಾದ ಇವರ ಮೌಲ್ಯವರ್ಧಿತ ಆಹಾರಗಳ ತಯಾರಿಕೆ ಮೊದಲು  ಮಾರಾಟವಾಗಿದ್ದು ಧರ್ಮಸ್ಥಳ ಲಕ್ಷ ದೀಪೋತ್ಸವದಲ್ಲಿ, ಅಲ್ಲಿ 25 ಸಾವಿರ ರೂಪಾಯಿಗಳ ಮಾರಾಟದಿಂದ ಪ್ರೇರಣೆ ಹೊಂದಿ ಈಗ ಹಂತ ಹಂತವಾಗಿ 17 ತದ್ವನಂ Brand ನಡಿ ವಿವಿಧ ಸಾವಯವ ಆಹಾರ ಉತ್ಪನ್ನಗಳು  ದೆಹಲಿ, ಮುಂಬಯಿ, ಹೈದ್ರಾಬಾದ್, ಚೆನ್ನೈ, ಬೆಂಗಳೂರು ಹಾಗೂ ಇತರೆ ಪ್ರಮುಖ ನಗರಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇವರ ತದ್ವನಂ ಸಾವಯವ ಆಹಾರ ಉತ್ಪನ್ನಗಳು ಹೀಗಿವೆ
ಎನರ್ಜಿ ಮಿಕ್ಸ್ (32 ಪದಾರ್ಥಗಳಿಂದ ತಯಾರಿಸಿದ್ದು), ಮಸಾಲ ಪುಡಿ, ಲಡ್ಡು (ಡ್ರೈ ಪ್ರುಟ್ಸ್), ರಾಗಿ ಮಾಲದಿ, ರಾಗಿ ಶಾವಿಗೆ, ಅಕ್ಕಿ ಶಾವಿಗೆ, ಗೋಧಿ ಶಾವಿಗೆ, ನವಣೆ ಬಿಸಿ ಬೇಳೆ ಬಾತ್ (ಸಿದ್ದ ಮಿಶ್ರಣ ಆಹಾರ), ರವಾ ಇಡ್ಲಿ (ಸಿದ್ದ ಮಿಶ್ರಣ ಆಹಾರ), ಅವಲಕ್ಕಿ ಮಿಕ್ಷರ್ , ಶೇಂಗಾ ಚಟ್ನಿ ಪುಡಿ, ಅಗಸೆ ಚಟ್ನಿ ಪುಡಿ, ಗುರೆಳ್ಳು ಚಟ್ನಿ ಪುಡಿ, ಶುಂಠಿ ಚಟ್ನಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಸಿರಿಧಾನ್ಯ ಹಪ್ಪಳ ಇವುಗಳು ವಿವಿಧ ತೂಕದ ಪ್ಯಾಕಿಂಗ್‍ಗಳಲ್ಲಿ ದೊರೆಯುತ್ತವೆ.
ಇವರ ಪತಿ ನಾಗೇಂದ್ರಪ್ಪ ಪಾಟೀಲ್ ಮಕ್ಕಳಾದ ಹರ್ಷ, ದರ್ಶನ್, ಪವನ್ ಹಾಗೂ ಸೊಸೆ ರಜನಿ, ಶಿಲ್ಪ, ನಂದಿನಿ ಹಾಗೂ ತಮ್ಮ ಗ್ರಾಮದ ಎಂಟು ಜನ ಸ್ನೇಹಿತರ   ಸಹಕಾರ ಹಾಗೂ ಪ್ರೋತ್ಸಾಹದಿಂದ 2017 ರಲ್ಲಿ 25 ಸಾವಿರ ಬಂಡವಾಳ ದಿಂದ ಆರಂಭಿಸಿ, ಆಗ 30 ಸಾವಿರ ಲಾಭ ಗಳಿಸಿದ ಇವರು 2018 ರಲ್ಲಿ 75 ಸಾವಿರ ಲಾಭ ಪಡೆಯುತ್ತಾರೆ. ಹೀಗೆಯೇ ಪ್ರಸಕ್ತ ವರ್ಷದಲ್ಲಿ ಪ್ರತಿ ತಿಂಗಳಿಗೆ 15 ಸಾವಿರ ಗಳಿಸಿದ ಇವರು ಸ್ವಾವಲಂಬಿತನದಿಂದ ದುಡಿದು ಆ ಮೂಲಕ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಿರುವ ಶ್ರೀಮತಿ ಸರೋಜ ಪಾಟೀಲ್ ದಂಪತಿ ಹಾಗೂ ಕುಟುಂಬ ಅಭಿನಂದನಾರ್ಹರು.


ಸಿರಿ ಧಾನ್ಯ ಸವಿ ರುಚಿಯ ಮಾದರಿ ಮಹಿಳೆ... - Janathavaniಬಿ.ವಿ. ಸುಧಾ
ಕೃಷಿ ಅಧಿಕಾರಿ, ದಾವಣಗೆರೆ.

error: Content is protected !!