ಅಕ್ರಮ ಲೇಔಟ್ ನಿರ್ಮಿಸಲು ಅವಕಾಶವಿಲ್ಲ

ದೂಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ದೇವರಮನಿ ಶಿವಕುಮಾರ್

ದಾವಣಗೆರೆ, ಆ.26- ದಾವಣಗೆರೆ-ಹರಿಹರ ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಲೇಔಟ್ ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದು ದೂಡಾ ನೂತನ ಅಧ್ಯಕ್ಷ ದೇವರಮನಿ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ದೂಡಾ ಕಚೇರಿ ಸಭಾಂಗಣದಲ್ಲಿ ಇಂದು ಮಧ್ಯಾಹ್ನ ದೂಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಯಾರೂ ಕೂಡ ಅಕ್ರಮ ಲೇಔಟ್‌ಗಳನ್ನು  ನಿರ್ಮಿಸಬಾರದು. ದೂಡಾಕ್ಕೆ ಅರ್ಜಿ ಸಲ್ಲಿಸಿ, ಕಾನೂನು ಪ್ರಕಾರ ಬಡಾವಣೆ ನಿರ್ಮಿಸಿ, ಅಭಿವೃದ್ಧಿ ಪಡಿಸಿದ ನಂತರವೇ ನಿವೇಶನ ಹಂಚಿಕೆ ಮಾಡುವಂತೆ ರಿಯಲ್ ಎಸ್ಟೇಟ್ ಉದ್ದಿಮೆದಾರರಲ್ಲಿ ಮನವಿ ಮಾಡಿದರು.

ದಾವಣಗೆರೆ – ಹರಿಹರ ನಗರಗಳ ವ್ಯಾಪ್ತಿಯಲ್ಲಿ ಪ್ರಾಧಿಕಾರದಿಂದ ಸುಂದರ ಬಡಾವಣೆ ನಿರ್ಮಿಸಿ, ಬಡವರಿಗೆ ಕೈಗೆಟಕುವ ದರದಲ್ಲಿ ನಿವೇಶನ ನೀಡಬೇಕೆಂಬುದೇ ನಮ್ಮ ಮೂಲ ಉದ್ದೇಶವಾಗಿದೆ. ಇದಕ್ಕಾಗಿ ಈಗಾ ಗಲೇ 51 ಎಕರೆ ಜಮೀನನ್ನು ಗುರುತಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದ್ದು, ಬಡಾವಣೆ ನಿರ್ಮಿಸಲು ತಯಾರಿ ಕೂಡ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಬಿದ್ದಲ್ಲಿ ಸೂಕ್ತ ಜಮೀನು ಸ್ವಾಧೀನಕ್ಕೆ ಮುಂದಾಗು ವುದಾಗಿ ತಿಳಿಸಿದ ಅವರು, ಕೆಲವೇ ತಿಂಗಳು ಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಪ್ರಯತ್ನ ಮಾಡಲಾಗುವುದು ಎಂದರು.

ರಾಜನಹಳ್ಳಿ ಶಿವಕುಮಾರ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ತಮ್ಮ ಅವಧಿಯಲ್ಲೂ ಸಹ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುವ ಭರವಸೆಯನ್ನು  ಶಿವಕುಮಾರ್ ನೀಡಿದರು.

error: Content is protected !!