ಮಾಜಿ ಶಾಸಕ ಶಾಂತನಗೌಡ ಖಂಡನೆ
ಹೊನ್ನಾಳಿ, ಆ.23 – ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕುಗಳಿಗೆ ಕಾರ್ಮಿಕ ಇಲಾಖೆ ಯಿಂದ 13 ಸಾವಿರ ಆಹಾರದ ಕಿಟ್ಗಳು ಬಂದಿದ್ದು, ಒಂದು ತಿಂಗಳಾದರು ಅರ್ಹ ಫಲಾನು ಭವಿಗಳಿಗೆ ಹಂಚಿಕೆ ಮಾಡುವಲ್ಲಿ ಇಲಾಖೆಯು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಆರೋಪಿಸಿದ್ದಾರೆ.
ಎಪಿಎಂಸಿ ಆವರಣದಲ್ಲಿರುವ ಖಾಸಗಿ ಗೋಡೌನ್ ನಲ್ಲಿರುವ ಕಿಟ್ಗಳ ತಪಾಸಣೆ ನಡೆಸಿ ಪತ್ರಕರ್ತರನ್ನು ಉದೇಶಿಸಿ ಮಾತನಾಡಿದರು.
ಕಳೆದ ಕೆಲ ದಿನಗಳ ಹಿಂದೆ ನ್ಯಾಮತಿ ತಾಲ್ಲೂಕಿನಲ್ಲಿ ಸಭೆ ನಡೆಸಿ ಸುಮಾರು 3 ಸಾವಿರ ಕಿಟ್ ಹಂಚಿಕೆ ಮಾಡಿದ್ದೇವೆ ಎನ್ನುವ ಅಧಿಕಾರಿಗಳು ಉಳಿದ 9 ಸಾವಿರ ಕಿಟ್ಗಳು ಗೋಡೌನ್ನಲ್ಲಿರುವ ಬಗ್ಗೆ ಅನುಮಾನವಿದೆ ಎಂದರು.
ತಾಲ್ಲೂಕು ಕಾರ್ಮಿಕ ಇಲಾಖೆ ನಿರೀಕ್ಷಕ ರಾಜಶೇಖರ ರವರನ್ನು ಸ್ಥಳಕ್ಕೆ ಕರೆಸಿ ಕಿಟ್ ಹಂಚಿಕೆಯ ವಿಳಂಬದ ಬಗ್ಗೆ ಚರ್ಚಿಸಿದರು.
ಗೋಡೌನ್ ಎಪಿಎಂಸಿ ಆವರಣದಲ್ಲಿದ್ದರು ಕಿಟ್ಗಳ ಸಂಗ್ರಹಿಸಿರುವುದು ಪ್ರವೀಣ್ ಟ್ರೇಡರ್ಸ್ ಎಂಬ ಖಾಸಗಿ ಗೋಡೌನ್ ಆಗಿದ್ದು, ಯಾವುದೇ ಅಗ್ರಿಮೆಂಟ್ ಮಾಡಿಕೊಳ್ಳದೆ ಕಿಟ್ ಸಂಗ್ರಹಿಸುತ್ತಿರುವುದು ಕಾನೂನು ಬಾಹಿರವಾಗಿದೆ.
ಕಾರ್ಮಿಕ ಅಧಿಕಾರಿಯು ಇದೀಗ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡುತ್ತಿವೆ. 3 ಸಾವಿರ ನ್ಯಾಮತಿಯಲ್ಲಿ ಹಂಚಿಕೆ ಗೊಂಡಿದ್ದು ಹೊನ್ನಾಳಿ ತಾಲ್ಲೂಕಿಗೆ ಹಂಚಿಕೆಯ ಕಾರ್ಯ ಉಳಿದಿದೆ. ಅರ್ಹ ಫಲಾನುಭವಿಗಳನ್ನು ಹೊರತುಪಡಿಸಿ ಯಾರಿಗೂ ಅಕ್ರಮವಾಗಿ ಹಂಚಿಕೆ ಮಾಡಿಲ್ಲ ಎಂದರು.
ನಂತರ ತಹಶೀಲ್ದಾರ್ ಕಛೇರಿಗೆ ತೆರಳಿದ ಶಾಂತನಗೌಡರು ಸಮಗ್ರ ತನಿಖೆ ನಡೆಸುವಂತೆ ತಹಶೀಲ್ದಾರ್ ಬಸನಗೌಡ ಕೋಟೂರ ಗಮನಕ್ಕೆ ತಂದು ಚರ್ಚಿಸಿ ಈ ಹಂಚಿಕೆಯಲ್ಲಿ ಕರ್ತವ್ಯ ಲೋಪವಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಷಯವನ್ನು ಜಿಲ್ಲಾಧಿಕಾರಿಗಳು ಹಾಗು ಕಾರ್ಮಿಕ ಸಚಿವ ಹೆಬ್ಬರ್ ಅವರ ಗಮನಕ್ಕೆ ತರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದುಗೇಶ್, ಎಪಿಎಂಸಿ ಸದಸ್ಯ ಪ್ರಕಾಶ್, ಕಾಂಗೆಸ್ ಮುಖಂಡರಾದ ಅರಾಕ್ ಸಿದ್ದಪ್ಪ, ರಮೇಶ್, ಪಿಎಲ್ಡಿ ಬ್ಯಾಂಕ್ ಸದಸ್ಯ ಕುಳಗಟ್ಟೆ ಹನುಮಂತ, ಹರಳಹಳ್ಳಿ ಈಶ್ವರಪ್ಪ, ಯುವ ಕಾಂಗ್ರೆಸ್ ಪ್ರಶಾಂತ್, ಮಧುಗೌಡ ಅರಕೆರೆ, ಶಿವರಾಜ್, ಕರೇ ಗೌಡ್ರು ಇದ್ದರು.