ನಗರದ ಅಭಿವೃದ್ಧಿಯೇ ಬಿಜೆಪಿ ಮಂತ್ರ : ಸಿದ್ದೇಶ್ವರ

ದಾವಣಗೆರೆ, ಮಾ.26- ಪಾಲಿಕೆ ಉಪ ಚುನಾವಣೆ ಪ್ರಯುಕ್ತ 20ನೇ ವಾರ್ಡ್ ಭಾರತ್ ಕಾಲೋನಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ರೇಣುಕಾ ಕೃಷ್ಣ ರವರ ಪರವಾಗಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಸ್ಥಳೀಯ ಮುಖಂಡರೊಂದಿಗೆ ಬಿರುಸಿನ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಈ ಎರಡೂ ವಾರ್ಡ್‍ಗಳಲ್ಲಿ ಬಿಜೆಪಿ ಅತ್ಯಧಿಕ ಮತಗಳಿಂದ ಜಯಗಳಿಸುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ನಗರದ ಸ್ವಚ್ಚತೆ ಹಾಗೂ ಸುಗಮ ಆಡಳಿತ ಬಿ.ಜೆ.ಪಿ. ಪಕ್ಷದ ಮೂಲಮಂತ್ರವಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ನಗರವು ಇತ್ತೀಚಿಗೆ ಕೇಂದ್ರ ನಗರಾಭಿವೃದ್ದಿ ಇಲಾಖೆ ನಡೆಸಿದ ಸರ್ವೆಯಲ್ಲಿ ಇಡೀ ದೇಶದಲ್ಲಿಯೇ ವಾಸ ಮಾಡಲು ಹಿತಕರವಾದ ನಗರ ಎನ್ನುವ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಪಾಲಿಕೆಯಲ್ಲಿ ಆಡಳಿತದಲ್ಲಿರುವ ಭಾರತೀಯ ಜನತಾ ಪಾರ್ಟಿ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ದಾವಣಗೆರೆ ಮಹಾನಗರ ಪಾಲಿಕೆಯ 20 ನೇ ವಾರ್ಡಿನ ಉಪಚುನಾವಣೆಯ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ದಾವಣಗೆರೆ ನಗರಕ್ಕೆ ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ 1000 ಕೋಟಿ, ದಿನದ 24 ಗಂಟೆಯೂ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡಲು ಜಲಸಿರಿ ಯೋಜನೆಯಡಿ 629 ಕೋಟಿ ಅನುದಾನದಲ್ಲಿ ಕಾಮಗಾರಿಗಳು ಭರದಿಂದ ಸಾಗಿವೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಸಾರ್ವಜನಿಕ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಜಗಳೂರು ರಸ್ತೆಯ ಬಸ್ ನಿಲ್ದಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಇಡೀ ನಗರಕ್ಕೆ ಕಳಸವಿಟ್ಟಂತೆ 20 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ರೈಲ್ವೆ ನಿಲ್ದಾಣ ಲೋಕಾರ್ಪಣೆಗೆ ಸಿದ್ದವಾಗಿದೆ. ಈ ಎಲ್ಲಾ ಯೋಜನೆಗಳು ಅನುಷ್ಟಾನಗೊಳ್ಳಲು ನಮ್ಮಲ್ಲಿರುವ ಇಚ್ಚಾಶಕ್ತಿ ಹಾಗೂ ಬದ್ದತೆ ಕಾರಣವಾಗಿದೆ, ಅಭಿವೃದ್ದಿಯನ್ನೇ ಮೂಲಮಂತ್ರವನ್ನಾಗಿಸಿಕೊಂಡಿರುವ ಬಿ.ಜೆ.ಪಿಗೆ ತಾವುಗಳು ಆಶೀರ್ವಾದ ಮಾಡಿದರೆ ಮಹಾನಗರ ಪಾಲಿಕೆ ಇನ್ನಷ್ಟು ಸುಭದ್ರವಾಗಲಿದೆ ಎಂದರು.

 ನಗರಕ್ಕೆ ಮುಖ್ಯಮಂತ್ರಿಗಳು 125 ಕೋಟಿ  ರೂ. ಅನುದಾನ ನೀಡಿದ್ದು ಇನ್ನು ಕೆಲವೇ ದಿನಗಳಲ್ಲಿ ಟೆಂಡರ್ ಕರೆದು ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು. ದಾವಣಗೆರೆ ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದಲೂ ಕೂಡ ದಾವಣಗೆರೆ ನಗರದ ಅಭಿವೃದ್ದಿಗೆ ನೀಲನಕ್ಷೆ ತಯಾರಿಸಲಾಗಿದ್ದು ದಾವಣಗೆರೆ ನಗರದ ಸುತ್ತ ಇರುವ ಕೆರೆಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಾಧಿಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ  ವೀರೇಶ್ ಹನಗವಾಡಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್, ಪಾಲಿಕೆ ಮೇಯರ್ ಎಸ್.ಟಿ.ವೀರೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವ ಕುಮಾರ್, ಅಭ್ಯರ್ಥಿ ಶ್ರೀಮತಿ ರೇಣುಕಾ ಕೃಷ್ಣ,  ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಲ್.ಡಿ.ಗೋಣೆಪ್ಪ, ದೂಡಾ ಸದಸ್ಯೆ ಶ್ರೀಮತಿ ದೇವೀರಮ್ಮ ರಾಮಚಂದ್ರಪ್ಪ, ಪಾಲಿಕೆ ಸದಸ್ಯ ಆರ್.ಎಲ್. ಶಿವಪ್ರಕಾಶ್ ಇತರರು ಉಪಸ್ಥಿತರಿದ್ದರು.

error: Content is protected !!