ಕ್ಷಯ: ಆತಂಕ ತೊರೆದು ಜಾಗೃತರಾಗಿರಿ

ಜಗಳೂರು: ವಿಶ್ವ ಕ್ಷಯ ದಿನಾಚರಣೆಯಲ್ಲಿ ಟಿಹೆಚ್ಒ ನಾಗರಾಜ್‌

ಜಗಳೂರು, ಮಾ.25- ಕ್ಷಯ ರೋಗದ ಆಂತಕ ತೊರೆದು ಜಾಗೃತರಾಗುವ ಮೂಲಕ ಕ್ಷಯ ಮುಕ್ತ ದೇಶವನ್ನಾಗಿಸಲು ನಾವೆಲ್ಲರೂ ಕೈ ಜೋಡಿಸೋಣ ಎಂದು ತಾಲ್ಲೂಕು ವೈದ್ಯಾಧಿ ಕಾರಿ ಡಾ. ನಾಗರಾಜ್  ಸಲಹೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ, ಕುಷ್ಠ ರೋಗ ನಿಯಂ ತ್ರಣ ಘಟಕ ದಾವಣಗೆರೆ ಹಾಗೂ ತಾಲ್ಲೂಕು ಪಂಚಾಯ್ತಿ, ತಾಲ್ಲೂಕು ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗಗಳಲ್ಲಿ ಪ್ರತಿನಿತ್ಯ ಕುಟುಂಬಗಳಲ್ಲಿನ  ಜನ ಸಂಪರ್ಕದಲ್ಲಿದ್ದು  ಕ್ಷಯ ರೋಗಿಗಳನ್ನು ಗುರುತಿಸಿ ತಪಾಸಣೆಗೆ ಆಸ್ಪತ್ರೆಗೆ ಕರೆದುಕೊಂಡು ಬರಬೇಕಿದೆ. ತಾಲ್ಲೂಕಿನಲ್ಲಿ 2020 ನೇ ಸಾಲಿನಲ್ಲಿ 166 ಕ್ಷಯ ಪ್ರಕರಣಗಳಲ್ಲಿ 105 ಜನ ಗುಣಮುಖರಾಗಿದ್ದು, ಇಬ್ಬರು ಮರಣ ಹೊಂದಿದ್ದಾರೆ. 34 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.   ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶಗಳ ಪೂರೈಕೆಗೆ ಪಿಎನ್‌ವೈ ಯೋಜನೆಯಡಿ ಮಾಸಿಕ  ತಲಾ 500  ರೂ. ಸಹಾಯ ಧನ ಹಾಗೂ 6 ತಿಂಗಳ ಕಾಲ ಉಚಿತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗಿದೆ. ರೋಗಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಡಾ.ಸಂಪತ್ ಮಾತನಾಡಿ, ಕೆಮ್ಮು, ಶೀತದ ಮೂಲಕ ಸೋಂಕು ಹರಡುವ ಸಂಭವವಿರುತ್ತದೆ. ಸಂಜೆ ವೇಳೆ ಜ್ವರ, ಕೆಮ್ಮುವಾಗ ರಕ್ತಸ್ರಾವ, ನಿಶ್ಯಕ್ತಿ‌ ಪ್ರಮುಖ ಲಕ್ಷಣಗಳಾಗಿದ್ದು, ಹೆಚ್‌ಐವಿ ಮತ್ತು ಸಕ್ಕರೆ ಕಾಯಿಲೆ ರೋಗಿಗಳಲ್ಲಿ ಹೆಚ್ಚು ಕಂಡು ಬರುವ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು. ಕ್ಷಯ ರೋಗಿಗಳು ಕೋವಿಡ್ ಲಸಿಕೆ ಪಡೆಯಲು ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ. ಭಯ ಸಲ್ಲದು ಎಂದರು.

ಸಮಾರಂಭದಲ್ಲಿ ಕ್ಷಯ ರೋಗದಿಂದ ಗುಣಮುಖರಾದವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ   ತಹಶೀಲ್ದಾರ್ ಡಾ. ನಾಗವೇಣಿ, ತಾ.ಪಂ. ಇಓ ಮಲ್ಲಾನಾಯ್ಕ, ಬಿಇಓ ವೆಂಕಟೇಶ್, ನೌಕರರ ಸಂಘದ ಅಧ್ಯಕ್ಷ ಅಜ್ಜಪ್ಪ ನಾಡಿಗರ್, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಸಿದ್ದೇಶ್  ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

error: Content is protected !!