ಗೋದಾಮಿಗೆ ಧಾನ್ಯ ತುಂಬಿ ಲಾಭಕೋರತನ

ನಗರಕ್ಕೆ ಭೇಟಿ ನೀಡಿದ್ದ ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಆಕ್ರೋಶ

ದಾವಣಗೆರೆ, ಮಾ. 21 – ಬಂಡವಾಳಶಾಹಿಗಳು ಧಾನ್ಯವನ್ನು ಕಡಿಮೆ ಬೆಲೆಗೆ ಖರೀದಿಸಿ, ದೊಡ್ಡ ದೊಡ್ಡ ಗೋದಾಮುಗಳಲ್ಲಿ ಧಾನ್ಯಗಳನ್ನು ತುಂಬಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ದೆಹಲಿಯಲ್ಲಿ ಹೋರಾಟ ಮುನ್ನಡೆಸುತ್ತಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ರೈತರ ಮಹಾ ಪಂಚಾಯತ್‌ಗಳನ್ನು ನಡೆಸಲು ಆಗಮಿಸಿದ ವೇಳೆ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವಯೋಗ ಮಂದಿರದಲ್ಲಿ ಆಯೋಜಿಸಿದ್ದ ಸಭೆ ಯಲ್ಲಿ ಅವರು ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರದ ಕಾಯ್ದೆಯಿಂದ ಬಂಡವಾಳಶಾಹಿಗಳು ದೊಡ್ಡ ಗೋದಾಮುಗಳಲ್ಲಿ ಧಾನ್ಯವನ್ನು ಲಾಭಕ್ಕಾಗಿ ತುಂಬಿಕೊಳ್ಳಲು ದಾರಿ ಮಾಡಿಕೊಡಲಾಗುತ್ತದೆ. ಹೀಗಾದರೆ ಸಣ್ಣ ಅಂಗಡಿಯವರು ಎಲ್ಲಿಗೆ ಹೋಗಬೇಕು? ಇಂತಹ ಪ್ರಯತ್ನದ ವಿರುದ್ಧದ ಹೋರಾಟ ಸುದೀರ್ಘ ವಾಗಿರಲಿದೆ ಎಂದವರು ತಿಳಿಸಿದರು.

ದೆಹಲಿಯಲ್ಲಿ ರೈತರು ಹೋರಾಟ ನಡೆಸುತ್ತಿರುವ ಮಾದರಿಯಲ್ಲೇ, ಬೆಂಗಳೂರನ್ನೂ ನಾಲ್ಕೂ ದಿಕ್ಕುಗಳಿಂದ ಸುತ್ತುವರೆಯಬೇಕು. ಇದು ಬದುಕಿ ಗಾಗಿ ನಡೆಸುತ್ತಿರುವ ಹೋರಾಟ. ಹೀಗಾಗಿ ಜಾತಿ – ಧರ್ಮಗಳು, ಚಿಕ್ಕ ವರು – ದೊಡ್ಡವರೆಂಬ ಭೇದಗಳನ್ನು ಬಿಟ್ಟು ಸಾಗಬೇಕು ಎಂದವರು ಹೇಳಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆ ಹಾಗೂ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಅವರ ವಿಚಾರಧಾರೆಗಳು ನಮ್ಮ ಜೊತೆ ಇವೆ. ಎಲ್ಲರನ್ನೂ ಜೊತೆಗೂಡಿಸಿಕೊಂಡು ಒಂದೇ ದನಿಯಿಂದ ಮುಂದೆ ಸಾಗಬೇಕಿದೆ ಎಂದು ಟಿಕಾಯತ್ ಹೇಳಿದರು.

ಕೇಂದ್ರ ಸರ್ಕಾರ ಯುವಕರಿಗೆ ಉದ್ಯೋಗ ಒದಗಿಸಿಲ್ಲ, ರೈತರು ಹಾಗೂ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಸಂದರ್ಭದಲ್ಲಿ ಹಳ್ಳಿಗಳನ್ನು, ದೇಶವನ್ನು ಹಾಗೂ ಸಂವಿಧಾನವನ್ನು ಉಳಿಸಲು ಈ ಆಂದೋಲನ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಕೇಂದ್ರದ ಮೂರು ಹಾಗೂ ರಾಜ್ಯದ ಎರಡು ಕರಾಳ ಕಾಯ್ದೆಗಳ ವಿರುದ್ಧ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದೆ. ರೈತ – ಕಾರ್ಮಿಕರು ಹಾಗೂ ಲೂಟಿಕೋರ ವರ್ಗದ ನಡುವಿನ ಸಂಘರ್ಷ ಇದಾಗಿದೆ ಎಂದರು.

ಶೋಷಣೆ ಮಾಡುತ್ತಿರುವವರನ್ನು ಬಂಡವಾಳಶಾಹಿ ಎನ್ನುವ ಬದಲು ಲೂಟಿಕೋರರು ಎಂದು ಕರೆಯಬೇಕು. ಅವರ ಕೈಗೆ ಕೃಷಿ ಕೊಡಬಾರದು. ಹೋರಾಟ ಮಾಡದಿದ್ದರೆ ದೇಶ ಉಳಿಸುವುದು ಕಷ್ಟ ಎಂದು ಎಚ್ಚರಿಸಿದರು.

ಕಾರ್ಮಿಕ ಮುಖಂಡರಾದ ಹೆಚ್.ಕೆ. ರಾಮಚಂದ್ರಪ್ಪ ಮಾತನಾಡಿ, ರೈತರನ್ನು ತುಳಿಯುತ್ತಿರುವ ಸರ್ಕಾರದ ವಿರುದ್ಧ ದನಿ ಎತ್ತಲಾಗಿದೆ. 2024ರವರೆಗೆ ರೈತರ ಹೋರಾಟ ನಡೆಯುತ್ತದೆ. ಜನ ಜಾಗೃತಿಯಾದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಥೆ ಮುಗಿಯುತ್ತದೆ ಎಂದರು.

ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲೂ ರೈತರ ಮಹಾಪಂಚಾಯತ್ ಮಾಡಬೇಕಿದೆ. ಮನುವಾದಿ ಸರ್ಕಾರವನ್ನು ಕಿತ್ತು ಹಾಕಿ ಜನಪರ ಸರ್ಕಾರ ತರಲು ಹೋರಾಟ ನಡೆಯಬೇಕಿದೆ ಎಂದರು.

ಇದಕ್ಕೂ ಮುಂಚೆ ಅಂಬೇಡ್ಕರ್ ವೃತ್ತಕ್ಕೆ ತೆರಳಿದ್ದ ಟಿಕಾಯತ್, ಅಲ್ಲಿ ಸಂವಿಧಾನ ಶಿಲ್ಪಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್, ವಿವಿಧ ಸಂಘಟನೆಗಳ ಮುಖಂಡರಾದ ಅನೀಸ್ ಪಾಷ, ಎಲ್.ಹೆಚ್. ಅರುಣ್ ಕುಮಾರ್, ಅರುಣ್ ಕುಮಾರ್ ಕುರುಡಿ, ಸತೀಶ್ ಕುಮಾರ್, ಡಾ. ವಸುಧೇಂದ್ರ, ಜಬೀನಾ ಖಾನಂ, ಆವರಗೆರೆ ವಾಸು, ಆವರಗೆರೆ ಚಂದ್ರು, ಹೊನ್ನೂರು ಮುನಿಯಪ್ಪ, ಸತೀಶ್ ಅರವಿಂದ, ಆದಿಲ್ ಕಾನ್, ಅಣಬೇರು ತಿಪ್ಪೇಸ್ವಾಮಿ, ರಾಮಚಂದ್ರ ಕಲಾಲ್, ಆವರಗೆರೆ ರುದ್ರಮುನಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!