ನವದೆಹಲಿ, ಮಾ. 19 – ಕೊರೊನಾ ವಿರುದ್ಧ ಹೋರಾಡಲು ಸಾರ್ವತ್ರಿಕವಾಗಿ ಎಲ್ಲರಿಗೂ ಲಸಿಕೆ ನೀಡಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಹೇಳಿದ್ದಾರೆ. ಲೋಕಸಭೆಯಲ್ಲಿ ಹೇಳಿಕೆ ನೀಡಿರುವ ಅವರು, ಲಸಿಕೆಗೆ ಸಂಬಂಧಿಸಿದಂತೆ ಸರ್ಕಾರ ರಾಷ್ಟ್ರೀಯ ಪರಿಣಿತರ ಸಮಿತಿ ಹಾಗೂ ಜಾಗತಿಕ ವೈಜ್ಞಾನಿಕ ಸಮುದಾಯವನ್ನು ಅನುಸರಿಸುತ್ತಿ ರುವುದಾಗಿ ತಿಳಿಸಿದ್ದಾರೆ.
ಸರ್ಕಾರ ಸಾರ್ವತ್ರಿಕವಾಗಿ ಎಲ್ಲರಿಗೂ ಲಸಿಕೆ ಕೊಡಲಿದೆಯೇ? ಎಂದು ಎನ್.ಸಿ.ಪಿ. ಸಂಸದೆ ಸುಪ್ರಿಯಾ ಸುಲೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ಪ್ರತಿಯೊಂದು ಲಸಿಕೆಯನ್ನೂ ಸಾರ್ವತ್ರಿಕವಾಗಿ ಎಲ್ಲರಿಗೂ ನೀಡಬೇಕಿಲ್ಲ. ಆದ್ಯತಾ ಗುಂಪುಗಳಿಗೆ ಲಸಿಕೆ ನೀಡಬೇಕಾಗುತ್ತದೆ. ಪರಿಣಿತರ ಅಭಿಪ್ರಾಯದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಭಾರತೀಯ ಪರಿಣಿತರಷ್ಟೇ ಅಲ್ಲದೇ ವಿಶ್ವ ಆರೋಗ್ಯ ಸಂಘಟನೆಯ ಮಾರ್ಗಸೂಚಿಯನ್ನು ಪರಿಗಣಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.