ಪೆಟ್ರೋಲ್, ಡೀಸೆಲ್‍ ಖರೀದಿಗೆ ಸಾಲ ಕೊಡಿ : ಯುವ ಕಾಂಗ್ರೆಸ್

ದಾವಣಗೆರೆ, ಜೂ.9- ಕೊರೊನಾದಿಂದಾಗಿ ಆರ್ಥಿಕ ಹಿಂಜರಿತ ಉಂಟಾಗಿದ್ದರೂ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದ್ದು, ಈ ನಿಟ್ಟಿನಲ್ಲಿ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕಿಸಲು ಲೋನ್ ನೀಡಬೇಕೆಂದು ಒತ್ತಾಯಿಸಿ ಭಾರತೀಯ ಯುವ ಕಾಂಗ್ರೆಸ್ ಸದಸ್ಯರು ನಗರದಲ್ಲಿ ನಿನ್ನೆ ಪ್ರತಿಭಟಿಸಿದ್ದಾರೆ.

ಮಂಡಿಪೇಟೆಯಲ್ಲಿರುವ ಕೆನರಾ ಬ್ಯಾಂಕ್, ಎಸ್‍ಬಿಐ, ಸಿಂಡಿಕೇಟ್ ಬ್ಯಾಂಕ್, ಆಕ್ಸಿಸ್‍ ಬ್ಯಾಂಕ್ ಸೇರಿದಂತೆ ಇತರೆ ಬ್ಯಾಂಕುಗಳಿಗೆ ತೆರಳಿ ಅಲ್ಲಿನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.

ದೇಶಾದ್ಯಂತ ಲಾಕ್‍ಡೌನ್ ಪರಿಸ್ಥಿತಿಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಇದರ ನಡುವೆ ಪೆಟ್ರೋಲ್ ಮತ್ತು ಡಿಸೇಲ್ ದರ ಗಗನಕ್ಕೇರಿದೆ. ಈ ನಿಟ್ಟಿನಲ್ಲಿ ವಾಹನಗಳಿಗೆ ಸಾಲ ಸೌಲಭ್ಯ ನೀಡುವ ರೀತಿಯಲ್ಲೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇಂಧನಕ್ಕಾಗಿ ಸಾಲ ನೀಡುವಂತೆ ಅನುಕೂಲವಾಗಲು ಅರ್ಜಿ ನೀಡುವಂತೆ ಆಗ್ರಹಿಸಲಾಯಿತು.

40-50 ಸಾವಿರದ ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರೆ ವಾಹನಗಳ ಖರೀದಿಗೆ ಸಾಲ ನೀಡಲಾಗುತ್ತದೆ. ಆದರೆ ಅದಕ್ಕೆ ಬೇಕಾಗಿರುವ ಪೆಟ್ರೋಲ್, ಡೀಸೆಲ್‍ಗೆ ದಿನಂಪ್ರತಿ 100 ರೂ.ಗಳಂತೆ ಒಬ್ಬ ವ್ಯಕ್ತಿಗೆ ವರ್ಷಕ್ಕೆ ಅಂದಾಜಿನ ಪ್ರಕಾರ 60 ಸಾವಿರ ರೂ ಇಂಧನ ತುಂಬಿಸಲು ಬೇಕಾಗುತ್ತದೆ.  ಕಾರಣ ಈ ಕೂಡಲೇ ದೇಶದ ಪ್ರಧಾನ ಮಂತ್ರಿ ಮೋದಿಯವರು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಆದೇಶ ಹೊರಡಿಸಿ, ಇಂಧನಕ್ಕಾಗಿಯೇ ಸಾಲ ನೀಡುವಂತೆ ಸೂಚಿಸಬೇಕೆಂದರು.

ಈ ವೇಳೆ ಯುವ ಕಾಂಗ್ರೆಸ್ಸಿನ ವಕ್ತಾರ ಹೆಚ್.ಜೆ. ಮೈನುದ್ದೀನ್, ಮೊಹಮ್ಮದ್ ಸಾಧಿಕ್, ಸದ್ದಾಂ, ಮಹಮ್ಮದ್ ವಾಜಿದ್, ಮಹಮ್ಮದ್ ರಫೀಕ್, ರಾಕೇಶ್, ಫಾರೂಕ್ ಶೇಕ್ ಇದ್ದರು.

error: Content is protected !!