ಜಿಲ್ಲಾ ಕಾಂಗ್ರೆಸ್ ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆ ಸಭೆಯಲ್ಲಿ ನಂದಾ ಮಾತ್ರ
ದಾವಣಗೆರೆ, ಮಾ.19- ಜಿಲ್ಲಾ ಕಾಂಗ್ರೆಸ್ ಕಛೇರಿಯ ಡಾ.ಶಾಮನೂರು ಶಿವಶಂಕರಪ್ಪ ಭವನದಲ್ಲಿ ರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಭೆಯು ಶುಕ್ರವಾರ ರಾಜ್ಯ ಉಸ್ತುವಾರಿ ಶ್ರೀಮತಿ ನಂದಾ ಮಾತ್ರ ಅವರ ನೇತೃತ್ವದಲ್ಲಿ ನಡೆಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ನಂದಾ ಮಾತ್ರ ಅವರು, ಈ ಹಿಂದೆ ಯುಪಿಎ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬೆಲೆಯೇರಿಕೆ ಕುರಿತು ಬಿಜೆಪಿ ಬೀದಿಗಿಳಿದು ಹೋರಾಟ ನಡೆಸುತ್ತಿತ್ತು. ಆದರೆ ಇಂದು ತನ್ನದೇ ಆಡಳಿತದಲ್ಲಿ ಜನಸಾಮಾನ್ಯರಿಗೆ ಕೈಗೆಟುಕದಂತಹ ಬೆಲೆಯೇರಿಕೆ ಯಾದರೂ ಸಹ ಬಿಜೆಪಿ ಪಕ್ಷ ಮೌನ ವಹಿಸಿರುವುದನ್ನು ಪ್ರಶ್ನಿಸಿದರು.
ಪ್ರಧಾನಿ ಮೋದಿ ಸಹಿತ ಬಿಜೆಪಿಯ ಪ್ರತಿಯೊಬ್ಬರೂ ಸ್ವಲ್ಪ ಪ್ರಮಾಣದಲ್ಲಿ ಬೆಲೆಯೇರಿಕೆಯಾದರೂ ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ ಆದರೆ ಇಂದು ಬೆಲೆಯೇರಿಕೆ ಎನ್ನುವುದು ಜನಸಾಮಾನ್ಯರಿಗೆ ಕೈಗೆಟುಕದಂತಾಗಿದ್ದು, ಬಿಜೆಪಿ ಪಕ್ಷದವರು ಆತ್ಮಾವಲೋಕನ ಮಾಡಿಕೊಂಡು ಆಡಳಿತ ನಡೆಸಲಿ ಎಂದು ಸಲಹೆ ನೀಡಿದರು.
ಸಂವಿಧಾನದಡಿ ಆಡಳಿತ ನಡೆಸಬೇಕಾದ ಬಿಜೆಪಿ ಕೆಲವೇ ಕೆಲವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಬಿಜೆಪಿ ವಿರುದ್ಧ ನಮ್ಮ ರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಪದಾಧಿಕಾರಿಗಳು ಹೋರಾಟ ನಡೆಸುವ ಜೊತೆಗೆ ಪ್ರತಿ ಗ್ರಾಮ ಪಂಚಾಯಿತಿಗೆ ಸರ್ಕಾರದ ಅನುಕೂಲಗಳನ್ನು ತಲುಪಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಬಿಜೆಪಿ ಸಲ್ಲದ ಯೋಜನೆಗಳನ್ನು ರೂಪಿಸುತ್ತಿದ್ದು, ಗೋಹತ್ಯೆ ನಿಷೇಧದ ಹೆಸರಿನಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ನಾಗರತ್ನಮ್ಮ, ಸಾಮಾಜಿಕ ಜಾಲತಾಣದ ಕೆ.ಎಲ್.ಹರೀಶ್ ಬಸಾಪುರ, ಸಂಘಟನೆಯ ಚನ್ನಗಿರಿ ಅಧ್ಯಕ್ಷ ರವಿಕುಮಾರ್, ಅರಸೀಕೆರೆ ಬಿಳಿಚೋಡು ಬ್ಲಾಕ್ ಅಧ್ಯಕ್ಷ ಮಾದಿಹಳ್ಳಿ ಗೋಣೇಶ್, ಮಲೇಬೆನ್ನೂರು ಬ್ಲಾಕ್ ಅಧ್ಯಕ್ಷ ಮಾರುತಿ, ರಾಮಪ್ಪ, ದಾದು , ಅಶೋಕ್ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಸ್ವಾಗತಿಸಿದರು. ಸಂಘಟನೆಯ ಜಿಲ್ಲಾ ಸಂಚಾಲಕ ರಾಘವೇಂದ್ರ ಗೌಡ ಕಾರ್ಯಕ್ರಮ ನಿರೂಪಿಸಿದರು.