ಪ್ರೊ|| ಬಿ.ಸಿದ್ದಲಿಂಗಯ್ಯ
ದಾವಣಗೆರೆ, ಮಾ.19 – ನಿರಂತರ ಅಧ್ಯಯನದಿಂದ ಕಠಿಣತೆಯನ್ನು ಸರಳೀಕರಣ ಗೊಳಿಸಿಕೊಂಡು, ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಹಾಗೂ ಅದರ ಸಾರ್ಥಕತೆಯ ಸದುಪಯೋಗಕ್ಕೆ ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಬೇಕೆಂದು ನಿವೃತ್ತ ಪ್ರಾಧ್ಯಾಪಕ ಪ್ರೊ|| ಬಿ. ಸಿದ್ಧಲಿಂಗಯ್ಯ ತಿಳಿಸಿದರು.
ಅವರಿಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾಮಂಡಳಿ, `ದಾವಣಗೆರೆ ವಿಜ್ಞಾನ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾ ಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ದಾವಣ ಗೆರೆ ಜಿಲ್ಲಾ ಮಟ್ಟದ ಗಣಿತ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ದರು. 60ರ ದಶಕಕ್ಕೆ ಹೋಲಿಸಿದರೆ ಇಂದು ತುಂಬಾ ಬದಲಾವಣೆ ಗಳಾಗಿವೆ. ಪ್ರಸ್ತುತ ದಿನ ಮಾನಗಳಲ್ಲಿ ಗಣಿತ ವಿಷಯ ಬೋಧಿಸುವ ಶಿಕ್ಷಕರು ಇಂದಿನ ತಾಂತ್ರಿಕ ಯುಗದ ಸವಾಲು ಗಳು ಮತ್ತು ಜವಾಬ್ದಾರಿಗಳನ್ನು ಹೊತ್ತು ಕಾರ್ಯ ನಿರ್ವಹಿಸಬೇಕಾಗಿದೆ. ಇಂತಹ ಕಾರ್ಯಾಗಾರಗಳ ಮೂಲಕ ತುಂಬಾ ಉಪಯುಕ್ತವಾದ ಮಾಹಿತಿಗಳನ್ನು ಪಡೆದು ಅದನ್ನು ತರಗತಿ ಕೋಣೆಗೆ ಹೋಗುವ ಮೊದಲು ಪುನರ್ ಮನನ ಮಾಡಿಕೊಂಡು ಸಿದ್ಧರಾಗಿ ಮಕ್ಕಳ ಮುಂದೆ ಮಂಡಿಸಲು ಶ್ರಮಿಸಬೇಕೆಂದು ಕೋರಿದರು.
ದಾವಣಗೆರೆ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ|| ವೈ.ವೃಷಭೇಂದ್ರಪ್ಪ ಮಾತನಾಡಿ, ಕರ್ನಾ ಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾ ಮಂಡಳಿ ಸಹಯೋಗದಲ್ಲಿ ನಡೆಯುತ್ತಿರುವ ಈ ಗಣಿತ ಕಾರ್ಯಾಗಾರವು ಇಂದಿನ ದಿನಮಾನ ಗಳಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದಿದೆ ಎಂದರು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಗಣಿತ ವಿಷಯ ಬಹುಮುಖ್ಯವಾಗಿದೆ. ಇಂದು ಎಲ್ಲಾ ಕ್ಷೇತ್ರ ಗಳಲ್ಲೂ ಗಣಿತ ವಿಷಯದ ಪ್ರಾಮುಖ್ಯತೆ ಇದ್ದು ಅತ್ಯುತ್ತಮ ಗಣಿತ ಶಿಕ್ಷಕರ ಅವಶ್ಯಕತೆ ದೇಶಕ್ಕಿದೆ. ಆದ್ದರಿಂದ ಎಲ್ಲಾ ಗಣಿತ ಶಿಕ್ಷಕರು ಹೊಸ ಅಧ್ಯಯ ನಗಳ ಮೂಲಕ ಗಣಿತದ ಸಮಸ್ಯೆಗಳನ್ನು ಸರಳೀ ಕರಿಸಿ, ಮಕ್ಕಳಿಗೆ ಬೋಧಿಸಲು ಕರೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಗಣಿತ ವಿಷಯವನ್ನು ವಿದ್ಯಾರ್ಥಿಗಳು ಕಬ್ಬಿಣದ ಕಡಲೆ ಎಂದು ಭಾವಿಸಿದ್ದಾರೆ. ಅದನ್ನು ಸರಳಗೊಳಿಸಿ ಮಕ್ಕಳಲ್ಲಿ ಗಣಿತದ ಕಲಿಕೆಯ ಆಸಕ್ತಿ ಮೂಡಿಸಲು ಇಂತಹ ಕಾರ್ಯಾಗಾರಗಳು ಸಹಾಯಕವಾಗಲಿವೆ ಎಂದರು. ಕೋವಿಡ್-19 ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿ ಗಳ ಜಿಲ್ಲೆಯ ಫಲಿತಾಂಶ ಸುಧಾರಿಸಲು ಅತ್ಯಂತ ಕಡಿಮೆ ಸಮಯದಲ್ಲಿ ಶಿಕ್ಷಕರನ್ನು ಸನ್ನದ್ಧಗೊಳಿಸಿ ಮಕ್ಕಳ ಫಲಿತಾಂಶವನ್ನು 100ಕ್ಕೆ 100ರಷ್ಟು ಸಾಧಿಸುವುದು ನಮಗೆ ಸವಾಲಿನ ಕೆಲಸವಾಗಿದೆ ಎಂದು ಹೇಳಿದರು. ಆದ್ದರಿಂದ ಎಲ್ಲಾ ಗಣಿತ ಶಿಕ್ಷಕರು ಇಂದಿನಿಂದಲೇ ಕಾರ್ಯೋನ್ಮುಖರಾಗಿ ನಮ್ಮ ಜಿಲ್ಲೆಯ ಫಲಿತಾಂಶವನ್ನು ಹೆಚ್ಚಿಸಲು ಶ್ರಮಿಸಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದರು.
ದಾವಣಗೆರೆಯಲ್ಲಿ ನಿರ್ಮಾಣವಾಗಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಜಿಲ್ಲಾಧಿ ಕಾರಿಗಳ ನೇತೃತ್ವದಲ್ಲಿ ಶೀಘ್ರದಲ್ಲೇ ಲೋಕಾರ್ಪ ಣೆಗೊಳಿಸ ಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಂಗಳೂರಿನ ವಿಜ್ಞಾನ ಮತ್ತು ತಂತ್ರ ವಿದ್ಯಾಮಂಡಳಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಪ್ರಿಯಾಂಕ ಮಾತನಾಡಿದರು.
ಕು|| ನಯನ ಪ್ರಾರ್ಥಿಸಿದರು. ಪ್ರಾಧ್ಯಾಪಕ ರಾದ ಅಶ್ವಿನಿ ಎಂ. ರಾವ್ ಸ್ವಾಗತಿಸಿದರು. ಜೆ.ಪದ್ಮನಾಭ್ ವಂದಿಸಿದರು. ಕರಾವಿಪ ಕಾರ್ಯ ದರ್ಶಿ ಎಂ. ಗುರುಸಿದ್ಧ ಸ್ವಾಮಿ ನಿರೂಪಿಸಿದರು.