ದಾವಣಗೆರೆ, ಆ.3- ಕಾರು ಬಹುಮಾನವಾಗಿ ಬಂದಿರುವುದಾಗಿ ನಂಬಿಸಿ ನಿವೃತ್ತ ನೌಕರರೋರ್ವರಿಗೆ ಲಕ್ಷಕ್ಕೂ ಅಧಿಕ ಹಣವನ್ನು ಆನ್ ಲೈನ್ ಮುಖಾಂತರ ವಂಚಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಎಪಿಎಂಸಿ ಯಾರ್ಡ್ ಕ್ವಾಟ್ರಸ್ನ ಗಣೇಶ್ ಪೂಜಾರ್ ವಂಚನೆಗೊಳಗಾದ ನಿವೃತ್ತ ನೌಕರ.
ಕಳೆದ ಏಪ್ರಿಲ್ 5, 2021 ರಂದು ಅಂಚೆ ಮೂಲಕ ನ್ಯಾಪ್ ಟಾಲ್ ಕಂಪನಿಯಿಂದ ಒಂದು ಕೂಪನ್ ಕಾರ್ಡ್ ಬಂದಿದ್ದು, ಅದರಲ್ಲಿ ಈ ಕಂಪನಿಯಿಂದ ಕಾರು ಬಹುಮಾನವಾಗಿ ಬಂದಿದೆ. ನಿಮಗೆ ಕಾರು ಬೇಡವಾದರೇ ಅದರ ಬದಲಿಗೆ 14.80 ಲಕ್ಷ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ತಿಳಿಸಲಾಗಿತ್ತು. ಅದರಲ್ಲಿದ್ದ ಮೊಬೈಲ್ ನಂಬರ್ಗೆ ಕರೆ ಮಾಡಿ ವಿಚಾರಿಸಿದಾಗ, ಅಪರಿಚಿತನು ಈ ಕಂಪನಿಯ ಅಧಿಕಾರಿ ಎಂದು ಹೇಳಿ ಕಾರು ಬಹುಮಾನವಾಗಿ ಬಂದಿದ್ದು, ಕಾರು ಬೇಕು ಎಂದರೇ ಕಂಪನಿಗೆ ಹಣ ಕಟ್ಟುವಂತೆ ನಂಬಿಸಿದನು. ಈತನ ಮಾತನ್ನೇ ನಂಬಿ ಮೊದಲಿಗೆ ಅಪರಿಚಿತ ತಿಳಿಸಿದಂತೆ ಹಂತ ಹಂತವಾಗಿ ಹಣ ಜಮೆ ಮಾಡಲಾಯಿತು.
ನಂತರ ಕರೆ ಮಾಡಿ ಬಹುಮಾನದ ಹಣವನ್ನು ನನ್ನ ಬ್ಯಾಂಕ್ ಖಾತೆಗೆ ಹಾಕಲು ಕೇಳಿದ್ದು, ಅದಕ್ಕೆ ಅವರು ಮ್ಯಾನೇಜರ್ ಗೆ ಕೇಳಿ ಹಣ ಹಾಕುವು ದಾಗಿ ನಂಬಿಸಿ ಪುನಃ ಹಣವನ್ನು ಹಾಕಿಸಿಕೊಂಡಿದ್ದು, ಈಗ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಕಾರು ಬಹುಮಾನದ ಆಸೆ ತೋರಿಸಿ 1,21,300 ರೂ. ವಂಚಿಸಿರುವುದಾಗಿ ಗಣೇಶ್ ಪೂಜಾರ್ ದೂರು ನೀಡಿದ್ದಾರೆ.