ದಾವಣಗೆರೆ, ಮಾ.16 – ಸ್ವಾತಂತ್ರ್ಯ ಲಭಿಸಿ 75 ವರ್ಷ ಸಂದ ಹಿನ್ನೆಲೆಯಲ್ಲಿ ‘ಆಜಾದಿ ಕಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಹೋತ್ಸವ ನಡೆಸಲು ಆಯ್ಕೆಯಾದ ರಾಜ್ಯದ 4 ಜಿಲ್ಲಾ ಪಂಚಾಯ್ತಿಗಳ ಪೈಕಿ ದಾವಣಗೆರೆ ಜಿ.ಪಂ. ಸಹ ಒಂದಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ವಿಜಯ ಮಹಾಂತೇಶ ಬಿ.ದಾನಮ್ಮನವರ ಹೇಳಿದರು.
ಮಂಗಳವಾರ ಕೆಡಿಪಿ ಸಭೆಗೂ ಮುನ್ನ ಆಯೋಜಿಸ ಲಾಗಿದ್ದ ಪೋಷಣ್ ಪಕ್ವಾಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
2019 ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ವಿಶೇಷ ಸಾಧನೆ ಆಧಾರದಲ್ಲಿ ದಾವಣಗೆರೆ ಜಿ.ಪಂ ಆಯ್ಕೆ ಮಾಡ ಲಾಗಿದ್ದು ಈ ಮಹೋತ್ಸವದ ಅಂಗವಾಗಿ ಗ್ರಾಮ ಪಂಚಾ ಯ್ತಿಗಳಲ್ಲಿ ಏನೆಲ್ಲ ಕಾರ್ಯಕ್ರಮಗಳನ್ನು ಮಾಡಬೇಕೆಂಬ ಯೋಜನೆ ರೂಪಿಸುತ್ತಿದ್ದೇವೆ ಎಂದರು.
ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಬೇಕಿದೆ. ಕುಡಿಯುವ ನೀರು, ಇಂಧನ ನವೀಕರಣ ಮತ್ತು ತ್ಯಾಜ್ಯ ವಿಲೇವಾರಿ ಕುರಿತು ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಬೇಕು. ಜೊತೆಗೆ ಈ ಸಭೆಯಲ್ಲಿ ಗ್ರಾ.ಪಂ ಅಭಿವೃದ್ದಿ ಯೋಜನೆಗಳ ಕ್ರಿಯಾ ಯೋಜನೆ ಸಿದ್ದಪಡಿಸಬೇಕಿದೆ ಹಾಗೂ ಆಜಾದಿ ಕಿ ಅಮೃತ್ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಪಾದಯಾತ್ರೆ, ಯೋಗಥಾನ್ ಮತ್ತು ಮ್ಯಾರಥಾನ್‍ಗಳನ್ನು ಆಯೋಜಿಸಲು ಕ್ರಿಯಾ ಯೋಜನೆ ಮಾಡಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಅವರು ಪೋಷಣ್ ಅಭಿಯಾನದ ರೂಪುರೇಷೆಗಳನ್ನು ವಿವರಿಸಿದರು.
ಪೋಷಣ್ ಪಕ್ವಾಡ್ : ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಅಪೌಷ್ಟಿಕತೆಯಿಂದಾಗಿ ಹೆಚ್ಚುತ್ತಿರುವ ಸಾವು-ನೋವು ತಡೆಯುವ ಉದ್ದೇಶದಿಂದ ಮಾರ್ಚ್ 16 ರಿಂದ 31 ರವರೆಗೆ ವಿವಿಧ ದಿನಗಳಲ್ಲಿ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಪಕ್ವಾಡ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿ.ಪಂ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಹೇಳಿದರು.
ಮಂಗಳವಾರ ಕೆಡಿಪಿ ಸಭೆಗೂ ಮುನ್ನ ಆಯೋಜಿಸಲಾಗಿದ್ದ ಪೋಷಣ್ ಪಕ್ವಾಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಇವರಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಅವರನ್ನು ರಕ್ತಹೀನತೆ ಮತ್ತು ಇತರೆ ಆರೋಗ್ಯ ಸಮಸ್ಯೆಯಿಂದ ಕಾಪಾಡಬೇಕಿದೆ. ಗ್ರಾಮಗಳಿಗೆ ಮೊದಲನೇ ಆದ್ಯತೆ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ತೋಟಗಾರಿಕೆ ಇಲಾಖೆಯಿಂದ ಪೌಷ್ಟಿಕಾಂಶಯುಕ್ತ ಹಣ್ಣು, ತರಕಾರಿ ಗಿಡಗಳನ್ನು ನೀಡಲಾಗುವುದು. ಈ ಗಿಡಗಳನ್ನು ನೆಟ್ಟು ಪೋಷಿಸಿ ಫಲ ಪಡೆಯಬೇಕು ಹಾಗೂ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಪೋಷಣ್ ಅಭಿಯಾನದ ಕುರಿತು ಅರಿವು ಮೂಡಿಸಬೇಕೆಂದರು.
ಜಿ.ಪಂ. ಸಿಇಓ ಡಾ.ವಿಜಯ ಮಹಾಂತೇಶ ಬಿ.ದಾನಮ್ಮನವರ ಮಾತನಾಡಿ, ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಕಡಿಮೆ ಮಾಡುವ ಉದ್ದೇಶದಿಂದ ಈ ಅಭಿಯಾನವನ್ನು ಆರೋಗ್ಯ, ಆಯುಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೈಗೊಳ್ಳಲಾಗಿದೆ ಎಂದರು.
ಅಂಗನವಾಡಿ ಆವರಣದಲ್ಲಿ ಔಷಧೀಯ ಹಾಗೂ ಹಣ್ಣಿನ ಕನಿಷ್ಟ 4 ಗಿಡಗಳನ್ನು ನೆಡಬೇಕು ಅಪೌಷ್ಟಿಕತೆ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು. ಆಯುಷ್ ಇಲಾಖೆಯಿಂದ ಯೋಗದ ಮಹತ್ವದ ಬಗ್ಗೆ ತಿಳಸಬೇಕು ಎಂದರು.