ದಾವಣಗೆರೆ, ಮಾ.13- ಮಹಿಳೆಯರು ಪುರುಷರಂತೆ ಉಡುಪು ಬದಲಿಸಿದಾಕ್ಷಣ ಮನೋಭಾವವೂ ಬದಲಾಗಿದೆ ಎಂದರ್ಥವಲ್ಲ. ಯಾರನ್ನೂ ಅವಲಂಬಿಸದೇ, ತನ್ನನ್ನು ತಾನು ರಕ್ಷಿಸಿಕೊಂಡು ಸ್ವಾವಲಂಬಿಗಳಾಗಿ ಬದುಕುವುದನ್ನು ಕಲಿಯಬೇಕು ಎಂದು ಹಾವೇರಿಯ ಶ್ರೀ ಶಿವಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಪುಷ್ಪಾವತಿ ಸಾಲವಾಡಿಮಠ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಸ.ಪ್ರ.ದ.ಕಾಲೇಜು ಹಾಗೂ ಕಸ್ತೂರಬಾ ಸಮಾಜದ ಸಹಯೋಗದಲ್ಲಿ ಕಾಲೇಜಿನ ನಿವೇ ದಿತಾ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳ ಲಾಗಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾ ಚರಣೆ ಅಂಗವಾಗಿ ಚಿತ್ರದುರ್ಗ ನಾಗತಿ ಗಂಡೋ ಬಳವ್ವ ಕೃತಿ ಪರಿಚಯ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗ ಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಗಂಡು ಮಗು ಹುಟ್ಟಿದರೆ ಪೇಡಾ ಹಂಚುವ, ಹೆಣ್ಣು ಮಗು ಜನಿಸಿದರೆ ಜಿಲೇಬಿ ಹಂಚುವ ಸಮಾಜದಲ್ಲಿ ಇಂದಿಗೂ ಅಸಮಾನತೆ ಕಾಣುತ್ತಿದ್ದೇವೆ. ಯಾವ ಮಹಿಳೆಯೂ ತಾನು ಹೆಣ್ಣಾಗಬೇಕೆಂದು ಅರ್ಜಿ ಹಾಕಿಕೊಂಡು ಜನಿಸಿರುವುದಿಲ್ಲ. ಆರೋಗ್ಯ ಪೂರ್ಣ ಸಮಾಜಕ್ಕೆ ಗಂಡು-ಹೆಣ್ಣು ಇಬ್ಬರೂ ಮುಖ್ಯ. ಈ ಬಗ್ಗೆ ವಿದ್ಯಾರ್ಥಿನಿಯರು ಚಿಂತಿಸಬೇಕು. ತಮ್ಮ ಮೇಲೆ ತಮಗೆ ಗೌರವ ಹೊಂದಿರಬೇಕು ಎಂದರು.
ಚಿತ್ರದುರ್ಗ ನಾಗತಿ ಗಂಡೋಬಳವ್ವ ಕೃತಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಅವರು, ಇಂತಹ ಕೃತಿಗಳನ್ನು ಹಾಗೂ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವಂತಹ ಚಿತ್ರಗಳನ್ನು ನೋಡುವಂತೆ ಸಲಹೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯರಾದ ಡಾ.ಶಕುಂತಲಾ ಎನ್. ಅಧ್ಯಕ್ಷತೆ ವಹಿಸಿದ್ದರು. ಧ.ರಾ.ಮ. ವಿಜ್ಞಾನ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಪ್ರೊ.ಶಕುಂತಲ ಗುರುಸಿದ್ಧಯ್ಯ, ಕಸ್ತೂರಬಾ ಸಮಾಜದ ಕಾರ್ಯದರ್ಶಿ ಉಜ್ವಲಾ ಸುಭಾಷ್, ಗೌರವ ಅಧ್ಯಕ್ಷರಾದ ಸರೋಜ ಚಂದ್ರಶೇಖರ್, ಕಾಲೇಜಿನ ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ.ಕಾವ್ಯಶ್ರೀ ಜಿ, ಸಹಾಯಕ ಪ್ರಾಧ್ಯಾಪಕಿ ವಿದ್ಯಾ ಕೆ.ಬಿ., ಕಚೇರಿ ಅಧೀಕ್ಷಕ ಶೇಷಪ್ಪ ಟಿ., ಸಾಹಿತಿ ಸತ್ಯಭಾಮ, ಹರಿಹರ ಎಸ್.ಜೆ.ವಿ.ಪಿ. ಕಾಲೇಜು ಪ್ರಾಂಶುಪಾಲ ಕೆ.ಎಂ. ರುದ್ರಮುನಿ ಸ್ವಾಮಿ, ಪ್ರೊ.ಜಿ.ಆರ್. ಹಿರೇಮಠ ಹಾಗೂ ಇತರರು ಉಪಸ್ಥಿತರಿದ್ದರು.
ಬಹುಮಾನ ವಿತರಣೆ : ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಎಸ್.ಎ. ಕಾವ್ಯ ಪ್ರಥಮ, ವೈ.ವಿ. ವಿದ್ಯಾ ದ್ವಿತೀಯ ಹಾಗೂ ಎಂ.ಎಸ್. ಲಕ್ಷ್ಮಿ ತೃತೀಯ ಬಹುಮಾನ ಪಡೆದರು. ಕಸ್ತೂರಬಾ ಸಮಾಜದ ಗೌರವಾಧ್ಯಕ್ಷೆ ಸರೋಜ ಚಂದ್ರಶೇಖರ್ ಬಹುಮಾನ ವಿತರಿಸಿದರು.