ಆದಿಜಾಂಬವ-ಮಾದಾರ ಚನ್ನಯ್ಯ ಪೀಠಗಳ ನಡುವೆ ಭಿನ್ನಾಭಿಪ್ರಾಯವಿಲ್ಲ : ಆದಿಜಾಂಬವ ಪೀಠದ ಷಡಾಕ್ಷರಿಮುನಿ ಶ್ರೀ
ದಾವಣಗೆರೆ, ಮಾ.7- ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿಗೆ ನ್ಯಾ. ಸದಾಶಿವ ಆಯೋಗ ನೀಡಿರುವ ಒಳ ಮೀಸಲಾತಿ ವರದಿಗೆ ಆಗ್ರಹಿಸಿ ಶೀಘ್ರವೇ ಹರಿಹರದಿಂದ-ಬೆಂಗಳೂರಿಗೆ ಬೃಹತ್ ಪಾದಯಾತ್ರೆ ನಡೆಯಲಿದ್ದು, ಈ ವಿಚಾರದಲ್ಲಿ ಆದಿಜಾಂಬವ ಪೀಠ ಮತ್ತು ಮಾದಾರ ಚನ್ನಯ್ಯ ಸ್ವಾಮೀಜಿ ಪೀಠಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹಿರಿಯೂರಿನ ಕೋಡಿಹಳ್ಳಿ ಆದಿಜಾಂಬವ ಪೀಠದ ಶ್ರೀ ಷಡಾಕ್ಷರಿ ಮುನಿ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.
ಅವರು, ಇಂದು ನಗರದ ಎಸ್‍ಪಿಎಸ್ ನಗರದ ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗಾಗಿ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಹರಿಹರದಿಂದ ರಾಜ್ಯ ರಾಜಧಾನಿವರೆಗೆ ಪಾದಯಾತ್ರೆ ಪ್ರಾರಂಭಿಸಿದರೆ ಸರ್ಕಾರಕ್ಕೆ ನಮ್ಮ ಕೂಗು ಮುಟ್ಟುವ ತನಕ ಹೋರಾಟ ಮುಂದುವರೆಯಲಿದೆ. ಪಾದಯಾತ್ರೆಗೆ ಸಂಬಂಧಿಸಿದಂತೆ ಇಬ್ಬರು ಶ್ರೀಗಳು ಚರ್ಚಿಸುತ್ತೇವೆ. ಪಾದಯಾತ್ರೆ ನಡೆಸುವುದು ಖಚಿತ ಎಂದು ಹೇಳಿದರು.
ಈಗ ಸಮಯ ಬಹಳ ಕಡಿಮೆ ಇದೆ. ಸಮಾಜದ ಹಿರಿಯರು, ಎಲ್ಲಾ ಮುಖಂಡರೊಂದಿಗೆ ಮತ್ತೊಮ್ಮೆ ಸಭೆ ನಡೆಸಿ, ಪಾದಯಾತ್ರೆಯ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು. ಪಾದಯಾತ್ರೆ ಯಾವಾಗ ಶುರುವಾದರೂ ಸಮಾಜ ಹೋರಾಟಕ್ಕೆ ಸಜ್ಜಾಗಿರಬೇಕು. ಪಾದಯಾತ್ರೆ ಮುಖೇನ ನಮಗೆ ಸಿಗಬೇಕಾದ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು. ಒಳಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸದಾಶಿವ ಆಯೋಗವು ಹಲವಾರು ದಿನ ವಿಷಯ ಸಂಗ್ರಹಿಸಿ ಸರ್ಕಾರಕ್ಕೆ ನಿಖರವಾದ ಮಾಹಿತಿ ನೀಡಿದೆ. ಆದರೂ, ಸರ್ಕಾರಗಳು ವರದಿ ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿವೆ ಎಂದರು.
ನಮ್ಮ ಸಮುದಾಯಕ್ಕೆ ಎಲ್ಲಾ ಕ್ಷೇತ್ರಗಳಲ್ಲಿ ಅನ್ಯಾಯವಾಗಿದೆ. ಹೋರಾಟದ ಮುಖೇನ ನಮ್ಮ ಹಕ್ಕು ಪಡೆಯುವ ಅನಿವಾರ್ಯತೆಯೂ ಇದೆ ಎಂಬುದನ್ನು ಸಮಾಜ ಅರಿಯಬೇಕು. ಹೀಗಾಗಿ, ನಮಗೆ ಸಿಗಬೇಕಾದ ನ್ಯಾಯಕ್ಕಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ. ನಮ್ಮ ಸಮುದಾಯದ ಸ್ವಾಮಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದು, ಸಮಾಜದ ಪ್ರತಿಯೊಬ್ಬರೂ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದರು.
ಶಾಸಕ ಪ್ರೊ. ಎನ್. ಲಿಂಗಣ್ಣ ಮಾತನಾಡಿ, ಸಾಮಾಜಿಕ ಮತ್ತು ಆರ್ಥಿಕ, ಔದ್ಯೋಗಿಕವಾಗಿ ಅತಿಯಾಗಿ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಲು ಸದಾಶಿವ ಆಯೋಗ ಒಳಮೀಸಲಾತಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿದೆ. ನಮ್ಮ ಸಮುದಾಯ ಹೋರಾಟ ಮಾಡಿದರೂ ಸಹ ಯಾವುದೇ ಸರ್ಕಾರಗಳು ಕಾಳಜಿ ವಹಿಸಿಲ್ಲ. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಒಳ ಮೀಸಲಾತಿ ಜಾರಿ ಸಂಬಂಧ ಸಮುದಾಯದ ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ. ಅದರಂತೆ ನಮ್ಮ ಸಮುದಾಯದ ಸ್ವಾಮಿಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಒತ್ತಡ ಹಾಕಿ ಒಗ್ಗಟ್ಟಿನಿಂದ ನಡೆದರೆ ಖಂಡಿತವಾಗಿ ನಾವು ಯಶಸ್ಸು ಕಾಣುತ್ತೇವೆ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಪಾಲಿಕೆ ಮಾಜಿ ಸದಸ್ಯ ಎಂ. ಹಾಲೇಶ್ ಮಾತನಾಡಿ, ಜನಪ್ರತಿನಿಧಿಗಳು ಕಡ್ಡಾಯವಾಗಿ ಹೋರಾಟದಲ್ಲಿ ಭಾಗವಹಿಸಬೇಕು. ಈ ಸಂಬಂಧ ಸಮುದಾಯದ ಸ್ವಾಮಿಗಳು ಜನಪ್ರತಿ ನಿಧಿಗಳಿಗೆ ಕರೆ ಕೊಡಬೇಕು. ಒಳಮೀಸಲಾತಿ ಜಾರಿಯಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ಅವರು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದರು. ಆದರೆ ಸಂಪುಟದಲ್ಲಿ ಅವರಿಗೆ ಬೆಂಬಲ ಸಿಗಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬೆಂಬಲ ನೀಡಿದ್ದರು ಎಂದರು.
ಸಭೆಯಲ್ಲಿ ತಾ.ಪಂ. ಸದಸ್ಯ ಆಲೂರು ನಿಂಗರಾಜ್, ಡಾ. ಹೆಚ್. ವಿಶ್ವನಾಥ, ಸೋಮಲಾಪುರ ಹನುಮಂತಪ್ಪ, ಹಾವೇರಿ ಜಿ.ಪಂ. ಸದಸ್ಯ ಪರಮೇಶಪ್ಪ ಮೇಲ್ಮನಿ, ಬಿ.ಎಂ. ಈಶ್ವರ್, ಎಸ್. ಮಲ್ಲಿಕಾರ್ಜುನ್, ಬೇತೂರು ಮಂಜುನಾಥ, ಪತ್ರಕರ್ತ ಅವಾಂತರ ದುಗ್ಗಪ್ಪ, ಒಳ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಹೆಚ್. ಹುಲಿಗೇಶ್, ಗೌರವಾಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಮಂಜು ಪಂಜು, ಅವಿನಾಶ್ ಅಭಿ, ಮಂಜುನಾಥ ಕುಂದುವಾಡ, ವಕೀಲ ಹಲಗೇರಿ ಮಂಜಪ್ಪ, ಡಿ.ಸುರೇಶ್, ಎಂ.ರವಿ ಕೆಟಿಜೆ ನಗರ, ಬಿ.ಆನಂದ್ ಕೆಟಿಜೆ ನಗರ, ನಿಂಗರಾಜ ರೆಡ್ಡಿ, ಕೃಷ್ಣಮೂರ್ತಿ, ವಾಸುದೇವ, ಮಾದಿಗ ದಂಡೋರ ಸಮಿತಿಯ ಎಚ್.ಸಿ. ಗುಡ್ಡಪ್ಪ, ಶಂಕರ್, ಹಾಲೇಶ, ಮಂಜುನಾಥ್, ಆನಂದ್, ಹುಲಿಗೇಶ್, ದಂಡೇಶ, ಅಭಿ, ರಾಜು, ರವಿಕುಮಾರ, ತಿಪ್ಪೇಶಿ ಹೋರಾಟ ಸಮಿತಿಯ ಹುಲಿಗೇಶ್, ಆದಾಪುರದ ನಾಗರಾಜ್
ಹಾಗೂ ಇತರರಿದ್ದರು.