ಬಲಿಷ್ಠ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಕೊಡುಗೆ ಮುಖ್ಯ

ಎಆರ್‌ಜಿ ಕಾಲೇಜಿನ ಸಮಾರಂಭದಲ್ಲಿ ದಾವಣಗೆರೆ ವಿವಿ ಆಡಳಿತ ಕುಲಸಚಿವರಾದ ಪ್ರೊ. ಗಾಯತ್ರಿ

ದಾವಣಗೆರೆ, ಮಾ. 5- ಪಠ್ಯ ಪೂರಕ ಚಟುವಟಿಕೆಗಳು ಪಠ್ಯ ಚಟುವಟಿಕೆಗಳಿಗೆ ಪ್ರೇರಕ ಮತ್ತು ಶಕ್ತಿ ವರ್ಧಕ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜು ವಿದ್ಯಾರ್ಥಿಗಳಿಗೆ ತಿಳಿಸಿದರು.

ಅವರು, ನಗರದ ಎಆರ್ ಜಿ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ 2020-21ನೇ ಸಾಲಿನ ಎನ್ ಎಸ್ ಎಸ್, ಎನ್ ಸಿಸಿ, ಯುವ ರೆಡ್ ಕ್ರಾಸ್, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 

ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಎನ್.ಎಸ್.ಎಸ್, ಎನ್.ಸಿ.ಸಿ., ಯುವ ರೆಡ್ ಕ್ರಾಸ್ ನಲ್ಲಿ ಚೈತನ್ಯದಿಂದ ಭಾಗವಹಿಸಿದಾಗ ಪಠ್ಯ ಚಟುವಟಿಕೆಯಲ್ಲಿ ಚೆನ್ನಾಗಿ ಓದಿ ಸಾಧನೆ ಕಾಣಬಹುದು. ದೈಹಿಕ ಮತ್ತು ಮಾನಸಿಕ ಸದೃಢ ಆರೋಗ್ಯಕ್ಕೆ ಪಠ್ಯೇತರ ಚಟುವಟಿಕೆಗಳು ಅವಶ್ಯಕ. ಕೇವಲ ಓದಿಗಷ್ಟೇ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವಂತೆ ಸಲಹೆ ನೀಡಿದರು.

ವಿಜ್ಞಾನ ಎಂಬುದು ಪ್ರತಿ ವ್ಯಕ್ತಿಯ ಅಂತರ್ಗತವಾದ ಶಕ್ತಿ. ವಿಜ್ಞಾನ ಎಂಬುದು ಸತ್ಯ. ಭಾಷೆಗಳು, ವೇದ, ಪುರಾಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸತ್ಯ ಅಡಗಿದೆ. ಸತ್ಯ ಶೋಧನೆಯೇ ಜೀವನದ ಅಂತರಾಳ. ಪುನರಾವರ್ತನೆ, ಸಂಶೋಧನೆ, ಪ್ರಯೋಗಗಳ ಮೂಲಕ ಸತ್ಯ ಶೋಧನೆ ಮಾಡಲಾಗುತ್ತದೆ. ಇದರಿಂದ ನಮ್ಮ ಜೀವನ ಶೈಲಿಯೇ ಸುಧಾರಣೆ ಕಾಣಲಿದೆ ಎಂದು ಅಭಿಪ್ರಾಯಪಟ್ಟರು.

ವಿಜ್ಞಾನದಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕವೂ ಇದೆ. ನಾವು ಬಳಸಿಕೊಳ್ಳುವುದರ ಮೇಲೆ ಅದರ ಪರಿಣಾಮ ಬೀರಲಿದೆ. ಎಲ್ಲಾ ವಿದ್ಯಾರ್ಥಿಗಳಲ್ಲೂ ವೈಜ್ಞಾನಿಕ ಮನೋಭಾವನೆ ಅಳವಡಿಸಿಕೊಳ್ಳಲು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತಿದೆ. ವಿಜ್ಞಾನ ದಿನಾಚರಣೆ ಕೇವಲ ವಿಜ್ಞಾನ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ ಎಂದು ಹೇಳಿದರು.

ಜೀವನದ 24 ಗಂಟೆಗಳ ಸಮಯವನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳಲು ವೇಳಾ ಪಟ್ಟಿ ಸಿದ್ಧಪಡಿಸಿಕೊಂಡು ಅಂತೆಯೇ ಅಳವಡಿಸಿಕೊಂಡರೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಜೊತೆಗೆ ಭವಿಷ್ಯ ಉಜ್ವಲವಾಗಲಿದೆ. ಮೊಬೈಲ್ ಸದ್ಬಳಕೆ ಮಾಡಿಕೊಳ್ಳಿ. ಇಡೀ ಜೀವನವನ್ನೇ ಅದರಲ್ಲೇ ಕಳೆಯಬೇಡಿ ಎಂದು ಕಿವಿಮಾತು ಹೇಳಿದರು.

ನೀವು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದರೆ ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಬಹುದಾಗಿದೆ. ಬಲಿಷ್ಠ ಸಮಾಜ ನಿರ್ಮಾಣಕ್ಕೆ ನಿಮ್ಮಗಳ ಕೊಡುಗೆ ಬಹಳ ಮುಖ್ಯವಾಗಿದೆ. ನಿಮ್ಮ ಆರೋಗ್ಯ, ಧನಾತ್ಮಕ ಚಿಂತನೆ, ಪೋಷಕರನ್ನು ಪಾಲನೆ ಮಾಡುವುದು, ಒಡನಾಡಿಗಳ ಜೊತೆಗೆ ಸಕಾರಾತ್ಮಕವಾಗಿ ವರ್ತಿಸುವುದು, ಚೈತನ್ಯ ಶೀಲರಾಗಿರುವುದೇ ಸಮಾಜಕ್ಕೆ ನೀವು ನೀಡುವ ಕೊಡುಗೆಯಾಗಿದೆ ಎಂದು ತಿಳಿ ಹೇಳಿದರು.

ಇದೇ ವೇಳೆ ಕಾಲೇಜಿನ ಎಂ.ಕಾಂ. ನಲ್ಲಿ ರಾಂಕ್ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಎಂ.ಎಸ್. ಅಮೃತ ಹಾಗೂ ಎಸ್. ಸುಪ್ರಿತ ಅವರುಗಳನ್ನು ಪುರಸ್ಕರಿಸಿ ಅಭಿನಂದಿಸಲಾಯಿತು. 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎಸ್. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿ ನ ಆಡಳಿತ ಸಮಿತಿ ಅಧ್ಯಕ್ಷ ಎ.ಜಿ. ಮಂಜುನಾಥ, ಎಆರ್ ಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಬೊಮ್ಮಣ್ಣ ಸೇರಿದಂತೆ ಇತರರು ಇದ್ದರು. ಪ್ರೊ. ಮಲ್ಲಿಕಾರ್ಜುನ ಹಲಸಂಗಿ ಸ್ವಾಗತಿಸಿದರು.

error: Content is protected !!