ಕೆಲವೇ ಸದಸ್ಯರ ಹಿಡಿತದಲ್ಲಿ ಸಾಮಾನ್ಯ ಸಭೆ

ಮಲೇಬೆನ್ನೂರು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅಸಮಾಧಾನಗೊಂಡ ಸದಸ್ಯರು

ಮಲೇಬೆನ್ನೂರು, ಮಾ.5- ಇಲ್ಲಿನ ಪುರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ನಾಹೀದ ಅಂಜುಂ ಸೈಯದ್ ಇಸ್ರಾರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಕೆಲವೇ ಕೆಲವು ಸದಸ್ಯರು ಪ್ರತಿ ಸಭೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಿರುವುದಕ್ಕೆ ಉಳಿದ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೇವಲ ನೀವಷ್ಟೇ ಸದಸ್ಯರಲ್ಲ. ನಾವೂ ಕೂಡ ಚುನಾವಣೆಯಲ್ಲಿ ಗೆದ್ದು ಬಂದಿದ್ದೇವೆ. ನಮಗೂ ಮಾತನಾಡಲು ಬಿಡಿ. ಸಮಸ್ಯೆಗಳ ಕುರಿತು ಅಧ್ಯಕ್ಷರು, ನಾವು ಅಧಿಕಾರಿಗಳನ್ನು ಕೇಳಿದರೆ ನೀವೇ ಉತ್ತರ ಕೊಡುತ್ತೀರಿ ಎಂದು ಸದಸ್ಯ ಮಹಾಲಿಂಗಪ್ಪ ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ದನಿ ಗೂಡಿಸಿದ ಹಿರಿಯ ಸದಸ್ಯ ಮಾಸಣಗಿ ಶೇಖರಪ್ಪ, ಬರೀ ನೀವೇ ಎಲ್ಲಾ ಮಾತನಾಡಿದರೆ ನಾವೇಕೆ ಇಲ್ಲಿಗೆ ಬರಬೇಕು. ಸಭೆಯಲ್ಲಿ ಬಾಯಿ ಮಾಡಿ ಮಾತನಾಡಿದರೆ ಸಾಲದು. ಸಭೆಯ ಉದ್ದೇಶ ಮತ್ತು ಶಿಸ್ತನ್ನು ತಿಳಿದುಕೊಂಡು ಬೇರೆಯವರ ಭಾವನೆಗಳಿಗೆ ಬೆಲೆ ಕೊಡಿ ಎಂದರು.

ಆಕ್ರೋಶ: ಸಂತೆ ಮತ್ತು ದಿನವಹಿ ಸುಂಕವನ್ನು ಪುರಸಭೆಯ ಆದೇಶ ಇಲ್ಲದೆ ವಸೂಲಿ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸುವಂತೆ ಸದಸ್ಯ ಬಿ.ಎಂ. ಚನ್ನೇಶ್ ಸ್ವಾಮಿ ಹೇಳಿದಾಗ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಸ್ವಾಮಿ, ಸದಸ್ಯ ಮಹಾಲಿಂಗಪ್ಪ ಬೆಂಬಲಿಸಿದರು.

ವಿಷಯ ಗಂಭೀರವಾಗುತ್ತಿದ್ದಂತೆಯೇ ಸದಸ್ಯ ಬಿ. ಸುರೇಶ್ ಮಧ್ಯ ಪ್ರವೇಶಿಸಿ, ಟೆಂಡರ್ ಆಗುವವರೆಗೂ ಸುಂಕ ವಸೂಲಿ ಮಾಡುವುದಕ್ಕೆ ಹೇಳಿ. ಅವರಿಂದ 70 ಸಾವಿರ ರೂ. ಹಣವನ್ನು ಈ ಹಿಂದೆ ಇದ್ದ ಮುಖ್ಯಾಧಿಕಾರಿಗಳಿಗೆ ಕೊಟ್ಟಿದ್ದೆವು. ಹಣ ಕೊಟ್ಟ ಬಗ್ಗೆ ನಮ್ಮಲ್ಲಿ ಯಾವುದೇ ರಸೀದಿ ಇಲ್ಲ ಎಂದಾಗ ಪ್ರಭಾರ ಮುಖ್ಯಾಧಿಕಾರಿ ಉದಯ ಕುಮಾರ್ ಉತ್ತರಿಸಿ, ಇದಕ್ಕೆ ನಾವು ಜವಾಬ್ದಾರರಲ್ಲ ಎಂದರು.

ಆಗ ಸದಸ್ಯ ಯೂಸೂಫ್ ಎದ್ದು ನಿಂತು ಸಂತೆ ಸುಂಕ ವಸೂಲಿ ಮಾಡುವ ಬಗ್ಗೆ ನಾವೇ 3-4 ಜನ ಸದಸ್ಯರು ತೀರ್ಮಾನ ಮಾಡಿದ್ದೆವು. ಈಗ ಆ ಹಣವನ್ನು ಪುರಸಭೆಗೆ ನಾವೇ ಜಮಾ ಮಾಡುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದಾಗ ಚನ್ನೇಶ್ ಸ್ವಾಮಿ ಸುಮ್ಮನಾದರು.

ವಿಡಿಯೋ ಮಾಡಿಸಿ: ಪುರಸಭೆಯ ಆಡಳಿತಾತ್ಮಕ ಕೆಲಸಗಳಲ್ಲಿ ಸಿಬ್ಬಂದಿಗಳಲ್ಲದೇ, ಬೇರೆಯವರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಗೌಪ್ಯತೆ ಉಳಿಯುವುದಿಲ್ಲ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದ ಚನ್ನೇಶ್ ಸ್ವಾಮಿ, ಪ್ರತಿ ಸಭೆ ನಡೆಯುವಾಗ ವಿಡಿಯೋ ಮಾಡಿಸಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಉದಯಕುಮಾರ್ ಬೇರೆಯವರು ಕಾರ್ಯನಿರ್ವಹಿಸುತ್ತಿರುವುದು ಗಮನಕ್ಕೆ ಬಂದಿಲ್ಲ. ಇದ್ದರೆ ಕ್ರಮ ಕೈಗೊಳ್ಳುತ್ತೇನೆ. ಮುಂದಿನ ಸಭೆಯಿಂದ ವಿಡಿಯೋ ಪ್ರಾರಂಭಿಸುತ್ತೇವೆ ಎಂದರು.

ವಾಗ್ವಾದ: ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಬಾಪೂಜಿ ಹಾಲ್ ದುರಸ್ತಿ ಮಾಡಿಸುವ ವಿಚಾರದಲ್ಲಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಯೂಸೂಫ್, ದಾದಾವಲಿ ಅವರು, ಬಾಪೂಜಿ ಹಾಲ್ ಕಟ್ಟಡವನ್ನು ಪುರಸಬೆ ಹೆಸರಿಗೆ ಮಾಡಿಸಿಕೊಂಡು, ನಂತರ ದುರಸ್ತಿ ಮಾಡಿಸೋಣ ಎಂದು ಒತ್ತಾಯಿಸಿದರು.

ತ್ಯಾಜ್ಯ ಹಾಕುವುದನ್ನು ನಿಲ್ಲಿಸಿ: ಪಟ್ಟಣದ ಘನತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಹೊಲದಲ್ಲಿ ಗಬ್ಬು ವಾಸನೆಯಿಂದಾಗಿ ಓಡಾಡುವಂತಿಲ್ಲ. ಅಕ್ಕಪಕ್ಕದ ಹೊಲಗಳಿಗೆ ಪ್ಲಾಸ್ಟಿಕ್ ಹಾಗೂ ಹಗುರವಾದ ವಸ್ತುಗಳು ಹಾರಿ ಹೋಗುತ್ತಿದ್ದು, ಅವರು ಗಲಾಟೆ ಮಾಡುತ್ತಿದ್ದಾರೆ. ಹೊಲದ ಸುತ್ತಲೂ ಫೆನ್ಸಿಂಗ್ ಮಾಡಿಸಿ. ಹಸಿ ಕಸ, ಒಣ ಕಸವನ್ನು ಬೇರ್ಪಡಿಸುವಂತೆ ತಾಕೀತು ಮಾಡಿ ಮತ್ತು ಹೊಲದ ಬಾಡಿಗೆ ಹೆಚ್ಚಿಸಿ, ಇಲ್ಲವಾದಲ್ಲಿ ಅಲ್ಲಿ ತ್ಯಾಜ್ಯ ಹಾಕುವುದನ್ನು ನಿಲ್ಲಿಸಿ ಎಂದು ಸದಸ್ಯ ಬಿ. ಸುರೇಶ್ ಹೇಳಿದರು.

ಹೊಲದ ಬಾಡಿಗೆ ಹೆಚ್ಚಳ ಮಾಡುವುದಿಲ್ಲ. ಕಸ ಹಾಕಲು ಅವಕಾಶ ಕೊಡುವುದಾದರೆ ಕೊಡಿ. ಇಲ್ಲವಾದರೆ ಬಿಡಿ ಸರ್ಕಾರವೇ ಜಾಗ ನಿಗದಿ ಮಾಡುತ್ತದೆ ಎಂದು ಯೂಸೂಫ್ ಹೇಳಿದಾಗ, ಸುರೇಶ್ ಅವರು ಬಾಡಿಗೆ ಅಗ್ರಿಮೆಂಟ್ ಮಾಡಿಕೊಂಡು ಕಸ ಹಾಕಿ, 3 ವರ್ಷಗಳಿಗೊಮ್ಮೆ ಬಾಡಿಗೆ ಹೆಚ್ಚಿಸಿ ಎಂದು ಆಗ್ರಹಿಸಿದರು.

 ಮಹಿಳಾ ಸದಸ್ಯ ಸಾಕಮ್ಮ ರವಿಕುಮಾರ್ ಮಾತನಾಡಿ ಸಾಮಾನ್ಯ ವರ್ಗದವರಿಗೆ ಕೊಡಬೇಕಿದ್ದ 9 ಹೊಲಿಗೆ ಯಂತ್ರಗಳು ಹಾಗೆಯೇ ಇದ್ದು, ಅವು ತುಕ್ಕು ಹಿಡಿಯುತ್ತಿವೆ. ಕೂಡಲೇ ವಿತರಿಸಿ ಎಂದಾಗ ಮುಖ್ಯಾಧಿಕಾರಿಗಳು ವಿತರಣೆಗೆ ಸೂಚಿಸಿದರು.

ನಾಮಿನಿ ಸದಸ್ಯ ಎ.ಕೆ. ಲೋಕೇಶ್ ಅವರು ಎ.ಕೆ. ಮತ್ತು ಭೋವಿ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಸಭೆಯ ಆರಂಭದಲ್ಲಿ ಹಿರಿಯ ಆರೋಗ್ಯಾಧಿಕಾರಿ ಗುರುಪ್ರಸಾದ್, 2020 ರ ಸಾಲಿನ ಸಾಮಾನ್ಯ ಸಭೆಯ ನಡಾವಳಿಯ ವರದಿ ಮತ್ತು ಜನನ, ಮರಣ, ನೋಂದಣಿ ಮಾಹಿತಿಯನ್ನು ಸಭೆಗೆ ತಿಳಿಸಿದರು. ಜನವರಿ ತಿಂಗಳ ಜಮಾ-ಖರ್ಚಿನ ವಿವರವನ್ನು ಸದಸ್ಯರ ಗಮನಕ್ಕೆ ತಂದಾಗ ಲೆಕ್ಕ ಸರಿಯಾಗಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾ.ಪಂ. ಇದ್ದಾಗ 2014-15ನೇ ಸಾಲಿನಲ್ಲಿ ಡಿಆರ್‌ಜಿಎಫ್ ಯೋಜನೆಯಡಿ ಬಂದಿದ್ದ 13  ಲಕ್ಷ ರೂಪಾಯಿ ಅನುದಾನ ಹಾಗೆಯೇ ಇದ್ದು, ಹಳೇ ಕಾಮಗಾರಿ ಪಟ್ಟಿ ರದ್ದು ಮಾಡಿ, ಹೊಸ ಕಾಮಗಾರಿಗೆ ಬಳಸಿಕೊಳ್ಳಲು ಸಭೆ ತೀರ್ಮಾನಿಸಿತು.

ಸಭೆಯಲ್ಲಿ ಉಪಾಧ್ಯಕ್ಷೆ ಅಂಜಿನಮ್ಮ, ಸದಸ್ಯರಾದ ಪಾನಿಪೂರಿ ರಂಗನಾಥ್, ಯಶೋಧ ಲೋಕೇಶ್, ಶಶಿಕಲಾ ಕೇಶವಚಾರಿ, ಫಿರ್ದೋಸ್ ಬಾನು ಫೈಜು, ಶಮೀಮ್‌ಬಾನು, ನಾಮಿನಿ ಸದಸ್ಯರಾದ ಹೆಚ್.ಜಿ. ಮಂಜಪ್ಪ, ಪಿ.ಆರ್. ರಾಜು, ಜಿ. ವಾಸಪ್ಪ, ಸುಮಾ ಪರಮೇಶ್ವರಪ್ಪ ಹಾಗೂ ಅಧಿಕಾರಿಗಳು ಹಾಜರಿದ್ದರು.

error: Content is protected !!