ಸಕಲರ ಲೇಸ ಬಯಸುವುದೇ ನಿಜ ಧರ್ಮ: ಪಂಡಿತಾರಾಧ್ಯ ಶ್ರೀ

ಸಕಲರ ಲೇಸ ಬಯಸುವುದೇ ನಿಜ ಧರ್ಮ: ಪಂಡಿತಾರಾಧ್ಯ ಶ್ರೀ - Janathavaniಸಾಣೇಹಳ್ಳಿ, ನ.2- ಶುಭ, ಒಳಿತು, ಲೇಸು, ಮಂಗಳ ಯಾವುದೇ ಒಂದು ಜಾತಿ, ಮತ, ಪಂಥ, ಧರ್ಮಕ್ಕೆ ಸೀಮಿತವಾಗದೇ ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವುದೇ ನಿಜ ಧರ್ಮ. ಈ ತತ್ವ, ಸಿದ್ಧಾಂತಗಳ ಹಿನ್ನೆಲೆಯಲ್ಲಿ ನಾಟಕೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಶಿವ ಧ್ವಜಾರೋಹಣ ನೆರವೇರಿಸಿ, ನಂತರ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಅನೇಕ ಧರ್ಮಗಳಿವೆ. ಆ ಎಲ್ಲಾ ಧರ್ಮಗಳ ಅಂತಿಮ ಗುರಿ ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದಾಗಿದೆ. ನಡೆ, ನುಡಿ ಒಂದಾಗುವುದೇ ಧರ್ಮ. ಹಿಂಸೆ, ಮೋಸ, ವಂಚನೆಯನ್ನು ಮಾಡದೆ ತನ್ನಂತೆ  ಪರರ ಬಗೆದೊಡೆ ಅದುವೇ ಧರ್ಮ ಎಂದರು.

ತನ್ನರಿವೇ ತನಗೆ ಗುರುವಾಗಬೇಕು. ದಯೆ, ಪ್ರೀತಿ, ಸತ್ಯ, ಕರುಣೆಗಳೆಂಬ ಮೌಲ್ಯಗಳೆಲ್ಲವೂ ನಮ್ಮೊಳಗಿವೆ. ಬಾಹ್ಯ ಸಂಪತ್ತಿಗೆ ಜೋತು ಬೀಳದೆ, ಒಳಗಿನ ಜ್ಞಾನವೆಂಬ ಸಂಪತ್ತಿಗೆ ಮಾರು ಹೋಗಬೇಕೆಂದರು.

ಕನ್ನಡ ಧ್ವಜಾರೋಹಣ ನೆರವೇರಿಸಿದ ಶಿವಮೊಗ್ಗ ಬಸವ ಕೇಂದ್ರದ ಡಾ. ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಕನ್ನಡಿಗರು ಕೇವಲ ನವೆಂಬರ್ ಕನ್ನಡಿಗರಾಗುತ್ತಿರುವುದು, ಬೀದಿ ಬೀದಿಗಳಲ್ಲಿ ಕುಣಿದು ಕುಪ್ಪಳಿಸಲು ಮಾತ್ರ ಸೀಮಿತಗೊಂಡಿರುವುದು ದುರದೃಷ್ಟಕರ ಸಂಗತಿ. ಕನ್ನಡಿಗರು ನಿರಭಿಮಾನಿಗಳು ಎನ್ನುವ ಮಾತನ್ನು ಸುಳ್ಳು ಮಾಡಬೇಕಾಗಿದೆ. ತಮಿಳರ ಭಾಷಾ ಪ್ರೇಮ ಕನ್ನಡಿಗರಿಗೆ ಅನುಕರಣೀಯವಾಗಬೇಕೆಂದರು.

error: Content is protected !!